ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಬಿಜೆಪಿ ಶಾಸಕ ಪ್ರಭು ಚವಾಣ್‌ ಮತ್ತೆ ವಾಗ್ದಾಳಿ

‘ಉಲ್ಟಾ ಚೋರ್ ಕೋತ್ವಾಲ್ ಕೊ ಡಾಟೆ‘
Published 14 ಆಗಸ್ಟ್ 2023, 15:39 IST
Last Updated 14 ಆಗಸ್ಟ್ 2023, 15:39 IST
ಅಕ್ಷರ ಗಾತ್ರ

ಬೀದರ್‌: ‘ಹೊಂದಾಣಿಕೆ ರಾಜಕಾರಣದಲ್ಲಿ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ‘ಎಕ್ಸ್‌ಪರ್ಟ್‌’ ಆಗಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅದೆಲ್ಲ ಬಹಿರಂಗವಾಗಿದೆ. ಹೀಗಿರುವಾಗ ನಾನು ಕಾಂಗ್ರೆಸ್‌ ನಾಯಕರೊಂದಿಗೆ ಸೇರಿಕೊಂಡು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೇನೆ ಎಂದು ಆರೋಪಿಸಿರುವುದು ನೋಡಿದರೆ ‘ಉಲ್ಟಾ ಚೋರ್‌ ಕೋತ್ವಾಲ್‌ ಕೊ ಡಾಟೆ’ ಎಂಬಂತಾಗಿದೆ’ ಎಂದು ಔರಾದ್‌ ಬಿಜೆಪಿ ಶಾಸಕ ಪ್ರಭು ಚವಾಣ್‌ ವಾಗ್ದಾಳಿ ನಡೆಸಿದ್ದಾರೆ.

ಇತ್ತೀದಿನ ದಿನಗಳಲ್ಲಿ ಭಗವಂತ ಖೂಬಾ ಅವರು ತಲೆಬುಡವಿಲ್ಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರ ಬಗ್ಗೆ ಎಲ್ಲೆಡೆಯಿಂದ ಬರುತ್ತಿರುವ ಅತೃಪ್ತಿ, ಅಸಮಾಧಾನಗಳಿಂದ ಹತಾಶರಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ ಎನಿಸುತ್ತದೆ ಎಂದು ಚವಾಣ್‌ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾನು ಮೂರು ದಶಕಗಳಿಂದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷವನ್ನೇ ನನ್ನ ತಾಯಿ ಎಂದು ಭಾವಿಸಿ ನಿಷ್ಠೆಯಿಂದ ದುಡಿಯುತ್ತಿದ್ದೇನೆ. ಜನರ ಸೇವೆ, ಸಮಾಜದ ಸೇವೆಗೆ ಸಮರ್ಪಿಸಿಕೊಂಡು ಹಗಲಿರುಳು ಕೆಲಸ ಮಾಡುತ್ತಿದ್ದೇನೆ. ಹೀಗಾಗಿಯೇ ಔರಾದ್ ವಿಧಾನಸಭೆ ಕ್ಷೇತ್ರದ ಜನರು ನನಗೆ ನಾಲ್ಕನೇ ಸಲ ಆಶೀರ್ವಾದ ಮಾಡಿ ವಿಧಾನಸಭೆಗೆ ಕಳಿಸಿದ್ದಾರೆ. ಪಕ್ಷದ ವರಿಷ್ಠರು ನನ್ನ ಸೇವೆ ಗುರುತಿಸಿ ಎರಡು ಬಾರಿ ಮಂತ್ರಿ ಸ್ಥಾನ ಸಹ ಕೊಟ್ಟಿದ್ದಾರೆ. ಕ್ಷೇತ್ರದ ಜನ, ಪಕ್ಷದ ಋಣ ತೀರಿಸಲು ಕೊನೆಯ ಉಸಿರು ಇರುವವರೆಗೆ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಸದಾ ಪಕ್ಷದವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿರುವ ಭಗವಂತ ಖೂಬಾ ಅವರು ನಾನು ಹೊಂದಾಣಿಕೆ ರಾಜಕಾರಣ ಮಾಡುತ್ತಿರುವೆ ಎಂದು ಹೇಳಿ ನನ್ನ ತೇಜೋವಧೆ ಮಾಡಲು ಯತ್ನಿಸಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಅವರಿಗೆ ‘ದಮ್’ ಇದ್ದರೆ ನಾನು ಹೊಂದಾಣಿಕೆ ರಾಜಕಾರಣ ಮಾಡಿರುವುದನ್ನು ಸಾಬೀತುಪಡಿಸಬೇಕು. ಅವರ ಹೇಳಿಕೆ ನೋಡಿದರೆ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಮಾತು ನೆನಪಿಗೆ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಗೆದ್ದಿರುವ ಖೂಬಾ ಲಕ್ಕಿಮ್ಯಾನ್. ಅವರಿಗೆ ಪಕ್ಷ, ಸಂಘಟನೆ ಏನೂ ಗೊತ್ತಿಲ್ಲ. ಪಕ್ಷದ ಯಾವೊಬ್ಬ ಕಾರ್ಯಕರ್ತನನ್ನು ಬೆಳೆಸಿಲ್ಲ ಎಂದು ಟೀಕಿಸಿದ್ದಾರೆ.

ಖೂಬಾ ಅವರಂತಹ ಪಕ್ಷ ವಿರೋಧಿಗಳ ಮೇಲೆ ಕೂಡಲೇ ವರಿಷ್ಠರು ಕ್ರಮ ಜರುಗಿಸುವ ಅಗತ್ಯವಿದೆ. ಇಲ್ಲದಿದ್ದರೆ ಬರುವ ದಿನಗಳಲ್ಲಿ ಬೀದರ್ ಜಿಲ್ಲೆಯಲ್ಲಿ ಬಿಜೆಪಿಗೆ ಬಹುದೊಡ್ಡ ‘ಡ್ಯಾಮೇಜ್’ ಆಗುವುದು ಖಚಿತ. ಖೂಬಾ ಅವರ ಮನಸ್ಥಿತಿ ಸರಿಯಿಲ್ಲ. ಇತ್ತೀಚೆಗೆ ಬೀದರ್ ಜಿಲ್ಲೆಯಲ್ಲಿ ಬಿಜೆಪಿಯನ್ನೇ ಅವರು ಹಾಳು ಮಾಡುತ್ತಿದ್ದಾರೆ. ಪಕ್ಷದ ಸಂಘಟನೆ ಮಾಡುವುದೇ ಖೂಬಾ ಮರೆತಿದ್ದಾರೆ. ವಿವಿಧ ಕಡೆಗಳಿಗೆ ಭೇಟಿ ನೀಡಿಲ್ಲ. ಎಲ್ಲೂ ಕಾರ್ಯಕರ್ತರನ್ನು ಕಂಡಿಲ್ಲ. ಸಚಿವರಾಗಿರುವುದು ಅವರ ಮನೆ ಕೆಲಸ ಮಾಡಿಕೊಳ್ಳಲು ಸೀಮಿತವಾಗಿದೆ. ಕೇಂದ್ರ ಮಂತ್ರಿ ಆಗಿದ್ದುಕೊಂಡು ಬಿಜೆಪಿ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ ಎಂದು ವಾಕ್ಪ್ರಹಾರ ಮಾಡಿದ್ದಾರೆ.

ಔರಾದ್‍ನ ಆರಾಧ್ಯದೈವ ಅಮರೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಾಣ ಕೆಲಸಕ್ಕೆ ಟ್ರಸ್ಟ್‌ನವರ ಜೊತೆಗೆ ಚರ್ಚಿಸಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಅಧಿಕಾರಿಗಳಿಗೆ ಕರೆ ಮಾಡಿ ಕೆಲಸ ನಿಲ್ಲಿಸಿದ್ದಾರೆ. ನಂತರ ನಾನು ಕ್ಷೇತ್ರದಲ್ಲಿ ಇರದಿದ್ದಾಗ ಮತ್ತೊಮ್ಮೆ ಭೂಮಿ ಪೂಜೆ ಮಾಡಿದ್ದಾರೆ. ನನಗೂ ಕೆಲಸ ಮಾಡಲು ಬಿಡುತ್ತಿಲ್ಲ. ಅವರು ಮಾಡುತ್ತಿಲ್ಲ. ಪವಿತ್ರ ದೇವಸ್ಥಾನದ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಜನರಷ್ಟೇ ಅಲ್ಲ, ದೇವರು ಕೂಡ ಕ್ಷಮಿಸಲಾರ ಎಂದಿದ್ದಾರೆ.

ಖೂಬಾಗೆ ರಾಜಕೀಯಕ್ಕೆ ಕರೆತಂದು ಎಲ್ಲರಿಗೂ ಪರಿಚಯಿಸಿದವನೇ ನಾನು. 2008ರಲ್ಲಿ ನಾನು ಮೊದಲ ಬಾರಿ ಔರಾದ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಖೂಬಾ ಅವರಿಗೆ ಕ್ಷೇತ್ರದ ಚುನಾವಣೆ ಉಸ್ತುವಾರಿ ಮಾಡಲಾಯಿತು. ನಂತರ ಇತರೆ ಜವಾಬ್ದಾರಿ ಕೊಡಲಾಯಿತು. 2010ರಲ್ಲಿ ಸುಭಾಷ ಕಲ್ಲೂರ್ ಬಿಜೆಪಿ ಜಿಲ್ಲಾ ಅಧ್ಯಕ್ಷರಿದ್ದಾಗ ನಾನೇ ಖೂಬಾ ಅವರನ್ನು ಜಿಲ್ಲಾ ಉಪಾಧ್ಯಕ್ಷನಾಗಿ ಮಾಡಿಸಿದ್ದೆ. ಇನ್ನು, 2014ರ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಕೊಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಿದವರಲ್ಲಿ ನಾನು ಮುಂಚೂಣಿಯಲ್ಲಿದ್ದೆ.  ಖೂಬಾಗೆ ಟಿಕೆಟ್ ಕೊಡದಿದ್ದರೆ ನಾನು ವಿಷ ಸೇವಿಸುವೆ ಎಂದು ವರಿಷ್ಠರಿಗೆ ಹೇಳಿದ್ದೆ. ಅವರ ಗೆಲುವಿಗೆ ಶ್ರಮಿಸಿದ್ದೆ. ಆದರೆ, ಗೆದ್ದ ನಂತರ ಅಧಿಕಾರದ ದರ್ಪ, ಅಹಂಕಾರದಲ್ಲಿ ನನ್ನ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ. ಆರೇಳು ವರ್ಷಗಳಿಂದ ನನಗೆ ಎಲ್ಲಿಲ್ಲದ ಹಿಂಸೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡಲಿ’

‘ಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರದಿಂದ ಭಗವಂತ ಖೂಬಾ ಅವರ ಬದಲು ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಬಿಜೆಪಿ ಹೊಸ ಅಧ್ಯಾಯ ಆರಂಭಿಸಬೇಕು. ಇದು ಪಕ್ಷದ ನಿಷ್ಠಾವಂತರ ಬೇಡಿಕೆಯಾಗಿದೆ. ಖೂಬಾ ವಿರುದ್ಧ ಆದಷ್ಟು ಶೀಘ್ರ ಕ್ರಮ ಜರುಗಿಸದಿದ್ದಲ್ಲಿ ಪಕ್ಷಕ್ಕೆ ಹೆಚ್ಚಿನ ಹಾನಿ ಉಂಟಾಗಬಹುದು’ ಎಂದು ಶಾಸಕ ಪ್ರಭು ಚವಾಣ್‌ ಹೇಳಿದ್ದಾರೆ.

ಬರುವ ಲೋಕಸಭೆ ಚುನಾವಣೆಯಲ್ಲಿ ಮರಾಠ ಸಮಾಜದವರಿಗೆ ಟಿಕೆಟ್‌ ನೀಡಬೇಕೆಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಆಗ್ರಹಿಸಿದ್ದಾರೆ. ಬರುವ ದಿನಗಳಲ್ಲಿ ಪಕ್ಷದ ಇನ್ನಷ್ಟು ನಾಯಕರು, ಕಾರ್ಯಕರ್ತರು ಈ ಬೇಡಿಕೆ ಮಂಡಿಸುವ ಸಾಧ್ಯತೆಗಳಿವೆ. ಪಕ್ಷ ವಿರೋಧಿ ಕೆಲಸ ಮಾಡುತ್ತಿರುವವರ ವಿರುದ್ಧ ನಿರಾತಂಕವಾಗಿ ಧ್ವನಿ ಎತ್ತುವೆ. ನನಗೆ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT