ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗಾಗಿ ರೋಗಿಗಳ ಪರದಾಟ

ಮುಚ್ಚಿರುವ ಕ್ಲಿನಿಕ್, ಒಪಿಡಿ ಸೌಲಭ್ಯ ನಿರಾಕರಣೆ ; ಹೆಚ್ಚಿದ ಆತಂಕ
Last Updated 4 ಏಪ್ರಿಲ್ 2020, 17:22 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾಡಳಿತ ಲಾಕ್‌ಡೌನ್‌ ಘೋಷಿಸಿದ ನಂತರ ಜಿಲ್ಲೆಯ ಬಹುತೇಕ ಕ್ಲಿನಿಕ್‌ಗಳು ಬಾಗಿಲು ಮುಚ್ಚಿವೆ. ಖಾಸಗಿ ಆಸ್ಪತ್ರೆಗಳು ತೆರೆದಿದ್ದರೂ ಅಲ್ಲಿ ತುರ್ತು ಚಿಕಿತ್ಸೆ ಮಾತ್ರ ನೀಡಲಾಗುತ್ತಿದೆ. ಬ್ರಿಮ್ಸ್‌ನಲ್ಲಿ ಹೊರ ರೋಗಿಗಳ ಚಿಕಿತ್ಸೆ ಆರಂಭಿಸಲಾಗಿದೆ. ಸೋಂಕಿತರು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಜನ ಇಲ್ಲಿಗೆ ಬರಲು ಹಿಂಜರಿಯುತ್ತಿದ್ದಾರೆ.

ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯದಲ್ಲಿ ಲಾಕ್‌ಡೌನ್ ಮಾಡಿದರೂ ಅಗತ್ಯ ಸೇವೆಗಳನ್ನು ಜನರಿಗೆ ಒದಗಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಬ್ರಿಮ್ಸ್‌ ಆಸ್ಪತ್ರೆಯಲ್ಲಿ ತೀವ್ರ ಸ್ವರೂಪದ ಕಾಯಿಲೆ ಇದ್ದರೆ ಮಾತ್ರ ಚಿಕಿತ್ಸೆ ಕೊಡಲಾಗುತ್ತಿದೆ. ಉಳಿದವರನ್ನು ಆಸ್ಪತ್ರೆಯ ಸಿಬ್ಬಂದಿ ವಾಪಸ್‌ ಕಳಿಸುತ್ತಿದ್ದಾರೆ.

ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿಲ್ಲ. ಕೆಲ ವೈದ್ಯರು ಆಸ್ಪತ್ರೆಯಲ್ಲಿ ದಾಖಲಾದರೆ ಮಾತ್ರ ಚಿಕಿತ್ಸೆ ಕೊಡುವುದಾಗಿ ಹೇಳುತ್ತಿದ್ದಾರೆ. ತೀವ್ರ ತಲೆನೋವು, ಹೊಟ್ಟೆ ನೋವು ಕಾಣಿಸಿಕೊಂಡವರು ಅನ್ಯ ಮಾರ್ಗವಿಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ರೋಗಿಗಳು ಖಾಸಗಿ ಆಸ್ಪತ್ರೆಯವರು ಹೇಳಿದಷ್ಟು ಬಿಲ್‌ ಪಾವತಿಸಿ ಚಿಕಿತ್ಸೆ ಪಡೆದು ಮನೆಗಳಿಗೆ ತೆರಳುತ್ತಿದ್ದಾರೆ.

ಒಂದು ವಾರದಿಂದ ವಾತಾವರಣದಲ್ಲಿ ಏರುಪೇರು ಆಗುತ್ತಿದೆ. ಎರಡು ದಿನಗಳ ಹಿಂದೆ ಜಿಟಿ ಜಿಟಿ ಮಳೆಯಾದರೆ, ಶನಿವಾರ ದಿನವೀಡಿ ಮೋಡ ಕವಿದ ವಾತಾವರಣ ಇತ್ತು. ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಹಳ್ಳಿಯ ಜನ ಜ್ವರ, ನೆಗಡಿ, ಕಮ್ಮು ಕಾಣಿಸಿಕೊಂಡರೂ ಗಾಬರಿಗೊಳ್ಳುತ್ತಿದ್ದಾರೆ.

ಮಧುಮೇಹ ಹಾಗೂ ರಕ್ತದೊತ್ತಡದಂತಹ ರೋಗಿಗಳು ಕಡ್ಡಾಯವಾಗಿ ಒಂದು ವಾರ ಅಥವಾ ಎರಡು ವಾರಕ್ಕೊಮ್ಮೆ ತಪಾಸಣೆ ಮಾಡಿಕೊಳ್ಳಬೇಕು. ಕೆಲವೊಮ್ಮೆ ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ಬದಲಿಸಬೇಕು. ಅನೇಕ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಕ್ಲಿನಿಕ್‌ಗಳ ವೈದ್ಯರು ಸೇವೆ ಕೊಡದ ಕಾರಣ ರೋಗಿಗಳಿಗೆ ತೊಂದರೆಯಾಗಿದೆ.

ಶುಕ್ರವಾರ ಹಾಗೂ ಶನಿವಾರ ಖಾಸಗಿ ಆಸ್ಪತ್ರೆಗಳಲ್ಲಿನ ಮೆಡಿಕಲ್‌ ಹಾಗೂ ಬ್ರಿಮ್ಸ್‌ ಬೋಧಕ ಆಸ್ಪತ್ರೆ ಸಮೀಪದ ಎರಡು ಮೆಡಿಕಲ್‌ಗಳನ್ನು ಬಿಟ್ಟರೆ ನಗರದಲ್ಲಿ ಬೇರೆ ಮೆಡಿಕಲ್‌ ಸ್ಟೋರ್‌ಗಳು ತೆರೆದುಕೊಂಡಿರಲಿಲ್ಲ. ಹೀಗಾಗಿ ರೋಗಿಗಳು ಮಾತ್ರೆಗಳಿಗಾಗಿ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಜಿಲ್ಲಾಧಿಕಾರಿ ಘೋಷಿಸಿದ ರೆಡ್‌ಅಲರ್ಟ್‌ನ ಮೂರು ಕಿ.ಮೀ ಪರಿಧಿಯಲ್ಲಿ ಒಂದು ಕ್ಲಿನಿಕ್‌ ತೆರೆದುಕೊಂಡಿಲ್ಲ. ಮೆಡಿಕಲ್‌ಗಳಲ್ಲಿ ವೈದ್ಯರು ಬರೆದ ಚೀಟಿ ಇದ್ದರೆ ಮಾತ್ರ ಮಾತ್ರೆಗಳನ್ನು ಕೊಡುತ್ತಿದ್ದಾರೆ. ತಲೆ ನೋವು ಬಂದರೂ ಕ್ಲಿನಿಕ್‌ಗಳನ್ನು ಹುಡುಕಿಕೊಂಡು ಹೋಗಬೇಕಾಗಿದೆ ಎಂದು ನಗರದ ನಿವಾಸಿ ಶಿವಯೋಗಿ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT