ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಕೆಸ್ಟ್ರಾ ಧ್ವನಿ ಅಡಗಿಸಿದ ಕೋವಿಡ್- ಕಲಾವಿದರ ಜೀವನಕ್ಕೆ ಸಂಕಷ್ಟ

Last Updated 7 ಜೂನ್ 2021, 2:12 IST
ಅಕ್ಷರ ಗಾತ್ರ

ಔರಾದ್: ಮದುವೆ, ಮುಂಜಿಯಂತಹ ಶುಭ ಕಾರ್ಯಗಳಲ್ಲಿ ಹಾಡು, ನೃತ್ಯದ ಮೂಲಕ ಜನಮನ ತಣಿಸುವ ಜಿಲ್ಲೆಯ ಆರ್ಕೆಸ್ಟ್ರಾ ಕಲಾವಿದರ ಧ್ವನಿ ಅಡಗಿಸಿದ ಕೋವಿಡ್‌ ಅವರ ಬದುಕಿಗೆ ವಿಘ್ನ ತಂದಿದೆ.

ಕೋವಿಡ್‍ನಿಂದಾಗಿ ಮದುವೆ ಯಂತಹ ದೊಡ್ಡ ಸಮಾರಂಭಗಳಿಗೆ ನಿರ್ಬಂಧ ಬಿದ್ದ ಹಿನ್ನಲೆಯಲ್ಲಿ ಆರ್ಕೆಸ್ಟ್ರಾ ನಂಬಿ ಬದುಕುತ್ತಿರುವ ನೂರಾರು ಕಲಾವಿದರ ಪಾಡು ಮೂರಾಬಟ್ಟೆಯಂತಾಗಿದೆ.

‘ನಾವು ಐದು ಜನ ಕಲಾವಿದರು ಕೂಡಿಕೊಂಡು ವಚನಶ್ರೀ ಮ್ಯುಜಿಕಲ್ ಆರ್ಕೆಸ್ಟ್ರಾ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದೇವು. ಆದರೆ, ಕೋವಿಡ್ ನಮ್ಮ ಧ್ವನಿ ಕಸಿದುಕೊಂಡಿದೆ. ಕಳೆದ ವರ್ಷವೂ ಮದುವೆ ಸಮಾರಂಭದ ವೇಳೆ ಲಾಕ್‍ಡೌನ್ ಆಗಿ ನಮಗೆ ಕೆಲಸ ಸಿಕ್ಕಿಲ್ಲ. ಈ ವರ್ಷವೂ ಅದೇ ಪರಿಸ್ಥಿತಿ ಇದೆ. ಎರಡು ಲಕ್ಷ ಸಾಲ ಮಾಡಿ ಮ್ಯುಜಿಕಲ್ ಸಾಮಗ್ರಿ ತಂದಿದ್ದೇವೆ. ಅದು ತೀರಿಸುವ ಮೊದಲೇ ಅಘಾತ ನೀಡಿದೆ’ ಎಂದು ಕಲಾವಿದ ಅಮರ ಮುಕ್ತೆದಾರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಪ್ರತಿ ವರ್ಷ ಬೇಸಿಗೆಯಲ್ಲಿ 20 ರಿಂದ 25 ಕಾರ್ಯಕ್ರಮ ಕೊಡುತ್ತಿದ್ದೆವು. ಒಂದು ಕಾರ್ಯಕ್ರಮಕ್ಕೆ ₹12 ರಿಂದ ₹15 ಸಾವಿರ ಕೊಡುತ್ತಿದ್ದರು. ಒಂದು ಬೇಸಿಗೆಯಲ್ಲಿ ಒಬ್ಬೊಬ್ಬ ಕಲಾವಿದ ₹1 ಲಕ್ಷ ಹಣ ಮಾಡಿಕೊಳ್ಳುತ್ತಿದ್ದರು. ಆದರೆ ಎರಡು ವರ್ಷದಿಂದ ಒಂದೂ ಕಾರ್ಯಕ್ರಮ ಕೊಡಲು ಸಾಧ್ಯವಾಗದೆ ನಿತ್ಯದ ಬದುಕಿಗೂ ಸಂಕಷ್ಟ ತಂದಿದೆ’ ಎಂದು ಅವರು ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ನಮ್ಮಂತಹ 10-15 ಆರ್ಕೆಸ್ಟ್ರಾ ತಂಡಗಳಿವೆ. ಪೂರ್ಣವಾಗಿ ಕಲೆ ಮೇಲೆ ನಂಬಿಕೊಂಡ ಕೆಲ ಕಲಾವಿದರ ಬದುಕಂತೂ ತುಂಬಾ ಶೋಚನೀಯವಾಗಿದೆ’ ಎಂದು ವಚನ ಗಾಯನ ಕಲಾವಿದ ಮನೋಹರ ಕಾಡೋದೆ ಹೇಳುತ್ತಾರೆ.

‘ಲಾಕ್‍ಡೌನ್‍ನಿಂದ ತೊಂದರೆ ಗೊಳಗಾದ ರೈತರು, ಬೀದಿ ಬದಿ ವ್ಯಾಪಾರಿಗಳು, ಆಟೊ ಚಾಲಕರು ಸೇರಿದಂತೆ ಹಲವರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಕಲೆಯನ್ನೇ ನಂಬಿ ಬದುಕುತ್ತಿರುವ ನಮ್ಮಂತಹ ಕಲಾವಿದರಿಗೂ ಒಂದಿಷ್ಟು ನೆರವು ನೀಡಬೇಕು’ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT