ಸೋಮವಾರ, ಆಗಸ್ಟ್ 2, 2021
26 °C

ಹುಲಸೂರ: ಸೌಲಭ್ಯ ವಂಚಿತ ಪಶು ಆಸ್ಪತ್ರೆ

ಬಸವಕುಮಾರ ಕವಟೆ Updated:

ಅಕ್ಷರ ಗಾತ್ರ : | |

Prajavani

ಹುಲಸೂರ: ಪಟ್ಟಣದಲ್ಲಿರುವ ಪಶು ಆಸ್ಪತ್ರೆ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಜಾನುವಾರು ಚಿಕಿತ್ಸೆಗಾಗಿ ಇಲ್ಲಿನ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪರದಾಡುವಂತಾಗಿದೆ.

ಐವತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈ ಆಸ್ಪತ್ರೆ ಕಟ್ಟಡವನ್ನು ನವೀಕರಣ ಮಾಡಿಲ್ಲ. ಛಾವಣಿ ಸೋರುತ್ತಿರುವ ಕಾರಣ ಮಳೆಗಾಲದಲ್ಲಿ ಇಲ್ಲಿನ ಸಿಬ್ಬಂದಿ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಛಾವಣಿ ಕುಸಿಯುವ ಭೀತಿ ಇರುವುದರಿಂದ ಇಲ್ಲಿನ ಸಿಬ್ಬಂದಿ ಜೀವಭಯದಲ್ಲೆ ಕೆಲಸ ಮಾಡುವಂತಾಗಿದೆ. ಅಲ್ಲದೆ ಮಳೆ ನೀರು ಆಸ್ಪತ್ರೆಯ ಒಳಗಡೆ ಬಂದು ನಿಲ್ಲುತ್ತಿದ್ದು, ವೈದ್ಯಕೀಯ ಉಪಕರಣಗಳನ್ನು ಸುರಕ್ಷಿತವಾಗಿಡಲು ತೀವ್ರ ತೊಂದರೆಯಾಗುತ್ತಿದೆ.

ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಸಮರ್ಪಕ ಜಾಗದ ವ್ಯವಸ್ಥೆಯಿಲ್ಲ. ತುರ್ತು ಸೇವೆಗಾಗಿ ಆಂಬುಲೆನ್ಸ್ ಕೂಡ ಇಲ್ಲ. ಗೋಡೆಗಳು ಹಸಿಯಾಗಿರುವ ಕಾರಣ ಯಾವಾಗ ಬೇಕಾದರೂ ಕುಸಿದು ಬೀಳಬಹುದು ಎಂಬ ಭೀತಿ ಕಾಡುತ್ತಿದೆ. ಇಲ್ಲಿನ ಸುತ್ತಮುತ್ತಲಿನ ಹಳ್ಳಿಗಳ ಜನರು ತಮ್ಮ ಜಾನುವಾರುಗಳನ್ನು ಇಲ್ಲಿಗೆ ತರುತ್ತಾರೆ. ಆದರೆ ಅವರಿಗೆ ಕುಳಿತುಕೊಳ್ಳಲು ಇಲ್ಲಿ ಯಾವ ಸೌಲಭ್ಯವೂ ಇಲ್ಲದಂತಾಗಿದೆ.

ಆಸ್ಪತ್ರೆಯ ಸಹಾಯಕ ನಿರ್ದೇಶಕ, ಜಾನುವಾರು ಅಭಿವೃದ್ಧಿ ಅಧಿಕಾರಿ, ವಿಸ್ತರಣಾ ಅಧಿಕಾರಿ, ಹಿರಿಯ ಪಶುವೈದ್ಯಕೀಯ ಪರಿವೀಕ್ಷಕ, ಪಶುವೈದ್ಯ, ಸಹಾಯಕ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಕೇವಲ ಒಬ್ಬ ವೈದ್ಯಾಧಿಕಾರಿ ಹಾಗೂ ಸಹಾಯಕ ಮಾತ್ರ ಆಸ್ಪತ್ರೆಯಲ್ಲಿದ್ದು, ಜಾನುವಾರು ಚಿಕಿತ್ಸೆಗೆ ತೀವ್ರ ತೊಂದರೆಯಾಗುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ಆಸ್ಪತ್ರೆಗೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಕೂಡಲೇ ಆಸ್ಪತ್ರೆ ಕಟ್ಟಡವನ್ನು ನೆಲಸಮಗೊಳಿಸಿ, ಇದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಬೇಕು ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಜೆಡಿಎಸ್ ಮುಖಂಡ ಆಕಾಶ ಖಂಡಾಳೆ ಆಗ್ರಹಿಸಿದ್ದಾರೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು