ಗುರುವಾರ , ಮಾರ್ಚ್ 4, 2021
29 °C
ಸಮಗ್ರ ಶೀತಲ ಸರಪಳಿ ಘಟಕ ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ ಭರವಸೆ

ಜಿಲ್ಲೆಗೆ ₹1 ಕೋಟಿ ಮೌಲ್ಯದ ತಾಡಪತ್ರಿ: ಬಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ‘ಬೀದರ್‌ ಜಿಲ್ಲೆಯ ರೈತರಿಗೆ ತಾಡಪತ್ರಿಗಳ ಹೆಚ್ಚಿನ ಅನುಕೂಲಕ್ಕಾಗಿ ₹1 ಕೋಟಿ ಅನುದಾನವನ್ನು ನೀಡಲಾಗುವುದ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಚೆಕ್ ಪೋಸ್ಟ್‌ ಹತ್ತಿರದ ಸಮಗ್ರ ಶೀತಲ ಸರಪಳಿ ಘಟಕವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರಿಗೆ ಶೀತಲ ಸರಪಳಿ ಘಟಕ ಅತೀ ಮುಖ್ಯವಾಗಿದ್ದು, ತಾವು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸಮರ್ಪಕವಾದ ಬೆಲೆ ಸಿಗದಿದ್ದಾಗ ಈ ಶೀತಲ ಘಟಕವನ್ನು ಸದುಪಯೋಗ ಪಡಿಸಿಕೊಂಡು ಉತ್ಪನಗಳಿಗೆ ಬೆಲೆ ಬಂದಾಗ ಮಾರಾಟ ಮಾಡಬಹುದು’ ಎಂದರು.

‘ರೈತರು ಕೃಷಿ ಮಾಡುವ ಮೊದಲು ತಮ್ಮ ಹೊಲಗಳ ಮಣ್ಣು ಪರೀಕ್ಷಿಸಿದರೆ ಸರಳವಾಗಿ ಬೆಳೆ ಬೆಳೆಯಲು ಸಾಧ್ಯ. ಕೃಷಿ ಜತೆಗೆ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಮೇಕೆ ಸಾಕಾಣಿಕೆ ಮಾಡಿದರೆ ಆದಾಯ ಹೆಚ್ಚು ಮಾಡಬಹುದು’ ಎಂದು ರೈತರಿಗೆ ಸಲಹೆ ಮಾಡಿದರು.

ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ‘ಹುಮನಾಬಾದ್ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ₹37 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದ್ದು, ಅದರಲ್ಲಿ ಕೇವಲ ₹7 ಕೋಟಿ ಮಾತ್ರ ಪರಿಹಾರ ಬಂದಿದೆ. ಆದರೆ ರೈತರು ಕಷ್ಟ ಅನುಭವಿಸುತ್ತಿದ್ದು ಬಾಕಿ ಇರುವ ಇನ್ನು ₹30 ಕೋಟಿಯನ್ನು ತಕ್ಷಣ ಒದಗಿಸಿಕೊಡಬೇಕು’ ಎಂದು ಒತ್ತಾಯಿಸಿದರು.

‘ಈ ಭಾಗದ ರೈತರಿಗೆ ನೀರಾವರಿ ಯೋಜನೆಗಳು ಇಲ್ಲ. ರೈತರು ಕೊಳವೆ ಮತ್ತು ತೆರೆದ ಬಾವಿಗಳ ಆಧಾರದ ಮೇಲೆ ಕೃಷಿ ಮಾಡುತ್ತಿದ್ದು, ರೈತರ ಅನೂಕುಲಕ್ಕಾಗಿ ನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡಬೇಕು’ ಎಂದು ಕೃಷಿ ಸಚಿವರಿಗೆ ಮನವಿ ಮಾಡಿದರು.

‘ಜಿಲ್ಲೆಯ ಏಕೈಕ ಸಮಗ್ರ ಶೀತಲ ಘಟಕ ಇದಾಗಿದ್ದು, ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಬೆಂಗಳೂರು ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ಬಿ. ಶಿವರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ‘ಸರ್ಕಾರದ ಅನುದಾನದಲ್ಲಿ ಈ ಶೀತಲ ಘಟಕವನ್ನು ಸ್ಥಾಪಿಸಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಮತ್ತು ದಾಳೆಂಬೆಗಳಂತಹ ತೋಟಗಾರಿಕ ಬೆಳೆಗಳನ್ನು ಉತ್ಪಾದನೆ ಮಾಡಿಕೊಂಡು ರೈತರು ಇದರ ಪೂರ್ತಿ ಪ್ರಮಾಣದ ಸದುಉಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಬೆಂಗಳೂರು ಕೆಪೆಕ್ ಸಂಸ್ಥೆಯ ಅಧ್ಯಕ್ಷ ಎಸ್.ಐ. ಚಿಕ್ಕನಗೌಡ್ಡ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ಉಪಾಧ್ಯಕ್ಷೆ ಸುಗಂದಾ ಅಣ್ಣೆಪ್ಪಾ, ಸದಸ್ಯ ರಾಮರಾವ್, ಚಿಟಗುಪ್ಪ ತಾ.ಪಂ ಅಧ್ಯಕ್ಷ ಬೀರಪ್ಪ ಮಾರ್ತಂಡ, ಸದಸ್ಯ ಶ್ರೀಮಂತ ಪಾಟೀಲ, ಟಿಎಪಿಸಿಎಂಸಿ ಅಧ್ಯಕ್ಷ ಅಭಿಷೇಕ ಪಾಟೀಲ, ಬಿಜೆಪಿ ಮುಖಂಡರಾದ ಸುಭಾಷ ಕಲ್ಲೂರ್, ಸೂರ್ಯಕಾಂತ ನಾಗಮಾರಪಳ್ಳಿ, ಮೋಳಕೇರಾ ಗ್ರಾ.ಪಂ ಅಧ್ಯಕ್ಷೆ ಚೈತ್ರಾಂಜಲಿ ಮಾಣಿಕಪ್ಪಾ, ಆರ್.ರವೀಂದ್ರ, ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ, ಬಸವಕಲ್ಯಾಣ ಕೃಷಿ ಉಪನಿರ್ದೇಶಕ ಸೂರ್ಯಕಾಂತ ಬಿರಾದಾರ, ತಾಲ್ಲೂಕು ಕೃಷಿ ಅಧ್ಯಕ್ಷ ವಿಶ್ವನಾಥ ಪಾಟೀಲ, ತಾ.ಪಂ ಇಒ ವೈಜಣ್ಣ ಪುಲೆ, ಪಶು ಇಲಾಖೆಯ ಅಧಿಕಾರಿ ಡಾ.ಗೋವಿಂದ ಇದ್ದರು.

ಸಜ್ಜನಶೆಟ್ಟಿ ಹಾಗೂ ಅವರ ತಂಡದವರು ಪ್ರಾರ್ಥನೆ ಗೀತೆ, ನಾಡಗೀತೆ, ರೈತಗೀತೆಯನ್ನು ಪ್ರಸ್ತುತಪಡಿಸಿದರು.

ಸಹಾಯಕ ನಿರ್ದೇಶಕ ಪಿ.ಎಂ.ಮಲ್ಲಿಕಾರ್ಜುನ ಸ್ವಾಗತಿಸಿದರು.

‘ಸಿ.ಎಂ ಸ್ಪಂದನೆ’

‘ಕೃಷಿ ಕಾಲೇಜಿನಲ್ಲಿ ರೈತರ ಮಕ್ಕಳಿಗೆ 50 ಪ್ರತಿಶತ ಸ್ಥಾನ, ರೈತರು ಕೃಷಿ ಚಟುವಟಿಕೆಯಲ್ಲಿ ಆಕಸ್ಮಿಕ ಮರಣ ಹೊಂದಿದ್ದಲ್ಲಿ ₹5 ಲಕ್ಷ ಮತ್ತು ಹುಲ್ಲಿನ ಬಣವೆಗಳಿಗೆ ಬೆಂಕಿ ತಗುಲಿದ್ದಲ್ಲಿ ₹50 ಸಾವಿರ ನೀಡುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

‘ಸಕ್ಕರೆ ಕಾರ್ಖಾನೆ ಆರಂಭಿಸಿ’

‘ಎರಡು ವರ್ಷಗಳಿಂದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಬಂದ್‌ ಆಗಿದ್ದು, ಮುಖ್ಯಮಂತ್ರಿಗಳು ಇದರ ಪುನರ್‌ ಆರಂಭದ ಭರವಸೆ ನೀಡಿದ್ದರು. ಆದರೆ ಇನ್ನು ಪ್ರಾರಂಭವಾಗಿಲ್ಲ. ಇದು ನಮ್ಮ ಭಾಗದ ರೈತರ ಜೀವನಾಡಿಯಾಗಿದ್ದು ಕಬ್ಬು ಬೆಳೆಗಾರರು ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ತಕ್ಷಣ ಈ ಕಾರ್ಖಾನೆಯನ್ನು ಪ್ರಾರಂಭಿಸಬೇಕು’ ಎಂದು ಶಾಸಕ ರಾಜಶೇಖರ ಪಾಟೀಲ ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು