ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಜಿ.ಪಂ. ಸಾಮಾನ್ಯ ಸಭೆ: ಅಧಿಕಾರಿಗಳ ವಿರುದ್ಧ ಸದಸ್ಯರ ಪ್ರತಿಭಟನೆ

ಜಿಲ್ಲಾ ಪಂಚಾಯಿತಿಯಲ್ಲಿ ಪಾಲನೆಯಾಗದ ಸರ್ಕಾರದ ನಿಯಮಾವಳಿ
Last Updated 10 ಸೆಪ್ಟೆಂಬರ್ 2020, 17:05 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಮಧ್ಯಾಹ್ನ 12 ಗಂಟೆಯಾದರೂ ಸಿಇಒ ಹಾಗೂ ಅಧ್ಯಕ್ಷೆ ಬಾರದ ಕಾರಣ ಸಹನೆ ಕಳೆದುಕೊಂಡ ಸದಸ್ಯರು ಪಕ್ಷ ಭೇದ ಮರೆತು ಪ್ರತಿಭಟನೆ ನಡೆಸಿದರು.

ದೇಶದೆಲ್ಲಡೆ ಕೊರೊನಾ ಸೋಂಕು ತಲ್ಲಣ ಮೂಡಿಸಿದರೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹವಾನಿಯಂತ್ರಿತ ಸಭಾಗಂಣದಲ್ಲಿ ಅಂತರ ಕಾಯ್ದುಕೊಳ್ಳದೆ ವ್ಯವಸ್ಥೆ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಕರೆದಿದ್ದ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸದಸ್ಯರು ಸರಿಯಾದ ಸಮಯಕ್ಕೆ ಹಾಜರಿದ್ದರು. ಅಧ್ಯಕ್ಷೆ ಗೀತಾ ಚಿದ್ರಿ ಹಾಗೂ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌ ಬಂದಿರಲಿಲ್ಲ. ಅಧಿಕಾರಿಗಳು, ಕೆಲ ಸದಸ್ಯೆಯರ ಪತಿಯಂದಿರು ಹಾಗೂ ಕೆಲ ಮುಖಂಡರು ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದರಿಂದ ಸದಸ್ಯರು ಆತಂಕ ವ್ಯಕ್ತಪಡಿಸಿದರು. ನೇರವಾಗಿ ಅಧ್ಯಕ್ಷೆ ಟೇಬಲ್‌ ಎದುರು ಬಂದು ತಮ್ಮ ಅಸಮಾಧಾನ ತೋಡಿಕೊಂಡರು.

ಕೋವಿಡ್‌ ನಿಯಮಾವಳಿ ಪ್ರಕಾರ ಸಭೆ, ಸಮಾರಂಭಗಳಲ್ಲಿ ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ಕೊಡುತ್ತಿದೆ. ನಿತ್ಯ ಟಿವಿ ಹಾಗೂ ಪತ್ರಿಕೆಗಳು ಸಂದೇಶ ಪ್ರಕಟಿಸುತ್ತಿವೆ. ಅಧಿಕಾರಿಗಳಿಗೆ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಜೋರಾಗಿಯೇ ಪ್ರಶ್ನಿಸಿದರು.

ಸದಸ್ಯರು ಪ್ರತಿಭಟನೆ ಶುರು ಮಾಡಿದ ಸುದ್ದಿ ತಿಳಿದ ತಕ್ಷಣ ಸಭಾಂಗಣಕ್ಕೆ ಬಂದ ಗೀತಾ ಅವರು ಸಿಇಒ ಅವರ ಬರುವಿಕೆಗಾಗಿ ವೇಟ್‌ ಮಾಡುತ್ತಿದ್ದೆ ಎಂದು ಸಮಾಜಾಯಿಸಿ ನೀಡಿದರು. ಸಿಇಒ ವಿಡಿಯೊ ಕಾನ್ಫ್‌ರನ್ಸ್‌ನಲ್ಲಿ ಇದ್ದಾರೆ. ಸಭೆ ಶುರು ಮಾಡುವಂತೆ ಸೂಚಿಸಿದ್ದಾರೆಂದು ಉಪ ಕಾರ್ಯದರ್ಶಿ ಅಧ್ಯಕ್ಷೆ ಗಮನಕ್ಕೆ ತಂದರು. ಸಿಇಒ ಇದ್ದರೆ ಸಭೆ ಮಾಡಿ, ಇಲ್ಲದಿದ್ದರೆ ಸಭೆ ನಡೆಸುವ ಅಗತ್ಯವಿಲ್ಲ ಎಂದು ಸದಸ್ಯರು ಪಟ್ಟುಹಿಡಿದರು.

ಗೀತಾ ಚಿದ್ರಿ ಅವರು ಫೋನ್‌ ಸ್ಪೀಕರ್ ಆನ್‌ ಮಾಡಿ ಸಿಇಒ ಅವರಿಗೆ ಕರೆ ಮಾಡಿ, ‘ನೀವು ಬರುವವರೆಗೂ ಸಭೆ ಆರಂಭಿಸುವುದಿಲ್ಲ. ಸಭೆ ರದ್ದಾದರೆ ನೀವೇ ಜವಾಬ್ದಾರರಾಗುತ್ತೀರಿ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣ ಚಿಕ್ಕದಾಗಿದೆ. ಜಿಲ್ಲಾ ರಂಗ ಮಂದಿರದಲ್ಲಿ ಸಭೆಗೆ ವ್ಯವಸ್ಥೆ ಮಾಡುವಂತೆ ಮೊದಲೇ ಸೂಚಿಸಿದ್ದೆ. ಆದರೆ ಸಿಇಒ ಅವರು ವ್ಯವಸ್ಥೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಸಿಇಒ ಅವರೇ ನಿಮ್ಮ ಮಾತು ಕೇಳಲಿಲ್ಲ ಅಂದರೆ ಬೇರೆ ಅಧಿಕಾರಿಗಳು ಹೇಗೆ ಮಾತು ಕೇಳಲು ಸಾಧ್ಯ. ಕೆಲವು ಅಧಿಕಾರಿಗಳು ಮೊಬೈಲ್‌ ಕರೆಗಳನ್ನೇ ಸ್ವೀಕರಿಸುವುದಿಲ್ಲ. ಸರ್ಕಾರದ ಗಾಡಿ ಹಾಗೂ ಮೊಬೈಲ್‌ ಪಡೆದು ಆರಾಮಾಗಿದ್ದಾರೆ. ಹೀಗಾದರೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಹೇಗೆ ಆಗಲು ಸಾಧ್ಯ’ ಎಂದು ಸದಸ್ಯ ಗುಂಡು ರೆಡ್ಡಿ ಪ್ರಶ್ನಿಸಿದರು.

ಮಧ್ಯಾಹ್ನ 12.10ಕ್ಕೆ ಸಿಇಒ ಸಭೆಗೆ ಬಂದರು. ಆಗ ಮತ್ತೆ ವಿಜಯಕುಮಾರ ಪಾಟೀಲ ಗಾದಗಿ, ಪ್ರಕಾಶ ಪಾಟೀಲ, ಗುಂಡು ರೆಡ್ಡಿ, ಸುಧೀರ್‌ ಕಾಡಾದೆ, ಶಕುಂತಲಾ ಬೆಲ್ದಾಳೆ, ಮಂಜುಳಾ ಸ್ವಾಮಿ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಂತರ ಕಾಯ್ದುಕೊಳ್ಳದೆ ಸಭೆ ಆಯೋಜಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಕೊರೊನಾ ಸೋಂಕು ಹರಡುವಿಕೆ ತಡೆಯಲು ಅಂತರ ಕಾಯ್ದುಕೊಳ್ಳಬೇಕು ಎನ್ನುವುದು ಎಲ್ಲರಿಗೂ ತಿಳಿಸಿದೆ. ಜಿಲ್ಲಾ ರಂಗ ಮಂದಿರದಲ್ಲಿ ಸಭೆ ನಡೆಸಬಹುದಿತ್ತು. ಐಎಎಸ್‌ ಅಧಿಕಾರಿಗೆ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲದಿದ್ದರೆ ಹೇಗೆ? ಎಂದು ಸುಧೀರ್‌ ಕಾಡಾದೆ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ನೌಕರರು 50 ವರ್ಷ ಮೇಲ್ಪಟ್ಟವರು ಇದ್ದರೆ ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಸರ್ಕಾರವೇ ಆದೇಶ ಹೊರಡಿಸಿತ್ತು. ಸಭಾಂಗಣದಲ್ಲಿ ಆರು ಅಡಿ ಸಹ ಅಂತರ ಸಹ ಕಾಯ್ದುಕೊಂಡಿಲ್ಲ. ಎಲ್ಲರೂ ಪಕ್ಕಪಕ್ಕದಲ್ಲೇ ಕುಳಿತಿದ್ದಾರೆ. ನನಗೆ ಈಗ 74 ವರ್ಷ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸದಸ್ಯರ ಪ್ರಾಣ ಪಣಕ್ಕಿಟ್ಟು ಮೋಜು ನೋಡುವ ಕೆಲಸ ಮಾಡುತ್ತಿದ್ದಾರೆ. ಅಸುರಕ್ಷಿತವಾದ ಸ್ಥಳದಲ್ಲಿ ನಾನು ಒಂದು ಕ್ಷಣವೂ ಕುಳಿತುಕೊಳ್ಳುವುದಿಲ್ಲ’ ಎಂದು ಹೇಳಿ ಪ್ರಕಾಶ ಪಾಟೀಲ ಸಭೆ ಬಹಿಷ್ಕರಿಸಿ ಹೊರಗೆ ಹೋದರು.

ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಅನುಸರಿಸದ್ದಕ್ಕೆ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸದಸ್ಯ ಆಕ್ರೋಶ ಹೆಚ್ಚುತ್ತಲೇ ಹೋದ ನಂತರ ಸಿಇಒ ಅವರು ಮಧ್ಯಾಹ್ನ 1.30ರ ವೇಳೆಗೆ ಅಧಿಕಾರಿಗಳೆಲ್ಲ ಹೊರಗೆ ಹೋಗಬೇಕು ಎಂದು ಸೂಚಿಸಿದರು. ಎಲ್ಲ ಇಲಾಖೆಯ ಅಧಿಕಾರಿಗಳು ಸಭೆಯಿಂದ ಹೊರಗೆ ಹೋದರು. ತದ ನಂತರ ಸಭೆ ಶುರುವಾಯಿತು.

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ದೊರೆಯದ ಕಾರಣ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸದಸ್ಯರು ಒಪ್ಪಿಗೆ ಸೂಚಿಸಬೇಕು ಎಂದು ಅಧ್ಯಕ್ಷೆ ಗೀತಾ ಮನವಿ ಮಾಡಿಕೊಂಡರು. ಆದರೆ, ಸದಸ್ಯರು ಹಿಂದಿನ ಸಭೆಯ ಅನುಪಾಲನಾ ವರದಿ ಓದಬೇಕು. ಕುಡಿಯುವ ನೀರಿನ ಸಮಸ್ಯೆಯಂತಹ ಗಂಭೀರ ವಿಷಯಗಳನ್ನು ಮೊದ ಚರ್ಚಿಸಬೇಕು. ಮಧ್ಯಾಹ್ನ ಬಜೆಟ್‌ ಅನುಮೋದನೆ ಪಡೆಯಬೇಕು ಎಂದು ಒತ್ತಾಯಿಸಿದರು. ಈ ವಿಷಯವಾಗಿಯೇ ಸದಸ್ಯರು, ಅಧ್ಯಕ್ಷೆ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.

ಈ ಸಂದರ್ಭದಲ್ಲಿ ಸಿಇಒ ಅವರು ಮುಖ್ಯ ಯೋಜನಾ ಅಧಿಕಾರಿ ಶರಣಯ್ಯ ಮಠಪತಿ ಅವರಿಗೆ ಬಜೆಟ್‌ ಮಾಹಿತಿ ನೀಡುವಂತೆ ಸೂಚಿಸಿದರು. ಅವರು ಬಜೆಟ್ ಪ್ರತಿ ಓದುತ್ತಿದ್ದಾಗ ಶಕುಂತಲಾ ಬೆಲ್ದಾಳೆ ಅವರು ಮಧ್ಯ ಪ್ರವೇಶಿಸಿ ಅವರ ಕೈಯಿಂದ ಪ್ರತಿಯನ್ನು ಕಿತ್ತುಕೊಂಡು ಮೇಜಿನ ಮೇಲೆ ಜೋರಾಗಿ ಇಟ್ಟು ಹೋದರು. ಅನುಪಾಲನಾ ವರದಿ ಕೊಡುವವರೆಗೂ ಬಜೆಟ್‌ಗೆ ಅನುಮೋದನೆ ನೀಡಲಾಗದು ಎಂದು ಹೇಳಿದರು.

ಸುದೀರ್ಘ ಚರ್ಚೆಯ ನಂತರ ಸದಸ್ಯರು ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷಣ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT