ಶನಿವಾರ, ಸೆಪ್ಟೆಂಬರ್ 18, 2021
21 °C

ಬೀದರ್: ಕಲಾವಿದರ ಬೇಡಿಕೆ ಈಡೇರಿಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಅವರು ಈ ಕುರಿತು ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಲಾವಿದರಿಗಾಗಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ಸಾಂಸ್ಕøತಿಕ ಅಕಾಡೆಮಿ ಸ್ಥಾಪಿಸಬೇಕು. ಅಕಾಡೆಮಿ ಸ್ಥಾಪಿಸುವವರೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸಾಂಸ್ಕೃತಿಕ ಉದ್ದೇಶಕ್ಕೆ ಕ್ರಿಯಾ ಯೋಜನೆ ರೂಪಿಸಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಜಿಲ್ಲಾ ಉತ್ಸವ ಹಾಗೂ ಹಂಪಿ ಉತ್ಸವ ಮಾದರಿಯಲ್ಲಿ ಐತಿಹಾಸಿಕ ಕ್ಷೇತ್ರಗಳ ಉತ್ಸವ ನಡೆಸಬೇಕು. ತತ್ವ ಪದಕಾರ ಕಡಕೋಳ ಮಡಿವಾಳಪ್ಪ ಅವರ ಕ್ಷೇತ್ರ ಅಭಿವೃದ್ಧಿಪಡಿಸಬೇಕು. ಸರ್ಕಾರದಿಂದ ನಡೆಯುವ ಎಲ್ಲ ಉತ್ಸವ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಸಮಾರಂಭಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಸಾಧಕ ಕಲಾವಿದರ ಹೆಸರಲ್ಲಿ ಸರ್ಕಾರದಿಂದ ಟ್ರಸ್ಟ್ ಹಾಗೂ ಪ್ರತಿಷ್ಠಾನಗಳನ್ನು ಸ್ಥಾಪಿಸಬೇಕು. ಪದ್ಮಶ್ರೀ, ಪದ್ಮವಿಭೂಷಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದರಿಗೆ ₹ 10 ಸಾವಿರ ಮಾಸಾಶನ ಕೊಡಬೇಕು. ಮಾಸಾಶನ ವಯೋಮಿತಿ 58 ರಿಂದ 50ಕ್ಕೆ ಇಳಿಸಬೇಕು. ಮಾಸಾಶನ ಮೊತ್ತ ₹ 2 ಸಾವಿರದಿಂದ ₹ 5 ಸಾವಿರಕ್ಕೆ ಏರಿಸಬೇಕು. ಕಲಾವಿದರಿಗೆ ವಿಮೆ ಯೋಜನೆ ರೂಪಿಸಬೇಕು. ಬಸ್ ಪಾಸ್ ಕೊಡಬೇಕು. ಪ್ರತ್ಯೇಕ ವಿಧಾನ ಪರಿಷತ್ ಕ್ಷೇತ್ರ ರಚಿಸಬೇಕು ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು