ಶನಿವಾರ, ಡಿಸೆಂಬರ್ 4, 2021
20 °C
ಮಳೆಗಾಲ ಮುಗಿಯುತ್ತಿದ್ದರೂ ನೀರಿಲ್ಲ, ನಗರದ ಬಾವಿಗಳಿಗೆ ಕೆರೆ ಜೀವಾಳ

ನೀರಿಲ್ಲದೆ ಭಣಗುಡುತ್ತಿದೆ ತ್ರಿಪುರಾಂತ ಕೆರೆ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಮಳೆಗಾಲ ಆರಂಭವಾಗಿ 4 ತಿಂಗಳಾಗುತ್ತಿದ್ದರೂ ಈ ಭಾಗದ ದೊಡ್ಡ ತ್ರಿಪುರಾಂತ ಕೆರೆ ಮಾತ್ರ ನೀರಿಲ್ಲದೆ ಭಣಗುಡುತ್ತಿದೆ. ಉತ್ತಮ ಮಳೆಯಾದರೂ ಕೆರೆಯಲ್ಲಿ ನೀರು ಸಂಗ್ರಹ ಆಗದಿರುವುದಕ್ಕೆ ಸೋಜಿಗ ವ್ಯಕ್ತಪಡಿಸಲಾಗುತ್ತಿದೆ.

ಇದು ಮಹತ್ವದ ಐತಿಹಾಸಿಕ ಕೆರೆಯಾಗಿದೆ. 12ನೇ ಶತಮಾನದಲ್ಲಿ ಇದನ್ನು ನಿರ್ಮಿಸಿರುವುದನ್ನು ಇದರಲ್ಲಿ ಆಗಾಗ ಅಗೆಯುವ ಕಾರ್ಯ ನಡೆದಾಗ ಕೆಲ ಪುರಾತನ ಅವಶೇಷಗಳು ದೊರೆತಿವೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಹೂಳು ತೆಗೆಯುತ್ತಿದ್ದಾಗ ಮಧ್ಯ ಭಾಗದಲ್ಲಿ ಕೆತ್ತನೆ ಕಂಬಗಳ ಮಂಟಪಗಳು ಹಾಗೂ ಏರಿ ಭಾಗದಲ್ಲಿ ಪುಷ್ಕರಣಿಯ ಮೆಟ್ಟಿಲುಗಳ ಕೆತ್ತನೆಯ ಕಲ್ಲುಗಳು ದೊರೆತಿವೆ. ಹೀಗಾಗಿ ಇಲ್ಲಿ ದೊಡ್ಡ ಮಟ್ಟದಲ್ಲಿ ಉತ್ಖನನದ ಕೆಲಸ ನಡೆಯಬೇಕಾಗಿದ್ದರೂ ಸಂಬಂಧಿತರು ಕಣ್ಣುಮುಚ್ಚಿ ಕುಳಿತಿರುವುದಕ್ಕೆ ಕಾರಣ ಗೊತ್ತಾಗುತ್ತಿಲ್ಲ.

ಅದೇನೇ ಇದ್ದರೂ ಈ ಕೆರೆ ಸುತ್ತಲಿನ ಸಾವಿರಾರು ಎಕರೆ ಜಮೀನುಗಳಲ್ಲಿನ ಬಾವಿಗಳಿಗೆ ಹಾಗೂ ನಗರದ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳ ನೀರಿಗೆ ಜೀವಾಳವಾಗಿದೆ. ಇದರಲ್ಲಿ ಹೆಚ್ಚಿನ ನೀರು ಇದ್ದರೆ ಮಾತ್ರ ನಗರದಲ್ಲಿನ ಕುಡಿಯುವ ನೀರಿನ ಮೂಲಗಳು ಬತ್ತುವುದಿಲ್ಲ. ಈ ಕಾರಣ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಈ ಸಲದ ಮಳೆಗಾಲದಲ್ಲಿ ತಳಮಟ್ಟದಲ್ಲಿಯೂ ಪೂರ್ಣವಾಗಿ ನೀರು ನಿಲ್ಲದಿರುವ ಕಾರಣ ಜನರಿಗೆ ಚಿಂತೆಯಾಗಿದೆ.

ಕೇಂದ್ರ ಸರ್ಕಾರದ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ₹4 ಕೋಟಿ ಮಂಜೂರಾಗಿದ್ದರಿಂದ ಅಲ್ಲಲ್ಲಿನ ಹೂಳು ತೆಗೆಯಲಾಗಿದ್ದರೂ ಪೂರ್ಣ ಪ್ರಮಾಣದ ಕೆಲಸ ನಡೆದಿಲ್ಲ. ಈಚೆಗೆ ಸಣ್ಣ ನೀರಾವರಿ ಇಲಾಖೆಯವರು ಕೆರೆಯಲ್ಲಿ ಬಸವಣ್ಣನವರ ಹಾಗೂ ಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಸ್ಥಾಪಿಸುವುದಕ್ಕಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರಾದರೂ ಅದಕ್ಕೆ ಮಂಜೂರಾತಿ ದೊರೆತಿಲ್ಲ.

 ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಕೆರೆ ದಂಡೆಯಲ್ಲಿ ಉದ್ಯಾನ ಹಾಗೂ ವಾಕಿಂಗ್ ಪಾಥ್ ನಿರ್ಮಿಸಿದ್ದರೂ ಒಳಗಿನ ಕೆಲಸ ಮಾತ್ರ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೊಳಪಡಿಸಿದ್ದರಿಂದ ಸಮಸ್ಯೆಯಾಗಿದೆ.

‘ಕೆರೆ ಪುನಶ್ಚೇತನ ಕಾರ್ಯ ಕೈಗೆತ್ತಿಕೊಳ್ಳಲು ಆಗ್ರಹಿಸಿ ಈಚೆಗೆ ಉಪ ವಿಭಾಗಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಗಿದೆ. ಕೆರೆಗೆ ಬರುವ ನೀರು ಬೇರೆಡೆ ಸಾಗುತ್ತಿರುವ ಕಾರಣ ಕೆರೆ ತುಂಬುತ್ತಿಲ್ಲ' ಎಂದು ಜನಪರ ಸಂಘಟನೆ ಮುಖ್ಯಸ್ಥ ಶಿವಕುಮಾರ ಬಿರಾದಾರ ಹೇಳಿದ್ದಾರೆ.

‘ಕೊಂಗಳಿ ಬ್ಯಾರೇಜ್‌ನಿಂದ ತ್ರಿಪುರಾಂತ ಕೆರೆ ಒಳಗೊಂಡು 15 ಕೆರೆಗಳಲ್ಲಿ ನೀರು ತುಂಬುವ ಯೋಜನೆ ಜಾರಿಗೊಂಡಿದ್ದು, ಅದರ ಕಾರ್ಯ ತೀವ್ರಗೊಳಿಸಲು ನೀರಾವರಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿಪತ್ರ ಸಲ್ಲಿಸಲಾಗಿದೆ’ ಎಂದು ಮುಖಂಡ ಶರಣು ಸಲಗರ ಹೇಳಿದ್ದಾರೆ.

‘ಬಸವಕಲ್ಯಾಣ ಬಸವಾದಿ ಶರಣರ ಕಾರ್ಯಕ್ಷೇತ್ರವಾಗಿದೆ. ಈ ಸ್ಥಳ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬೇಕಾದರೆ ಕೆರೆಯ ಅಭಿವೃದ್ಧಿ ನಡೆದು ಅದರಲ್ಲಿ ನೀರು ತುಂಬಿಕೊಂಡಿರುವುದು ಅಗತ್ಯವಾಗಿದೆ’ ಎಂದು ನಗರಸಭೆ ಮಾಜಿ ಸದಸ್ಯ ರವೀಂದ್ರ ಕೊಳಕೂರ ಅಭಿಪ್ರಾಯಪಟ್ಟಿದ್ದಾರೆ.

‘ಕೆರೆಯ ಸುತ್ತಲಿನಲ್ಲಿ ಶರಣ ಸ್ಮಾರಕಗಳಿದ್ದು ಕೆರೆ ತುಂಬಿದರೆ ಅವುಗಳಿಗೆ ಹೊಸಕಳೆ ಬರುತ್ತದೆ' ಎನ್ನುತ್ತಾರೆ ಸಂಜೀವ ಮೆಟಗೆ, ಸಿದ್ದು ಬೋರಗೆ, ಸಾಗರ ಶಾಶೆಟ್ಟೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು