ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ರೈತರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ!

ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದೆ ಉಳ್ಳಾಗಡ್ಡಿ; ದಿಢೀರ್‌ ಕುಸಿದ ಬೆಲೆ
Published 27 ಮಾರ್ಚ್ 2024, 5:06 IST
Last Updated 27 ಮಾರ್ಚ್ 2024, 5:06 IST
ಅಕ್ಷರ ಗಾತ್ರ

ಬೀದರ್‌: ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವುದರಿಂದ ಅದರ ಬೆಲೆ ದಿಢೀರ್‌ ಕುಸಿದಿದೆ. ಇದರ ಪರಿಣಾಮ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬರಗಾಲದ ನಡುವೆಯೂ ಈ ಸಲ ಈರುಳ್ಳಿ ಉತ್ತಮ ಇಳುವರಿ ಬಂದಿತ್ತು. ಮಾರುಕಟ್ಟೆಯಲ್ಲಿ ಬೆಲೆಯೂ ಹೆಚ್ಚಿತ್ತು. ಸಹಜವಾಗಿಯೇ ಹೆಚ್ಚಿನ ಆದಾಯ ಗಳಿಸುವ ನಿರೀಕ್ಷೆಯಲ್ಲಿ ಈರುಳ್ಳಿ ಬೆಳೆಗಾರರು ಇದ್ದರು. ಆದರೆ, ದಿಢೀರ್‌ ಕುಸಿದ ಬೆಲೆಯಿಂದ ರೈತರು ಕಂಗಾಲಾಗುವಂತೆ ಮಾಡಿದೆ.

ತೋಟಗಾರಿಕೆ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಒಂದು ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಹೆಚ್ಚಿನ ಕಡೆ ಉತ್ತಮ ಫಸಲಿದೆ. ಕೆಲವೆಡೆ ಈಗಾಗಲೇ ಕಟಾವು ಮುಗಿದರೆ, ಕೆಲವು ಕಡೆ ಪ್ರಗತಿಯಲ್ಲಿದೆ. ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರ್ಗಾ ಗ್ರಾಮ ಒಂದರಲ್ಲೆ 200 ಎಕರೆಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇಳುವರಿಯೂ ಉತ್ತಮವಾಗಿದೆ.

ಸ್ಥಳೀಯವಾಗಿ ಬೆಳೆದ ಈರುಳ್ಳಿ ಜೊತೆಗೆ ಇತರೆ ಜಿಲ್ಲೆಗಳಿಂದಲೂ ಬರುತ್ತಿದೆ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಿಂದಲೂ ಆಮದಾಗುತ್ತಿದೆ. ಹೀಗೆ ಹೆಚ್ಚಿನ ಪ್ರಮಾಣದಲ್ಲಿ ಎಲ್ಲ ಕಡೆಗಳಿಂದಲೂ ಉಳ್ಳಾಗಡ್ಡಿ ಬರುತ್ತಿರುವುದರಿಂದ ಈರುಳ್ಳಿ ಬೆಳೆಗಾರರಿಗೆ ಕಣ್ಣೀರು ತರಿಸಿದೆ. ಆರ್ಥಿಕವಾಗಿ ಸಂಕಷ್ಟಕ್ಕೆ ತಳ್ಳಿದೆ.

‘ಸಗಟು ಮಾರುಕಟ್ಟೆಯಲ್ಲಿ ದಪ್ಪ ಹಾಗೂ ಮಧ್ಯಮ ಗಾತ್ರದ ಈರುಳ್ಳಿ ಪ್ರತಿ ಕ್ವಿಂಟಲ್‌ ಬೆಲೆ ₹1800ರಿಂದ ₹2000ದ ವರೆಗೆ ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ₹20ರಿಂದ ₹25ರ ವರೆಗೆ ಮಾರಾಟವಾಗುತ್ತಿತ್ತು. ಈಗ ಪ್ರತಿ ಕೆ.ಜಿ. ಈರುಳ್ಳಿ ₹15ಕ್ಕೆ ಕುಸಿದಿದೆ. ಸಣ್ಣ ಈರುಳ್ಳಿ ಬೆಲೆ ಹತ್ತು ರೂಪಾಯಿ ಆಸುಪಾಸಿನಲ್ಲಿದೆ. ಸಗಟು ಬೆಲೆ ಪ್ರತಿ ಕ್ವಿಂಟಲ್‌ಗೆ ₹1100ರಿಂದ ₹1200ಕ್ಕೆ ಕುಸಿದಿದೆ’ ಎಂದು ಈರುಳ್ಳಿ ಬೆಳೆಗಾರ ಚಂದ್ರಕಾಂತ ವಿವರಿಸಿದರು.

‘ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಬೇಕಾದರೆ ಕನಿಷ್ಠ ₹45ರಿಂದ ₹50 ಸಾವಿರದ ವರೆಗೆ ಖರ್ಚು ಬರುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಹಾಕಿದ ಬಂಡವಾಳ ಹೊರತುಪಡಿಸಿ ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತದೆ. ಆದರೆ, ಈಗ ಬೆಲೆ ಕುಸಿತದಿಂದ ಹಾಕಿದ ಬಂಡವಾಳವೂ ಕೈಸೇರುವ ಸಾಧ್ಯತೆ ಕ್ಷೀಣಿಸಿದೆ’ ಎಂದು ಗೋಳು ತೋಡಿಕೊಂಡರು.

ಮಾರುಕಟ್ಟೆಗೆ ಹೋಗಲು ಸಿದ್ಧವಾಗಿರುವ ಈರುಳ್ಳಿ ಮೂಟೆಗಳು
ಮಾರುಕಟ್ಟೆಗೆ ಹೋಗಲು ಸಿದ್ಧವಾಗಿರುವ ಈರುಳ್ಳಿ ಮೂಟೆಗಳು

ಎಲ್ಲ ಕಡೆಗಳಿಂದಲೂ ಈರುಳ್ಳಿ ಜಾಸ್ತಿ ಪ್ರಮಾಣದಲ್ಲಿ ಬರುತ್ತಿದೆ. ಬೇಡಿಕೆ ಕಡಿಮೆ ಇದೆ. ಪೂರೈಕೆ ಹೆಚ್ಚಿಗಿರುವುದರಿಂದ ಬೆಲೆ ಕುಸಿದಿದೆ.

–ವಿಶ್ವನಾಥ ಝಿಳ್ಳೆ ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಅತಿವೃಷ್ಟಿ ಅನಾವೃಷ್ಟಿ ಅಥವಾ ಬೆಲೆ ಕುಸಿತದಿಂದ ರೈತರು ಪ್ರತಿ ಸಲ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ನೆರವಿಗೆ ಬರಬೇಕು.

–ಶಿವಾಜಿ ಈರುಳ್ಳಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT