ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾಶೀಲರಾದ ಮೊಬೈಲ್‌ ಕಳ್ಳರು: ಇರಾನಿ ಗ್ಯಾಂಗ್‌ ಮತ್ತೆ ಸಕ್ರಿಯ!

Last Updated 9 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಬೀದರ್‌: ಕೋವಿಡ್‌ 19 ಸೋಂಕು ಹರಡುವಿಕೆಯನ್ನು ತಡೆಯುವ ದಿಸೆಯಲ್ಲಿ ಪೊಲೀಸರು ಜಿಲ್ಲೆಯ ಗಡಿ, ನಿಷೇಧಿತ ಪ್ರದೇಶ ಹಾಗೂ ಬಫರ್‌ ಝೋನ್‌ಗಳಲ್ಲಿ ಬಂದೋಬಸ್ತ್‌ನಲ್ಲಿ ತೊಡಗಿರುವುದನ್ನು ಸೂಕ್ಷ್ಮವಾಗಿ ಅರಿತಿರುವ ಕಳ್ಳರು ನಿರ್ಜನ ಪ್ರದೇಶದಲ್ಲಿ ಸಂಚರಿಸುವ ವ್ಯಕ್ತಿಗಳ ಮೊಬೈಲ್‌ ಹಾಗೂ ಹಣ ದೋಚಿ ಪರಾರಿಯಾಗುತ್ತಿದ್ದಾರೆ.

ಇರಾನಿಗಳ ಗ್ಯಾಂಗ್‌ ನಗರದಲ್ಲಿ ಮತ್ತೆ ಸಕ್ರಿಯವಾಗಿದೆಯೇ ಎನ್ನುವ ಆತಂಕ ನಗರದ ಜನರಲ್ಲಿ ಮನೆ ಮಾಡುತ್ತಿದೆ. ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಿರುವ ಕಾರಣ ಇರಾನಿ ಗ್ಯಾಂಗ್‌ನವರು ಕಳ್ಳದಾರಿ ಹಿಡಿದು ಇಲ್ಲಿಗೆ ಬಂದಿರುವ ಸಾಧ್ಯತೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಲಾಕ್‌ಡೌನ್‌ ಆದ ನಂತರ ಬಹುತೇಕ ಜನರು ವಾಯು ವಿಹಾರಕ್ಕೆ ಹೋಗುವುದನ್ನೂ ನಿಲ್ಲಿಸಿದ್ದಾರೆ. ಕೆಲವರು ಉದ್ಯಾನ ಹಾಗೂ ಮನೆಗಳ ಓಣಿಗಳಲ್ಲಿ ವಾಕ್‌ ಮಾಡುತ್ತಿದ್ದಾರೆ. ಕಳ್ಳರು ಅಂಥವರನ್ನೇ ಗುರಿಯಾಗಿಸಿಕೊಂಡು ಮೊಬೈಲ್‌ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ.

ಗುರುವಾರ ಬೆಳಿಗ್ಗೆ 11 ಗಂಟೆಗೆ ಕಚೇರಿಯೊಳಗೆ ಮೊಬೈಲ್ ನೆಟ್‌ವರ್ಕ್‌ ಬಾರದ ಕಾರಣ ಕಚೇರಿ ಆವರಣಕ್ಕೆ ಬಂದು ಮಾತನಾಡುತ್ತಿದ್ದ ಪತ್ರಿಕೆಯೊಂದರ ಜಾಹೀರಾತು ಪ್ರತಿನಿಧಿ ದೇವೇಂದ್ರ ಕರಂಜೆ ಅವರ ₹ 10 ಸಾವಿರ ಬೆಲೆಯ ಮೊಬೈಲ್‌ಅನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ರೋಟರಿ ವೃತ್ತ ಸಮೀಪದ ಕಚೇರಿ ಮುಂದೆ 30–35 ವಯಸ್ಸಿನ ಇಬ್ಬರು ಯುವಕರು ನೋಂದಣಿ ಸಂಖ್ಯೆ ಇಲ್ಲದ ಸ್ಕೂಟಿ ಮೇಲೆ ಬಂದು ಮೊಬೈಲ್‌ ಕಿತ್ತುಕೊಂಡು ಕೇಂದ್ರ ಬಸ್‌ ನಿಲ್ದಾಣ ಸಮೀಪದ ಪೆಟ್ರೋಲ್‌ ಬಂಕ್‌ ಕಡೆಯಿಂದ ಓಡಿ ಹೋದರು.

ಜಿಲ್ಲಾ ಕ್ರೀಡಾಂಗಣ, ಕೆಇಬಿ ರಸ್ತೆ, ಶಿವನಗರ, ಮೈಲೂರು ಕ್ರಾಸ್ ಹಾಗೂ ಗಾಂಧಿ ಗಂಜ್‌ ಪ್ರದೇಶದಲ್ಲೂ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಮೊಬೈಲ್‌ ಕಳೆದುಕೊಂಡವರು ಪೊಲೀಸ್‌ ಠಾಣೆ ಅಲೆದಾಡುವುದು ನಮ್ಮಿಂದ ಸಾಧ್ಯವಾಗದು ಎಂದು ದೂರು ಸಹ ದಾಖಲಿಸಿಲ್ಲ.

ಕಳ್ಳರು ಮೊಬೈಲ್‌ ಕಿತ್ತುಕೊಂಡು ಹೋದ ಮೇಲೆ ಸ್ವಿಚ್‌ ಆಫ್‌ ಮಾಡುತ್ತಿದ್ದಾರೆ. 10 ದಿನಗಳ ನಂತರ ಜಾರ್ಖಂಡ್, ಮಧ್ಯಪ್ರದೇಶ, ಉತ್ತರಪ್ರದೇಶಕ್ಕೆ ತೆರಳಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಇಲ್ಲಿಗೆ ತಂದು ಮಾರಾಟ ಮಾಡುವ ಹಾಗೂ ಇಲ್ಲಿ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಬೇರೆ ರಾಜ್ಯಗಳಿಗೆ ಒಯ್ದು ಮಾರಾಟ ಮಾಡುವ ದೊಡ್ಡ ಜಾಲವೇ ಇದೆ. ಇದನ್ನು ಪೊಲೀಸರು ಖಾತರಿ ಪಡಿಸಿದ್ದಾರೆ.

ಪೊಲೀಸ್‌ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಬಂದೋಬಸ್ತ್‌, ಗಣ್ಯರ ಶಿಷ್ಟಾಚಾರ, ಅಪಘಾತ ಇನ್ನಿತರ ಪ್ರಕರಣಗಳನ್ನೂ ನೋಡಿಕೊಳ್ಳಬೇಕಿರುವ ಕಾರಣ ಪೊಲೀಸರು ಮೇಲೆ ಒತ್ತಡ ಹೆಚ್ಚಿದೆ. ಅಂತೆಯೇ ಕಳ್ಳರು ಸಮಯ ಸಾಧಿಸಿಕೊಂಡು ಜನರನ್ನು ಲೂಟಿ ಮಾಡಲು ಆರಂಭಿಸಿದ್ದಾರೆ.

*
ಪೊಲೀಸರ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಶೀಘ್ರದಲ್ಲಿ 100 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿ, ಪೊಲೀಸ್‌ ಗಸ್ತ್‌ಅನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು.
-ಡಿ.ಎಲ್‌.ನಾಗೇಶ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT