ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ, ಹಾರಕೂಡಶ್ರೀ ಸ್ಮರಿಸಿದ ಶರಣು

ಬಸವಕಲ್ಯಾಣ ಶಾಸಕ ಶರಣು ಸಲಗರ ಬೆಂಗಳೂರಿನಲ್ಲಿ ಪ್ರಮಾಣವಚನ ಸ್ವೀಕಾರ
Last Updated 9 ಜೂನ್ 2021, 2:57 IST
ಅಕ್ಷರ ಗಾತ್ರ

ಬಸವಕಲ್ಯಾಣ: ಶಾಸಕ ಶರಣು ಸಲಗರ ಮಂಗಳವಾರ ಬೆಂಗಳೂರಿನಲ್ಲಿ ಶಾಸಕ ಸ್ಥಾನದ ಪ್ರಮಾಣ ವಚನ ಸ್ವೀಕರಿಸುವಾಗ ‘ವಿಶ್ವಗುರು ಬಸವಣ್ಣನವರ ಕರ್ಮಭೂಮಿ, ಶ್ರೇಷ್ಠ ನೆಲ ಹಾಗೂ ಹಾರಕೂಡ ಚೆನ್ನವೀರ ಶಿವಾಚಾರ್ಯರ ದಾಸೋಹದ ಭೂಮಿ ಬಸವಕಲ್ಯಾಣ ವಿಧಾನಸಭಾ ಮತಕ್ಷೇತ್ರದ ಎಲ್ಲ ಪ್ರಜೆಗಳ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಎಂದು ಹೇಳಿರುವುದಕ್ಕೆ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಹಾರಕೂಡ, ಮಂಠಾಳ ಮತ್ತು ಬಸವಕಲ್ಯಾಣದಲ್ಲಿ ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿದರು.

ಹುಲಸೂರ ಮತ್ತು ಬಸವಕಲ್ಯಾಣ ತಾಲ್ಲೂಕುಗಳನ್ನು ಒಳಗೊಂಡಿರುವ ಈ ವಿಧಾನಸಭಾ ಕ್ಷೇತ್ರದ 15ನೇ ಶಾಸಕರಾಗಿ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಸಲಗರ ಆಯ್ಕೆಯಾಗಿದ್ದಾರೆ. ಏಪ್ರಿಲ್ 17ರಂದು ಮತದಾನ ನಡೆದು ಮೇ 2 ಕ್ಕೆ ಫಲಿತಾಂಶ ಪ್ರಕಟ ಆಗಿತ್ತು. ಆದರೆ, ಕೋವಿಡ್ ಎರಡನೇ ಅಲೆಯ ಪ್ರಭಾವದ ಕಾರಣ ಲಾಕ್‌ಡೌನ್‌ ಇದ್ದುದರಿಂದ ಪ್ರಮಾಣವಚನ ಸ್ವೀಕರಿಸಿರಲಿಲ್ಲ.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣವಚನ ಬೋಧಿಸಿದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ ಮೊದಲಾದವರು ಉಪಸ್ಥಿತರಿದ್ದರು.

ವಿಧಾನಸೌಧ ಮೆಟ್ಟಿಲಿಗೆ ನಮಸ್ಕಾರ: ತಹಶೀಲ್ದಾರ್ ಆಗಿರುವ ಪತ್ನಿ ಸಾವಿತ್ರಿ ಸಲಗರ, ತಂದೆ ಬಾಬುರಾವ್, ತಾಯಿ ಸರೂಬಾಯಿ ಮತ್ತು ಕುಟುಂಬ ವರ್ಗದವರೊಂದಿಗೆ ಬಂದ ಶರಣು ಸಲಗರ ಅವರು ವಿಧಾನಸೌಧ ಪ್ರವೇಶಿಸುವ ಮುನ್ನ ಪ್ರವೇಶದ್ವಾರದ ಮೊದಲ ಮೆಟ್ಟಿಲಿಗೆ ಹಣೆಹಚ್ಚಿ ನಮಸ್ಕರಿಸಿದರು. ಇದಕ್ಕೂ ಮೊದಲು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ದಂಡ ನಮಸ್ಕಾರ ಹಾಕಿ, ಅವರಿಂದ ಆಶೀರ್ವಾದ ಪಡೆದರು.

ಬೀದರ್ ಜಿಲ್ಲೆಯ ಮುಖಂಡರಾದ ಬಾಬು ವಾಲಿ, ಡಾ.ಶೈಲೇಂದ್ರ ಬೆಲ್ದಾಳೆ, ಡಿ.ಕೆ.ಸಿದ್ರಾಮ, ಜಗನ್ನಾಥ ಪಾಟೀಲ ಮಂಠಾಳ, ರಾಜಕುಮಾರ ಶಿರಗಾಪುರ, ರವಿ ಗಾಯಕವಾಡ, ಅಶೋಕ ವಕಾರೆ, ಚಂದ್ರಶೇಖರ ಪಾಟೀಲ ಮುಡಬಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT