ಶುಕ್ರವಾರ, ಅಕ್ಟೋಬರ್ 30, 2020
26 °C
ಪರಿಸರ ಪ್ರೇಮಿಗಳು, ರೈತರಲ್ಲಿ ಸಂಗೀತದ ಪುಳಕ

PV Facebook Live | ಜನಪದ ಸೊಗಡು ಪರಿಚಯಿಸಿದ ಕಲಾವಿದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಬೀದರ್‌: ಇಲ್ಲಿಯ ಮೈಲೂರ್‌ ಕ್ರಾಸ್‌ನಲ್ಲಿರುವ ಮಹಾಲಕ್ಷ್ಮಿ ಫಂಕ್ಷನ್‌ಹಾಲ್‌ನಲ್ಲಿ ಬುಧವಾರ ಮುಸ್ಸಂಜೆಯಲ್ಲಿ ನಡೆದ ‘ಏನು ಮಾಡಿ ಏನು ಬಂತಣ್ಣ? ಓ ರೈತಣ್ಣ..’ ಪ್ರಜಾವಾಣಿ ಫೇಸ್‌ಬುಕ್‌ ಲೈವ್ ಕಾರ್ಯಕ್ರಮ ಜನಮನ ಸೆಳೆಯಿತು. ನಾಡಿನ ಜನತೆಗೆ ಹೊಸದೊಂದು ಅನುಭವ ನೀಡಿತು.

ಮಸರಾಯಿ ಧೋತರ, ಜುಬ್ಬಾ ಹಾಗೂ ತಲೆಗೆ ಬಣ್ಣದ ಪೇಟಾ ಕಟ್ಟಿಕೊಂಡಿದ್ದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ನೇತೃತ್ವದ ತಂಡದವರು ರೈತ ಹಾಗೂ ಪರಿಸರ ಗೀತೆಗಳನ್ನು ಹಾಡಿದರು. ಇನ್ನುಳಿದ ಕಲಾವಿದರು ಕಂದು, ತಿಳಿ ಹಳದಿ ಬಣ್ಣದ ಜುಬ್ಬಾ, ತಿಳಿ ಬಿಳಿ ಬಣ್ಣದ ಧೋತರ ಹಾಗೂ ಸೊಂಟಕ್ಕೆ ಶಲ್ಯ ಕಟ್ಟಿಕೊಂಡು ಗ್ರಾಮೀಣ ಸೊಗಡಿನೊಂದಿಗೆ ಜನಪದ ಗೀತೆಗಳಿಗೆ ಜೀವ ತುಂಬಿದರು.

ಕಳೆದ ಬಾರಿಯ ಉತ್ತರ ಕರ್ನಾಟಕದ ಕವಿಗಳ ಜನಪ್ರಿಯ ಹಾಡುಗಳ ಲೈವ್‌ನಲ್ಲಿ ಬೀದರ್‌ ಜಿಲ್ಲೆಯ ಕಲಾವಿದರು ಅತ್ಯುತ್ತಮ ಕಾರ್ಯಕ್ರಮ ನೀಡುವ ಮೂಲಕ ನಾಡಿನ ಜನ ಹುಬ್ಬೇರಿಸುವಂತೆ ಮಾಡಿದ್ದರು. ಬುಧವಾರದ ಕಾರ್ಯಕ್ರಮದಲ್ಲಿ ಬೀದರ್‌ನ ಕಲಾವಿದರು ಕಲ್ಯಾಣ ನಾಡಿನ ಜಾನಪದ ಸೊಗಡನ್ನು ಪರಿಚಯಿಸಿದರು.

ಸಂಗೀತ ಸ್ವರಗಳ ಏರಿಳಿತ, ಹಾಡುಗಳಲ್ಲಿನ ಶಬ್ದಗಳ ಜುಗಲ್ ಬಂದಿ, ಕಲಾವಿದರ ಹಾವಭಾವಗಳು ಕಾರ್ಯಕ್ರಮಕ್ಕೆ ಕಳೆಗಟ್ಟಿದ್ದವು. ಸಂಗೀತ ಕಲಾವಿದರು ತಮ್ಮ ಮಾಂತ್ರಿಕ ಬೆರಳುಗಳಿಂದ ಸುಮಧುರ ನಾದ ಸೃಷ್ಟಿಸಿದರು.

ಶೋಭಾ ಕಲೆ, ಸಾಂಸ್ಕೃತಿಕ ಟ್ರಸ್ಟ್‌ ಅಧ್ಯಕ್ಷ ಶಂಭುಲಿಂಗ ವಾಲ್ದೊಡ್ಡಿ ರೈತ ಗೀತೆಗಳನ್ನು ಪ್ರಸ್ತುತ ಪಡಿಸಿದರು. ‘ಏನು ಮಾಡಿ ಏನು ಬಂದಿತಣ್ಣ, ಓ ರೈತಣ್ಣ ಯಾತಕ್ಕಾಗಿ ನಿನ್ನ ಬದುಕಣ್ಣ...’, ‘ಹಳ್ಳದ ಹೊಲದಾಗ, ಹತ್ತಿಯ ಬೆಳೆ ಚಂದ, ಎಳ್ಳಿನ ಸಾಲಿನಾಗ ಚಲುವು ಹಸಿರುಬಣ್ಣ...’, ‘ಅಕ್ಕ ತಂಗಿ ಅವ್ವದೇರೆ, ಚಿತ್ತವಿಟ್ಟು ಕೇಳ್ರೇವ್ವ ಒಲಿದೊರು ಹುಟ್ಟಿಬಂದ್ರು ಸತ್ತಾಂಗ್ರೇವ್ವ...,’ ‘ಕಾಡು ಬೆಳೆಸಿರಣ್ಣ ನೀವು ನಾಡು ಉಳಿಸಿರಣ್ಣ....’ ಹಾಡು ಹಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡರು.

ಕಲಾವಿದರ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅವರು ಸುಗ್ಗಿಯ ಹಾಡುಗಳನ್ನು ಪ್ರಸ್ತುತ ಪಡಿಸಿದರು. ‘ಬೆಳಗುವ ಬೆಳ್ಳಿ ಚುಕ್ಕೆಮೂಡಿತೊ, ಬೆಳಗಾಯಿತು ಏಳು...’ ಎನ್ನುವ ಹಾಡು ಹಾಡಿ ರೈತರಲ್ಲಿ ಪುಳಕ ಉಂಟು ಮಾಡಿದರು.

ಕಲಾವಿದ ಸುನೀಲ ಕಡ್ಡೆ ಅವರು ‘ಎಲ್ಲಿ ಹೋದವೊ..ಕಣ್ಣಿಗೆ ಕಾಣದಾದವೊ.. ಆ ಗಿಡಮರ ಬಳ್ಳಿ...’ ಮೊದಲಾದ ಪರಿಸರ ಗೀತೆಗಳನ್ನು ಹಾಡಿದರು. ಕಲಾವಿದ ಎಂ.ಎಸ್.ಮನೋಹರ ಅವರು ‘ಕಾಡು ಬೆಳೆಸಿರಣ್ಣ, ನಾಡು ಉಳಿಸಿರಣ್ಣ.....’ ಎನ್ನುವ ಪರಿಸರ ಗೀತೆಯನ್ನು ಹಾಡಿದರು. ಹಾಡಿನ ಮೂಲಕವೇ ಮುಂದಿನ ಪೀಳಿಗಾಗಿ, ನಾಡಿನ ಸಮೃದ್ಧಿಗಾಗಿ ಪರಿಸರ ಉಳಿಸುವಂತೆ ಮನವಿ ಮಾಡಿಕೊಂಡರು.

ಜನಪದ ಕಲಾವಿದರ ಬಳಗದ ಜಿಲ್ಲಾ ಕಾರ್ಯದರ್ಶಿ ಸಹ ಕಲಾವಿದ ಯೇಸುದಾಸ್ ಅಲಿಯಂಬುರೆ ಗಾಯಕರಿಗೆ ಸಾಥ್ ನೀಡಿದರು. ಶಿವಕುಮಾರ ಪಾಂಚಾಳ ಕೀಬೋರ್ಡ್‌, ಕಿರಣ ಹಿರೇಮಠ ಹಾರ್ಮೋನಿಯಂ, ಸಂಗಮೇಶ ಹೂಗಾರ ಡೋಲಕ್, ದಿನೇಶ ಕಪಲಾಪುರ ತಬಲಾ ಸಾಥ್‌ ನೀಡಿದರು. ನಿರಂಜನ ಮರಕಲ್‌ ಗಾಯನಕ್ಕೆ ಅನುಗುಣವಾಗಿ ತಾಳ ಬಾರಿಸಿದರು. ಜಾನಪದ ಕಲಾವಿದರ ಗಾಯನಕ್ಕೆ ಸಂಗೀತ ಬೆಸೆದುಕೊಂಡು ಶೋತೃಗಳನ್ನು ಮೋಡಿ ಮಾಡಿತು.

ಕಾರ್ಯಕ್ರಮ ನಡೆಯುವಾಗಲೇ ಅನೇಕ ಕಲಾಭಿಮಾನಿಗಳು ಸ್ಥಳಕ್ಕೆ ಬಂದು ಕಲಾವಿದರನ್ನು ಅಭಿನಂದಿಸಿ ಹುರಿದುಂಬಿಸಿದರು. ಪ್ರಜಾವಾಣಿ ಜಿಲ್ಲಾ ವರದಿಗಾರ ಚಂದ್ರಕಾಂತ ಮಸಾನಿ ಸ್ವಾಗತಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು