ನಡಾವಳಿಯಲ್ಲಿ ಶಾಸಕರ ಹೆಸರೇ ಮಾಯ!

7
ತಪ್ಪು ಮಾಡಿದ್ದಕ್ಕೆ ಮುಖ ಕೆಳಗೆ ಮಾಡಿ ನಿಂತ ಸಿಬ್ಬಂದಿ

ನಡಾವಳಿಯಲ್ಲಿ ಶಾಸಕರ ಹೆಸರೇ ಮಾಯ!

Published:
Updated:
Prajavani

ಬೀದರ್‌: ‘ಹಿಂದಿನ ಕೆಡಿಪಿ ಸಭೆಯಲ್ಲಿ ನಾಲ್ಕು ಗಂಭೀರವಾದ ವಿಷಯಗಳನ್ನು ಪ್ರಸ್ತಾಪ ಮಾಡಿದರೂ ನಡಾವಳಿಯಲ್ಲಿ ಅದನ್ನು ಉಲ್ಲೇಖ ಮಾಡಿಲ್ಲ. ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ನಡಾವಳಿ ಬರೆಯಿಸಿದರೆ ಹೇಗೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಸಭಾ ನಡಾವಳಿಯಲ್ಲಿ ನನ್ನ ಹೆಸರು ಉಲ್ಲೇಖ ಮಾಡದಿರಲು ಕಾರಣ ಏನು ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

‘ನಡಾವಳಿ ಬರೆದವರು ಯಾರು?’ ಎಂದು ಸಚಿವರು ಕೇಳಿದಾಗ ಮಹಿಳೆಯರಿಬ್ಬರು ಎದ್ದು ತಲೆ ತಗ್ಗಿಸಿ ಸುಮ್ಮನೆ ನಿಂತುಕೊಂಡರು. ‘ಇದಕ್ಕೆ ಯಾರು ಹೊಣೆ’ ಎಂದು ಸಿಇಒ ಮಹಾಂತೇಶ ಬೀಳಗಿ ಅವರನ್ನು ಪ್ರಶ್ನಿಸಿದಾಗ ಅವರು ‘ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ ಇದಕ್ಕೆ ಉತ್ತರಿಸಬೇಕು’ ಎಂದು ಸೂಚನೆ ನೀಡಿದರು.

‘ನಮ್ಮಲ್ಲಿ ಶೀಘ್ರಲಿಪಿಕಾರರು ಇಲ್ಲ. ಹೀಗಾಗಿ ಸಮಸ್ಯೆಯಾಗಿದೆ’ ಎಂದು ದುಬೆ ಅವರು ಸಮಜಾಯಿಸಿ ನೀಡಲು ಯತ್ನಿಸಿದಾಗ ಗರಂ ಆದ ಸಚಿವರು ‘ಬಿಸ್ಕತ್, ಗೋಡಂಬಿ ತಿಂದು ನಿಮ್ಮ ಕಥೆ ಕೇಳಲು ಕೆಡಿಪಿ ಸಭೆಗೆ ಬಂದಿಲ್ಲ. ಸರಿಯಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಸಭೆಯ ಗಾಂಭೀರ್ಯ ಕಾಯ್ದುಕೊಳ್ಳಬೇಕು’ ಎಂದು ತರಾಟೆಗೆ ತೆಗೆದುಕೊಂಡರು.

‘ಮುಂದಿನ ಸಭೆಯಲ್ಲಿ ವಿಡಿಯೊ, ಆಡಿಯೊ ಮಾಡಲಾಗುವುದು. ಇಂತಹ ಲೋಪ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಸಿಇಒ ಮಹಾಂತೇಶ ಬೀಳಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !