ಮಂಗಳವಾರ, ಜನವರಿ 21, 2020
29 °C
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪ

‘ಮೋದಿಯಿಂದ ರಾಜ್ಯದ ಜನರಿಗೆ ಮೋಸ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಮಾತಿನಂತೆ ನಡೆಯದೆ ರಾಜ್ಯದ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡುತ್ತಾರೆ ಎಂದು ರಾಜ್ಯದ ಜನರು ನಿರೀಕ್ಷಿಸಿದ್ದರು. ಆದರೆ, ಜನರ ನಿರೀಕ್ಷೆ ಹುಸಿಯಾಗಿದೆ. ಪ್ರವಾಹ ಪೀಡಿತರು ಸರ್ಕಾರದ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಪ್ರಧಾನ ಮಂತ್ರಿ ಪರಿಹಾರ ನೀಡುವುದಾಗಿ ಘೋಷಿಸಲಿಲ್ಲ. ನೆರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಲಿಲ್ಲ. ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಮತ್ತು ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ 7 ಕೋಟಿ ಜನರಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ದೂರಿದರು.

ನೆರೆ ಪೀಡಿತರಿಗೆ ಪರಿಹಾರ ಘೋಷಿಸಿ ಹಣ ಬಿಡುಗಡೆ ಮಾಡುವಂತೆ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ರಾಜ್ಯದಲ್ಲಿರುವ ಬಿಜೆಪಿಯ 25 ಸಂಸದರು ಜೊತೆಗೂಡಿ ಪ್ರಧಾನ ಮಂತ್ರಿ ಮೇಲೆ ಒತ್ತಡ ಹೇರಲಿಲ್ಲ ಎಂದು ಶಾಸಕ ಖಂಡ್ರೆ ಟೀಕಿಸಿದ್ದಾರೆ.

ನರೇಗಾ ಯೋಜನೆಯಡಿ ಕೆಲಸ ಮಾಡಿದ ಬಡ ಕೂಲಿ ಕಾರ್ಮಿಕರಿಗೆ ನೀಡಬೇಕಾಗಿರುವ ಹಣವನ್ನು ಕೇಂದ್ರ ಸರ್ಕಾರ ಮೂರು ತಿಂಗಳುಗಳಿಂದ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು. ತುಮಕೂರಿನ ಶ್ರೀ ಸಿದ್ದಗಂಗಾ ಮಠ ಪವಿತ್ರ ಸ್ಥಳದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಕೀಯ ಮಾತನಾಡಿದ್ದು, ಪ್ರಧಾನ ಮಂತ್ರಿಯಂಥ ಉನ್ನತ ಹುದ್ದೆ ಆಲಂಕರಿಸಿದವರಿಗೆ ಶೋಭೆ ತರುವಂಥಹದ್ದಲ್ಲ. ಪ್ರಧಾನ ಮಂತ್ರಿ ತುಮಕೂರು ಭೇಟಿ ಸಂದರ್ಭದಲ್ಲಿ ರಾಜ್ಯದಲ್ಲಿನ ಶಿಕ್ಷಣದ ಗುಣಮಟ್ಟ ಸುಧಾರಣೆ ಬಗ್ಗೆ ಮಾತನಾಡಲಿಲ್ಲ. ಬದಲಿಗೆ ಬರೀ ರಾಜಕೀಯ ಮಾತಗಳನ್ನಾಡಿ ಜನರನ್ನು ಮೋಡಿ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ತುಮಕೂರು ಭೇಟಿಯಿಂದ ರಾಜ್ಯದ ಜನರಿಗೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು