ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಾಚಾರ್ಯರಿಂದ ಅನುಚಿತ ವರ್ತನೆ: ವಿದ್ಯಾರ್ಥಿನಿಯರ ಜತೆ ಡಿಸಿ ಚರ್ಚೆ

ಕೋನಮೇಳಕುಂದಾ ಮೊರಾರ್ಜಿ ದೇಸಾಯಿ ಶಾಲೆಗೆ ಡಿಸಿ, ಎಸ್‌ಪಿ, ಸಿಇಒ ಭೇಟಿ
Published : 10 ಸೆಪ್ಟೆಂಬರ್ 2024, 15:54 IST
Last Updated : 10 ಸೆಪ್ಟೆಂಬರ್ 2024, 15:54 IST
ಫಾಲೋ ಮಾಡಿ
Comments

ಭಾಲ್ಕಿ: ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಜತೆಗೆ ಪ್ರಾಚಾರ್ಯ, ಶಿಕ್ಷಕರ ಅನುಚಿತ ವರ್ತನೆ, ಲೈಂಗಿಕ ಕಿರುಕುಳ, ಸೌಲಭ್ಯ ಕೊರತೆ ಕುರಿತ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಎಸ್‌ಪಿ ಪ್ರದೀಪ ಗುಂಟಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಶಾಲೆಯಲ್ಲಿ ಸರಿಯಾಗಿ ಬೋಧನೆ ನಡೆಯದಿರುವುದು, ಅನುಚಿತ ವರ್ತನೆ ಬಗ್ಗೆ ಆರೋಪ ಮಾಡಿದ ವಿದ್ಯಾರ್ಥಿನಿಯರ ಜತೆಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಕೆಲಕಾಲ ಗೌಪ್ಯವಾಗಿ ಮಾತನಾಡಿ ಮಾಹಿತಿ ಪಡೆದರು.

ನಂತರ ತರಗತಿ ಕೋಣೆಗಳಿಗೆ ಭೇಟಿ ನೀಡಿದ ಅವರು ವಿಜ್ಞಾನದ ಸೂತ್ರಗಳು, ಇಂಗ್ಲಿಷ್ ಸಂಬಂಧಿತ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದರು. ವಿದ್ಯಾರ್ಥಿಗಳಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ವಿಜ್ಞಾನ ಶಿಕ್ಷಕರ ವಿರುದ್ಧ ಅಸಮಾಧಾನ ಹೊರಹಾಕಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ’ವಿದ್ಯಾರ್ಥಿನಿಯರ ಜತೆಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದೇನೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ’ವಸತಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದೇನೆ. ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದು‘ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮಾತನಾಡಿ, ’ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸೂಕ್ತ ಭದ್ರತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅಪರಿಚಿತರಿಗೆ ಶಾಲಾ ಪ್ರವೇಶ ನಿಷೇಧಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ ಬದೋಲೆ ಮಾತನಾಡಿ, ’ಇಲ್ಲಿಯ ಶಿಕ್ಷಕರನ್ನು ಬೇರೆಯೆಡೆ ವರ್ಗಾವಣೆ ಮಾಡುವಂತೆ ದೂರು ಬಂದಿವೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಶಾಲೆಯ ಪ್ರಾಚಾರ್ಯ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆಯ ಕುರಿತು ವಿದ್ಯಾರ್ಥಿನಿಯರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಸೋಮವಾರವೇ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶಿಸಿದ್ದಾರೆ.

ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಸಂಗನ್, ತಾ.ಪಂ. ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ಸಿಡಿಪಿಒ ಶ್ರೀನಿವಾಸ, ಮಕ್ಕಳ ರಕ್ಷಣಾ ಅಧಿಕಾರಿಗಳಾದ ಗೌರಿಶಂಕರ ಪರ್ತಾಪೂರೆ, ಪ್ರಶಾಂತ ಬಿರಾದಾರ, ಗ್ರಾ.ಪಂ ಅಧ್ಯಕ್ಷ ಸಂತೋಷ ಮಾನಕಾರ, ರಾಜಕುಮಾರ ಚಲ್ವಾ ಇದ್ದರು.

ಭಾಲ್ಕಿ ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರನ್ನು ವರ್ಗಾವಹಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಮಾನಕಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ಭಾಲ್ಕಿ ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರನ್ನು ವರ್ಗಾವಹಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಮಾನಕಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು

ಶಿಕ್ಷಕರ ವರ್ಗಾವಣೆಗೆ ಒತ್ತಾಯ

ವಸತಿ ಶಾಲೆಯಲ್ಲಿ ಕರ್ತವ್ಯಲೋಪ ಎಸಗುತ್ತಿರುವ ಕಾಯಂ ಶಿಕ್ಷಕರು ಸ್ಥಳೀಯ ಹೊರ ಗುತ್ತಿಗೆ ಶಿಕ್ಷಕರನ್ನು ವರ್ಗಾವಣೆ ಮಾಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಮಾನಕಾರ ಸೇರಿ ಗ್ರಾಮದ ಯುವಕರು ಒತ್ತಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ. ಕೆಲ ಶಿಕ್ಷಕರು ಸ್ವಪ್ರತಿಷ್ಠೆಗಾಗಿ ತಮ್ಮದೇ ಗುಂಪು ಸೃಷ್ಟಿಸಿಕೊಂಡು ಜಗಳ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಶಾಲಾ ಪರಿಸರ ಹಾಳಾಗುತ್ತಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಕೂಡಲೇ ಇಂತವರನ್ನು ವರ್ಗಾಯಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ. ಗ್ರಾಮದ ಪ್ರಮುಖರಾದ ಶಿವರಾಜ ಹಂಪಾ ರಾಜಕುಮಾರ ಚಲ್ವಾ ಪಂಡರಿ ಮೇತ್ರೆ ಪ್ರವೀಣ ಗಾಯಕವಾಡ ಸೇರಿದಂತೆ ಇತರರು ಇದ್ದರು.

ವರ್ಗ ಶಿಕ್ಷಕರಿಗೆ ನೋಟಿಸ್ ನೀಡಲು ಸೂಚನೆ

ಇದೇ ವೇಳೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತರಗತಿ ಶಿಕ್ಷಕರು ಹಾಜರಾತಿ ಪುಸ್ತಕ ಸರಿಯಾಗಿ ನಿರ್ವಹಣೆ ಮಾಡದಿರುವುದನ್ನು ಕಂಡು ಗರಂ ಆದರು. ಕೆಲ ಶಿಕ್ಷಕರು ಹಾಜರಾತಿ ಪುಸ್ತಕದಲ್ಲಿ ಬೆಳಿಗ್ಗೆ ಮಧ್ಯಾಹ್ನದ ಸಹಿ ಏಕಕಾಲಕ್ಕೆ ಮಾಡಿರುವುದನ್ನು ಕಂಡು ತರಾಟೆಗೆ ತೆಗೆದು ಕೊಂಡರು. 6 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ವರ್ಗ ಶಿಕ್ಷಕರಿಗೆ ಶೋಕಾಸ್ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT