ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪದಿಂದ ಮುಕ್ತಿ ಹೊಂದಲು ತಪಸ್ಸು ಅಗತ್ಯ: ಶಿವಕುಮಾರ ಸ್ವಾಮೀಜಿ ಅಭಿಮತ

ಪ್ರವಚನ ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿ ಅಭಿಮತ
Last Updated 28 ಮಾರ್ಚ್ 2023, 12:32 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ‘ಮನುಷ್ಯ ಪಾಪದಿಂದ ಮುಕ್ತಿ ಹೊಂದಲು ತ್ರಿವಿಧ ತಪಸ್ಸು ಅವಶ್ಯಕ’ ಎಂದು ಬೀದರ್‌ನ ಸಿದ್ಧಾರೂಢ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಹೇಳಿದರು.

ಸಮೀಪದ ಚಳಕಾಪುರ ಗ್ರಾಮದಲ್ಲಿ ಸಿದ್ಧಾರೂಢರ ಜಯಂತ್ಯುತ್ಸವದ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದ ಐದನೇ ದಿನ ‘ತ್ರಿವಿಧ ತಪ’ ವಿಷಯದ ಬಗ್ಗೆ ಮಾತನಾಡಿದರು.

ತ್ರಿವಿಧ ತಪವೆಂದರೆ ಶಾರೀರಿಕ, ಮಾನಸಿಕ ಹಾಗೂ ವಾಣಿ ಎಂದರ್ಥ. ಬೇರೆಯವರ ಬಗ್ಗೆ ಕೆಟ್ಟದ್ದನ್ನು ಆಲೋಚನೆ ಮಾಡದೇ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು. ಬೇರೆಯವರ ಜತೆ ಕಪಟದಿಂದ ವ್ಯವಹರಿಸದಿರುವುದು ಮಾನಸಿಕ ತಪಸ್ಸು ಎಂದು ಹೇಳಿದರು.

ಸದಾ ಶುಚಿತ್ವದಿಂದ ದೇವರ ಧ್ಯಾನ ಮಾಡುವುದು. ಅಹಿಂಸೆಯನ್ನು ಪಾಲಿಸುವುದು ಶಾರೀರಿಕ ತಪಸ್ಸಾಗಿದೆ. ಇತರರಿಗೆ ನೋವುಂಟಾಗುವಂತೆ ಮಾತನಾಡದೇ ಹಿತವಾದದ್ದನ್ನು ಹಾಗೂ ಸತ್ಯವನ್ನೇ ಹೇಳುವುದೇ ವಾಚಕ ತಪಸ್ಸಾಗಿದೆ ಎಂದು ತಿಳಿಸಿದರು.

ಮುಚಳಂಬದ ಪ್ರಣವಾನಂದ ಸ್ವಾಮೀಜಿ ಮಾತನಾಡಿ,‘ತಪಸ್ಸು ಮಾಡುವುದರಿಂದ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಬಹುದು’ ಎಂದರು.

ಸೈದಾಪುರದ ಸೋಮೇಶ್ವರಾನಂದ ಸ್ವಾಮೀಜಿ ಮಾತನಾಡಿ,‘ಮಾನವ ಮತ್ತು ಪ್ರಾಣಿಗಳಿಗೆ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಊಟ, ನಿದ್ರೆ , ಭಯ ಎಲ್ಲವೂ ಒಂದೇ ರೀತಿಯಾಗಿರುತ್ತದೆ. ಆದರೆ ಧರ್ಮ ತಪಸ್ಸು ಮನುಷ್ಯ ಮಾತ್ರ ಮಾಡಲು ಸಾಧ್ಯ. ಅದು ನಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತದೆ’ ಎಂದು ತಿಳಿಸಿದರು.

ಕಲಬುರಗಿಯ ಲಕ್ಷ್ಮೀತಾಯಿ, ಜಡಿಸಿದ್ದೇಶ್ವರ ಸ್ವಾಮೀಜಿ, ಪರಮಾನಂದ ಸ್ವಾಮೀಜಿ ಹಾಗೂ ಸುಶಾಂತ ತಾಯಿ ಇದ್ದರು.

ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ, ಹಲಬರ್ಗಾ, ಕಣಜಿ ಸೇರಿದಂತೆ ಇನ್ನಿತರ ಗ್ರಾಮಗಳ ಸಾವಿರಾರು ಜನರು ಸಿದ್ಧಾರೂಢರ ಜಯಂತ್ಯುತ್ಸವದಲ್ಲಿ ಭಾಗಿಯಾಗಲು ಪಾದಯಾತ್ರೆ ಮೂಲಕ ಚಳಕಾಪುರಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT