ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಗುರಿ: ಬಸವಕಲ್ಯಾಣ ನೂತನ ಶಾಸಕ ಶರಣು ಸಲಗರ

Last Updated 5 ಮೇ 2021, 5:08 IST
ಅಕ್ಷರ ಗಾತ್ರ

ಬಸವಕಲ್ಯಾಣ: ನನಗೆ ಉಳಿದಿರುವುದು ಎರಡೇ ವರ್ಷದ ಅವಧಿ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಲ್ಲಿನ ನೂತನ ಅನುಭವ ಮಂಟಪದ ಕಾಮಗಾರಿ 2 ವರ್ಷಗಳಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದ್ದರಿಂದ ಅದನ್ನು ಮತ್ತು ಕೆಲ ಮಹತ್ವದ ಯೋಜನೆಗಳನ್ನು ಇಷ್ಟೇ ಅವಧಿಯಲ್ಲಿ ಮುಗಿಸಲು ಶ್ರಮಿಸುವುದು ನನ್ನ ಜವಾಬ್ದಾರಿಯಾಗಿದೆ. ಅದಕ್ಕಾಗಿ ಪ್ರಯತ್ನಿಸುವೆ.

ಬಸವಕಲ್ಯಾಣ- ಹುಲಸೂರ ತಾಲ್ಲೂಕು ಒಳಗೊಂಡಿರುವ ಈ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವಿಜೇತರಾದ ನೂತನ ಶಾಸಕ ಶರಣು ಸಲಗರ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

* ಇಲ್ಲಿ ಬಿಜೆಪಿ ಜಯ ಕಷ್ಟ ಎನ್ನಲಾಗುತ್ತಿತ್ತು. ಆದರೂ ಜಯಗಳಿಸಿದ್ದೀರಿ. ಹೇಗೆ?

ಬಿಜೆಪಿ ಇಲ್ಲಿ ಗೆಲ್ಲುವುದಿಲ್ಲ ಎಂಬುದು ಅಷ್ಟೇ ಅಲ್ಲ; ಹೊರಗಿನವ ಎಂಬ ಕಾರಣ ಮುಂದೆ ಮಾಡಿ ಅನೇಕ ರೀತಿ ನನಗೆ ಅಡೆತಡೆ ಸೃಷ್ಟಿಸಲಾಯಿತು. ಆದರೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ ಕಟೀಲ್, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಮೇಲೆ ಭರವಸೆ ಇಟ್ಟು ಟಿಕೆಟ್ ನೀಡಿದರು. ಸಚಿವರ, ಪಕ್ಷದ ವರಿಷ್ಠರ, ರಾಜ್ಯ, ಜಿಲ್ಲಾ, ತಾಲ್ಲೂಕು ಘಟಕ ಪದಾಧಿಕಾರಿಗಳ ಸತತ ಶ್ರಮ, ಪಕ್ಷದ ಅಭಿವೃದ್ಧಿ ಕಾರ್ಯ, ಚುನಾವಣಾ ಉಸ್ತುವಾರಿಗಳ ಕಾರ್ಯತಂತ್ರದಿಂದ ನನಗೆ ಜಯ ಲಭಿಸಿತು.

* ಯಾವ ಸಮಸ್ಯೆ ಬಗೆಹರಿಸುವುದಕ್ಕೆ ನಿಮ್ಮ ಮೊದಲ ಆದ್ಯತೆ?

ನಾನು ಕಳೆದ ಕೋವಿಡ್ ಲಾಕ್‌ಡೌನ್‌ ಅವಧಿಯಲ್ಲಿ ಕ್ಷೇತ್ರದಾದ್ಯಂತ ಓಡಾಡಿ ಕೂಲಿ ಕಾರ್ಮಿಕರು, ಬಡವರು ಸೇರಿ 50 ಸಾವಿರ ಜನರಿಗೆ ಆಹಾರಧಾನ್ಯ ವಿತರಿಸಿದ್ದೆ. ಆ ಸೇವೆಯೇ ನನ್ನ ಗೆಲುವಿಗೆ ಕಾರಣವಾಯಿತು. ಈಗಲೂ ಕೋವಿಡ್ ಪ್ರಭಾವ ಹೆಚ್ಚಿದೆ. ತಾಲ್ಲೂಕಿನಾದ್ಯಂತ ಸಂಚರಿಸಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ಸಕಲ ಸೌಲಭ್ಯ ದೊರಕಿಸಲು ಆದ್ಯತೆ ನೀಡುವೆ.

* ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೂ ಪ್ರಯತ್ನಿಸುತ್ತೀರಾ?

ನಾನು ಶಿಕ್ಷಕನಾಗಿಯೂ ಕೆಲಸ ನಿರ್ವಹಿಸಿದ್ದರಿಂದ ಶೈಕ್ಷಣಿಕ ಯೋಜನೆಗಳ ಬಗ್ಗೆ ಚಿಂತನೆ ನಡೆಸಿರುವೆ. ಕೋವಿಡ್ ಪ್ರಭಾವ ಕಡಿಮೆಯಾದ ತಕ್ಷಣ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಯತ್ನಿಸುವೆ. ತಾಲ್ಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲೆಯಲ್ಲೇ ಅತ್ಯುತ್ತಮಗೊಳಿಸಲು ಶಿಕ್ಷಕರಿಗೆ ವಿಶೇಷ ತರಬೇತಿ ಶಿಬಿರ ಆಯೋಜಿಸುವೆ.

* ಕ್ಷೇತ್ರದ ಅಭಿವೃದ್ಧಿಗೆ ಏನು ಕ್ರಮ ಕೈಗೊಳ್ಳುವಿರಿ?

ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣ ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಬೇಕು ಎಂಬ ಆಶಯ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನುಭವ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅದನ್ನು ಪೂರ್ಣಗೊಳಿಸಲು ಶ್ರಮಿಸುವೆ. ಕ್ಷೇತ್ರದಲ್ಲಿನ 16 ಕೆರೆ ತುಂಬಿಸುವ ₹200 ಕೋಟಿಯ ಏತ ನೀರಾವರಿ ಯೋಜನೆ ಕಾರ್ಯಗತಗೊಳಿಸಲು ಪ್ರಯತ್ನಿಸುವೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ರಸ್ತೆ, ಶಾಲಾ ಕಟ್ಟಡಗಳ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT