ಸೋಮವಾರ, ಅಕ್ಟೋಬರ್ 18, 2021
24 °C
ಅಂಬೇಡ್ಕರ್ ಓದು ಕಾರ್ಯಕ್ರಮ: ಸಾಹಿತಿ ಚಲುವಾ ಅಭಿಮತ

ಸಂವಿಧಾನದಿಂದ ಕ್ರಮಬದ್ಧ ಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಾಗಿಯೇ ದೇಶದ 135 ಕೋಟಿ ಜನ ಕ್ರಮಬದ್ಧ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಹಿರಿಯ ಸಾಹಿತಿ ಡಾ. ಕಾಶೀನಾಥ ಚಲುವಾ ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಪರಿಷತ್ ಸಹಯೋಗದಲ್ಲಿ ಇಲ್ಲಿಯ ಬಿ.ವಿ. ಭೂಮರಡ್ಡಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ‘ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನವು ದೇಶದ ಅಭಿವೃದ್ಧಿ, ಸೌಹಾರ್ದ ಹಾಗೂ ಶಾಂತಿ ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ಡಾ.ಅಂಬೇಡ್ಕರ್ ಅವರು ಬಾಲ್ಯದಲ್ಲಿ ಬಹಳಷ್ಟು ಕಷ್ಟ ಅನುಭವಿಸಿದರು. ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಸಾಧನೆ ಮಾಡಿದರು. ದೀನ ದಲಿತರು, ಶೋಷಿತರು ಸೇರಿದಂತೆ ಸರ್ವರಿಗೂ ಸಂವಿಧಾನದಲ್ಲಿ ಸಮಾನ ಹಕ್ಕು ಹಾಗೂ ಅವಕಾಶ ಕಲ್ಪಿಸಿದರು ಎಂದು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಪ್ರವೀಣಕುಮಾರ ಮೀರಾಗಂಜಕರ್ ಹೇಳಿದರು.

ಡಾ. ಅಂಬೇಡ್ಕರ್ ಅವರಲ್ಲಿ ಓದಿನ ಹಸಿವು ಇತ್ತು. ಅದರಿಂದಲೇ ಅವರು ಜ್ಞಾನ ಸಂಪಾದಿಸಿದರು. ದೇಶದ ಸಂವಿಧಾನ ರಚಿಸಿದರು. ಯುವ ಪೀಳಿಗೆ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಅರಿಯಬೇಕು. ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ತಿಳಿಸಿದರು.

ಅಂಬೇಡ್ಕರ್ ಅವರ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಅಶ್ವಿನಿ ಸಂಜೀವಕುಮಾರ (ಪ್ರಥಮ), ದಿವ್ಯಾರಾಣಿ ಶ್ರೀನಾಥ (ದ್ವಿತೀಯ), ಭಾಗ್ಯಶ್ರೀ ನಾಗನಾಥ (ತೃತೀಯ), ಕಿರಣಕುಮಾರ ವೈಜಿನಾಥ ಮತ್ತು ಶ್ರೇಯಾ ಸುಭಾಷ (ಸಮಾಧಾನಕರ ಬಹುಮಾನ) ಅವರಿಗೆ ಬಹುಮಾನ ರೂಪದಲ್ಲಿ ಗ್ರಂಥಗಳನ್ನು ವಿತರಿಸಲಾಯಿತು.

ಕಲಾವಿದ ಶೇಷರಾವ್ ಬೆಳಕುಣಿಕರ, ತಾತೇರಾವ್ ಡಿಗ್ಗಿ ಹಾಗೂ ತಂಡದವರು ಜನಪದ ಹಾಗೂ ರಂಗ ಗೀತೆಗಳನ್ನು ಹಾಡಿ ನೆರೆದವರ ಮನ ತಣಿಸಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಪ್ರೊ. ಅನಿಲಕುಮಾರ ಆಣದೂರೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಗುರಪ್ಪ ಶೆಟಕಾರ, ಪ್ರೊ. ಸಂತೋಷ ರೈಕೋಟೆ ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಪರಿಷತ್ ಬೀದರ್ ನಗರ ಘಟಕದ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ಸ್ವಾಗತಿಸಿದರು. ಬಸವರಾಜ ಹೆಗ್ಗೆ ನಿರೂಪಿಸಿದರು. ಧನರಾಜ ಅಣಕಲೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು