ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ನಗರಸಭೆ ಚುನಾವಣೆ: ಮತ ಎಣಿಕೆಗೆ ಸಿದ್ಧತೆ

Last Updated 28 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೀದರ್: ಬೀದರ್ ನಗರಸಭೆ ಹಾಗೂ ಹಳ್ಳಿಖೇಡ (ಬಿ) ಪಟ್ಟಣ ಪಂಚಾಯಿತಿಯ ವಾರ್ಡ್ ಸಂಖ್ಯೆ 11ರ ಉಪ ಚುನಾವಣೆ ಮತ ಎಣಿಕೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದ್ದಾರೆ.

ಬೀದರ್ ನಗರಸಭೆ ಚುನಾವಣೆಯ ಮತ ಎಣಿಕೆ ಶುಕ್ರವಾರ (ಏ.30) ಬೆಳಿಗ್ಗೆ 10ಕ್ಕೆ ನಗರದ ನೆಹರೂ ಕ್ರೀಡಾಂಗಣ ಸಮೀಪದ ಗುರುನಾನಕ ಪಬ್ಲಿಕ್ ಸ್ಕೂಲ್ ಹಾಗೂ ಹಳ್ಳಿಖೇಡ (ಬಿ) ಪಟ್ಟಣ ಪಂಚಾಯಿತಿಯ ವಾರ್ಡ್ ಸಂಖ್ಯೆ 11 ರ ಉಪ ಚುನಾವಣೆಯ ಮತ ಎಣಿಕೆ ಹುಮನಾಬಾದ್ ತಹಶೀಲ್ದಾರ್ ಕಚೇರಿಯಲ್ಲಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಕೋವಿಡ್ ಎರಡನೇ ಅಲೆ ಕಾರಣ ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾಗುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ ಎಣಿಕೆ ಕೇಂದ್ರಕ್ಕೆ ಬರುವ ಎಲ್ಲರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಗಮನ ಕೊಡುವಂತೆ ಆಯಾ ತಹಶೀಲ್ದಾರರು, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ: ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಯು ಬೆಳಿಗ್ಗೆ 6.30ಕ್ಕೆ ಆಯಾ ಮತ ಎಣಿಕೆ ಸ್ಥಳದಲ್ಲಿ ಹಾಜರಾಗಿ ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ತಪ್ಪಿದ್ದಲ್ಲಿ ಅಂತವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ 1951ರ 134ರ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಭ್ಯರ್ಥಿಗಳು, ಏಜೆಂಟರಿಗೆ ನಿರ್ದೇಶನ: ಗುರುನಾನಕ ಪಬ್ಲಿಕ್ ಸ್ಕೂಲ್‍ನ ಮತ ಎಣಿಕೆ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು, ಅವರ ಚುನಾವಣಾ ಏಜೆಂಟರು ಮತ್ತು ಎಣಿಕೆ ಏಜೆಂಟರು 72 ಗಂಟೆಗಳ ಮೊದಲು ತೆಗೆದುಕೊಂಡ ಆರ್‍ಟಿಪಿಸಿಆರ್ ನಕಾರಾತ್ಮಕ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

ಸ್ವ್ಯಾಬ್ ಸಂಗ್ರಹ ಕೌಂಟರ್:
ಮತ ಎಣಿಕೆ ಕೇಂದ್ರಕ್ಕೆ ಬರುವವರೆಲ್ಲರೂ ಕಡ್ಡಾಯ ಆರ್‍ಟಿಪಿಸಿಆರ್ ನಕಾರಾತ್ಮಕ ಪ್ರಮಾಣಪತ್ರ ಹೊಂದಿರಬೇಕು ಎನ್ನುವ ಸೂಚನೆ ಕಾರಣ ಜಿಲ್ಲಾಧಿಕಾರಿ ಬುಧವಾರ ನಗರದ ಹಳೆಯ ಆಸ್ಪತ್ರೆಯಲ್ಲಿ ವಿಶೇಷ ಸ್ವ್ಯಾಬ್ ಸಂಗ್ರಹ ಕೌಂಟರ್ ತೆರೆಸಿ ಅಭ್ಯರ್ಥಿಗಳು ಮತ್ತು ಎಣಿಕೆಯ ಏಜೆಂಟರಿಗೆ ಅನುಕೂಲ ಮಾಡಿಕೊಟ್ಟರು.

ಆರೋಗ್ಯ ಇಲಾಖೆಯಿಂದ ಐದು ಜನ ಸ್ವ್ಯಾಬ್ ಸಂಗ್ರಹ ಸಿಬ್ಬಂದಿ ಮತ್ತು ರ್ಯಾಟ್ ಪರೀಕ್ಷೆಯ ಸಿಬ್ಬಂದಿಯನ್ನು ಗುರುನಾನಕ ಪಬ್ಲಿಕ್ ಸ್ಕೂಲ್ ಪ್ರವೇಶ ದ್ವಾರದಲ್ಲಿ ನಿಯೋಜಿಸಿ, ಆರ್‌ಟಿಪಿಸಿಆರ್ ವರದಿ ತರದ ಮತ ಎಣಿಕೆ ಸಿಬ್ಬಂದಿ ಮತ್ತು ಏಜೆಂಟರ ರ್ಯಾಟ್ ಪರೀಕ್ಷೆ ಸ್ಥಳದಲ್ಲಿಯೇ ನಡೆಸಿ, ನೆಗೆಟಿವ್ ಇದ್ದಲ್ಲಿ ಎಣಿಕೆ ಸ್ಥಳಕ್ಕೆ ತೆರಳಲು ಅನುಮತಿ ಕೊಡಬೇಕು. ಪಾಸಿಟಿವ್ ಇದ್ದಲ್ಲಿ ಕ್ವಾರಂಟೈನ್ ಆಗಲು ಮರಳಿ ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮೊಬೈಲ್ ನಿಷೇಧ:
ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಯಾರೂ ಮೊಬೈಲ್‍ಗಳನ್ನು ತರಬಾರದು. ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಕಡ್ಡಾಯವಾಗಿ ಪಾಸ್‍ಗಳನ್ನು ಧರಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT