ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್| ನೆಲ ಕಚ್ಚಿದ ಬೆಳೆ: ಗ್ರಾಹಕನಿಗೆ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಏರಿಕೆ ಬಿಸಿ

Last Updated 20 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಹಾಗೂ ನೆರೆಯ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ಪಶ್ಚಿಮ ಭಾಗದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ನದಿ, ಕೆರೆಗಳಲ್ಲೂ ನೀರಿಲ್ಲ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಅತಿವೃಷ್ಟಿಯಾಗಿರುವ ಕಾರಣ ತರಕಾರಿ ಬೆಳೆ ನೆಲ ಕಚ್ಚಿದೆ. ಇದರಿಂದ ಈರುಳ್ಳಿ ಕೊರತೆ ಉಂಟಾಗಿ ಸಹಜವಾಗಿಯೇ ಮೂರು ಪಟ್ಟು ಬೆಲೆ ಹೆಚ್ಚಿದೆ.

ಮಹಾರಾಷ್ಟ್ರದ ನಾಸಿಕ್‌ ಹಾಗೂ ಸತಾರಾ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಇಲ್ಲಿಯ ಈರುಳ್ಳಿಯೇ ಹೈದರಾಬಾದ್‌ ಕರ್ನಾಟಕದ ಬಹುತೇಕ ಜಿಲ್ಲೆಗಳ ಮಾರುಕಟ್ಟೆಗೆ ಬರುತ್ತಿದೆ. ಮುಂಗಾರಿನ ಆರಂಭದಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿಗೆ ಕನಿಷ್ಠ ₹ 15ರ ವರೆಗೂ ಕುಸಿದಿತ್ತು. ಕಳೆದ ವಾರ ₹ 30 ಇದ್ದ ಬೆಲೆ ಒಂದು ವಾರದ ಅವಧಿಯಲ್ಲಿ ದುಪ್ಪಟ್ಟಾಗಿದೆ.

‘ಪ್ರಸ್ತುತ ಸೋಲಾಪುರದಿಂದ ಬೀದರ್‌ ಮಾರುಕಟ್ಟೆಗೆ ಈರುಳ್ಳಿ ಬರುತ್ತಿದೆ. ಮಹಾರಾಷ್ಟ್ರದ ಇನ್ನುಳಿದ ಜಿಲ್ಲೆಗಳಲ್ಲೂ ಬೇಡಿಕೆ ಹೆಚ್ಚಿದ್ದರಿಂದ ಸಹಜವಾಗಿಯೇ ಬೆಲೆ ಹೆಚ್ಚುತ್ತಿದೆ. ಸದ್ಯದ ಸ್ಥಿತಿಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗುವುದು ಕಷ್ಟ. ಒಂದು ತಿಂಗಳ ಅವಧಿಯಲ್ಲೇ ಏರುಮುಖವಾಗಲಿದೆ’ ಎಂದು ಗಾಂಧಿಗಂಜ್ ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ ಹೇಳುತ್ತಾರೆ.

ತಿಂಗಳ ಹಿಂದೆ ಈರುಳ್ಳಿ ಬೆಲೆ ಕುಸಿದಿದ್ದರಿಂದ ವ್ಯಾಪಾರಿಗಳು ಬೀದಿ ಬೀದಿಗಳಿಗೆ ಬಂದು 25 ಕೆ.ಜಿ ತೂಕದ ಈರುಳ್ಳಿ ಚೀಲಗಳನ್ನು ಮಾರಾಟ ಮಾಡಿ ಹೋಗಿದ್ದಾರೆ. ಮುಂಚೆಯೇ ಖರೀದಿಸಿ ಇಟ್ಟುಕೊಂಡಿರುವವರಿಗೆ ಅನುಕೂಲವಾಗಿದೆ. ಖಾನಾವಳಿ, ಹೋಟೆಲ್‌ಗಳ ಮಾಲೀಕರಿಗೆ ತರಕಾರಿ ಬೆಲೆ ಹೆಚ್ಚಳದ ಬಿಸಿ ತಟ್ಟಿದೆ.

ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಅಧಿಕ ಅಂದರೆ ಪ್ರತಿ ಕೆಜಿಗೆ ₹ 160ಗೆ ಮಾರಾಟವಾಗುತ್ತಿದೆ. ಕೊತಂಬರಿ ಹಾಗೂ ಮೆಂತೆ ಸೊಪ್ಪಿನ ಬೆಲೆ ಪ್ರತಿ ಕ್ವಿಂಟಲ್‌ಗೆ ದಿಢೀರ್‌ ₹ 2 ಸಾವಿರ, ಹಿರೇಕಾಯಿ, ಬೀನ್ಸ್, ಗಜ್ಜರಿ, ಎಲೆಕೋಸು ತಲಾ ಒಂದು ಸಾವಿರ ರೂಪಾಯಿ, ಟೊಮೆಟೊ ₹ 500 ಹೆಚ್ಚಳವಾಗಿದೆ.

ಬದನೆಕಾಯಿ, ಬೆಂಡೆಕಾಯಿ, ಹೂಕೋಸು, ಆಲೂಗಡ್ಡೆ, ಬೀಟ್‌ರೂಟ್‌, ಪಾಲಕ್, ಸಬ್ಬಸಗಿ ಬೆಲೆ ಸ್ಥಿರವಾಗಿದೆ. ಕರಿಬೇವು ಪ್ರತಿ ಕ್ವಿಂಟಲ್‌ಗೆ ₹ 7 ಸಾವಿರ, ತೊಂಡೆಕಾಯಿ ₹ 2 ಸಾವಿರ ಹಾಗೂ ಹಸಿ ಮೆಣಸಿಕಾಯಿ ₹ 500 ಕಡಿಮೆಯಾಗಿದೆ.

ನಗರದ ಮಾರುಕಟ್ಟೆಗೆ ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಆಲೂಗಡ್ಡೆ ಬಂದಿದೆ. ಹೈದರಾಬಾದ್‌ನಿಂದ ಬೀನ್ಸ್, ತೊಂಡೆಕಾಯಿ, ಗಜ್ಜರಿ, ಟೊಮೆಟೊ ಹಾಗೂ ಹಸಿ ಮೆಣಸಿನಕಾಯಿ ಆವಕವಾಗಿದೆ. ಜಿಲ್ಲೆಯ ಚಿಟಗುಪ್ಪ ಸುತ್ತಮುತ್ತ ಬೆಳೆದ ಹೂಕೋಸು, ಮೆಂತೆ, ಪಾಲಕ್, ಕರಿಬೇವು, ಬೆಂಡೆಕಾಯಿ, ಹಿರೇಕಾಯಿ ಬಂದಿದೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ ದರ

ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ
ಈರುಳ್ಳಿ 30-35, 50-60
ಮೆಣಸಿನಕಾಯಿ 25-30, 20-25
ಆಲೂಗಡ್ಡೆ 15-20, 15-20
ಎಲೆಕೋಸು 16-20, 25-30
ಬೆಳ್ಳುಳ್ಳಿ 140-150, 150-160
ಗಜ್ಜರಿ 45-50, 50-60
ಬೀನ್ಸ್‌ 60-70, 70-80
ಬದನೆಕಾಯಿ 60-70, 60-70
ಮೆಂತೆ ಸೊಪ್ಪು 40-50, 60-70
ಹೂಕೋಸು 60-70, 60-70
ಸಬ್ಬಸಗಿ 30-40, 30-40
ಬೀಟ್‌ರೂಟ್‌ 60-70, 60-70
ತೊಂಡೆಕಾಯಿ 60-70, 40-50
ಕರಿಬೇವು 90-100, 20-30
ಕೊತಂಬರಿ 40-50, 60-70
ಟೊಮೆಟೊ 15-20, 10-15
ಪಾಲಕ್ 30-40, 30-40
ಬೆಂಡೆಕಾಯಿ 30-40, 30-40
ಹಿರೇಕಾಯಿ 30-40, 40-50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT