ಬೀದರ್: ಜಿಲ್ಲೆಯ ಎಲ್ಲ ಇಲಾಖೆಗಳ ನೌಕರರು ತಲಾ 100 ಜನರಿಗೆ ಕೋವಿಡ್ ಲಸಿಕೆ ಕೊಡಿಸಿ ಮೆಗಾ ಕೋವಿಡ್ ಲಸಿಕಾ ಮೇಳದ ಯಶಸ್ಸಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಲಸಿಕಾ ಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಸೆ.17ರಂದು ಮೆಗಾ ಸೂಪರ್ ಕೋವಿಡ್ ಲಸಿಕಾ ಮೇಳ ಆಯೋಜನೆಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಲಸಿಕಾ ಮೇಳದಲ್ಲಿ ಪ್ರತಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಬೇಕು. ತಲಾ ನೂರು ಜನರಿಗೆ ಲಸಿಕೆ ಕೊಡಿಸುವುದು ಹೇಗೆ ಎನ್ನುವ ಬಗ್ಗೆ ರೂಪುರೇಷೆ ಸಿದ್ಧಪಡಿಸಿ ಕಾರ್ಯ ಪ್ರವೃತ್ತರಾಗಬೇಕು. ಮೇಳದ ದಿನ ಸಂಜೆಯೊಳಗೆ ನೂರು ಜನರಿಗೆ ಲಸಿಕೆ ಕೊಡಿಸಿದ ಬಗ್ಗೆ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಜಿಲ್ಲೆಯ ಪ್ರತಿ ಇಲಾಖೆಗಳ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಇದುವರೆಗೆ ಯಾರು ಕೋವಿಡ್ ಲಸಿಕೆಯನ್ನು ಅಥವಾ ಎರಡನೇ ಡೋಸ್ ಪಡೆದಿಲ್ಲವೋ ಅಂತಹವರನ್ನು ಗುರುತಿಸಿ, ಅವರಿಗೆ ಲಸಿಕೆ ತೆಗೆದುಕೊಳ್ಳಲು ತಿಳಿಸಬೇಕು ಎಂದು ನಿರ್ದೇಶನ ನೀಡಿದರು.
ಸರ್ಕಾರಿ ಕಚೇರಿಗಳಿಗೆ ಪ್ರತಿ ದಿನ ಸಾರ್ವಜನಿಕರು ಭೇಟಿ ನೀಡುತ್ತಾರೆ. ಈ ವೇಳೆ ಅಧಿಕಾರಿಗಳು ಮತ್ತು ಸಿಬ್ಬಂದಿ ಲಸಿಕೆ ಪಡೆದ ಬಗ್ಗೆ ಅವರನ್ನು ವಿಚಾರಿಸಿ, ಪಡೆಯದವರಿಗೆ ಮನವರಿಕೆ ಮಾಡಿ ಹತ್ತಿರದ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆ ಕೊಡಿಸಬೇಕು ಎಂದು ಹೇಳಿದರು.
ಮೇಳ ಕುರಿತು ಗ್ರಾಮದ ಸಂತೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಪ್ರದೇಶಗಳಲ್ಲಿ ಡಂಗೂರ ಸಾರಬೇಕು ಎಂದು ಸೂಚಿಸಿದರು.
ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ, ಪ್ರೊಬೆಷ್‍ನರಿ ಐಎಎಸ್ ಅಧಿಕಾರಿ ಕೀರ್ತನಾ, ಜಿ.ಪಂ ಉಪ ಕಾರ್ಯದರ್ಶಿ ಸೂರ್ಯಕಾಂತ, ಮುಖ್ಯ ಯೋಜನಾಧಿಕಾರಿ ಎಸ್.ಎಸ್.ಮಠಪತಿ, ಡಿಎಚ್‍ಒ ಡಾ.ವಿ.ಜಿ.ರೆಡ್ಡಿ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್.ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.