ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಬೆಲ್ಲ: ಭೀಮ ರೆಡ್ಡಿಗೆ ಬಲ

Published 23 ಮಾರ್ಚ್ 2024, 5:23 IST
Last Updated 23 ಮಾರ್ಚ್ 2024, 5:23 IST
ಅಕ್ಷರ ಗಾತ್ರ

ಜನವಾಡ (ಬೀದರ್ ತಾಲ್ಲೂಕು): ರಸಾಯನಿಕ ಮುಕ್ತವಾಗಿ ಬೆಳೆದ ಸಾವಯವ ಬೆಲ್ಲಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಅದೇ ಸಾವಯವ ಬೆಲ್ಲ ಮನ್ನಳ್ಳಿ ಗ್ರಾಮದ ರೈತ ಭೀಮ ರೆಡ್ಡಿ ಮಾಣಿಕ ರೆಡ್ಡಿ ಅವರ ಬದುಕಿಗೆ ಬಲ ನೀಡಿದೆ.

ಒಂದು ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ 22 ಟನ್ ಕಬ್ಬು ಬೆಳೆದಿದ್ದರು. ಕಬ್ಬಿಗೆ ಪ್ರಸ್ತುತ ಟನ್‍ಗೆ ₹2,600 ಬೆಲೆ ಇದೆ. ಕಾರ್ಖಾನೆಗೆ ಕಳುಹಿಸಿದ್ದರೆ ಅವರಿಗೆ ₹57,200 ಸಿಗುತ್ತಿತ್ತು. ಕಬ್ಬಿಗೆ ಮಾಡಿದ ಖರ್ಚು ಹೊರತುಪಡಿಸಿದರೆ ₹20 ಸಾವಿರ ಮಾತ್ರ ಆದಾಯ ಬರುತ್ತಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಸಾವಯವ ಬೆಲ್ಲ ತಯಾರಿಸಿದ್ದು, ಈಗ ₹80 ಸಾವಿರ ಆದಾಯದ ನಿರೀಕ್ಷೆಯಲ್ಲಿದ್ದಾರೆ.

‘ನಾಲ್ಕು ಎಕರೆ ಜಮೀನಿನ ಪೈಕಿ ಒಂದು ಎಕರೆಯಲ್ಲಿ ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆದಿದ್ದೇನೆ. ಕಾಡು ಹಂದಿ ಉಪಟಳದಿಂದಾಗಿ ಕೇವಲ 22 ಟನ್ ಇಳುವರಿ ಬಂದಿದ್ದು, ಬೆಲ್ಲ ತಯಾರಿಸಿದೆ. ಕಬ್ಬು ಕಾರ್ಖಾನೆಗೆ ಸಾಗಿಸುವುದಕ್ಕಿಂತ ನಾಲ್ಕು ಪಟ್ಟು ಅಧಿಕ ಆದಾಯ ಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ ರೈತ ಭೀಮ ರೆಡ್ಡಿ.

ಸಾವಯವ ಬೆಲ್ಲಕ್ಕೆ ಬೇಡಿಕೆ: ಸದ್ಯ ಮಾರುಕಟ್ಟೆಯಲ್ಲಿ ಸಾಮಾನ್ಯ ಬೆಲ್ಲದ ಬೆಲೆ ಪ್ರತಿ ಕೆ.ಜಿ.ಗೆ ₹40 ರಿಂದ ₹50 ಇದ್ದರೆ, ಸಾವಯವ ಬೆಲ್ಲಕ್ಕೆ ₹80 ಇದೆ. ಆದರೂ, ಗ್ರಾಹಕರು ಆಸಕ್ತಿಯಿಂದ ಖರೀದಿಸುತ್ತಾರೆ. ‘ಈ ಸಲ ತಯಾರಿಸಿದ 22 ಕ್ವಿಂಟಲ್ ಬೆಲ್ಲದಲ್ಲಿ ಈಗಾಗಲೇ 10 ಕ್ವಿಂಟಲ್ ಮಾರಾಟ ಆಗಿದೆ. ಉಳಿದ 12 ಕ್ವಿಂಟಲ್ ಪೈಕಿ 3 ಕ್ವಿಂಟಲ್‍ಗೆ ಆರ್ಡರ್ ಬಂದಿದೆ’ ಎಂದು ಹೇಳುತ್ತಾರೆ ಭೀಮ ರೆಡ್ಡಿ.

‘ಸಾವಯವ ಬೆಲ್ಲದಲ್ಲಿ ಔಷಧೀಯ ಗುಣಗಳು ಇವೆ. ರಕ್ತ ಶುದ್ಧೀಕರಣ, ಮೂತ್ರ ಉರಿಯುವಿಕೆ ಉಪಶಮನ ಮಾಡುತ್ತದೆ. ರಕ್ತ ಹೀನತೆ ನಿವಾರಿಸುತ್ತದೆ’ ಎಂದು ತಿಳಿಸುತ್ತಾರೆ.

‘15 ವರ್ಷದಿಂದ ಸಾವಯವ ಬೆಲ್ಲ ತಯಾರಿಸುತ್ತಿದ್ದೇನೆ. ಜಹೀರಾಬಾದ್‍ನ ಅಂಜಾರೆಡ್ಡಿ ಎನ್ನುವವರು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರಿಗಾಗಿ ನಮ್ಮಲ್ಲಿ ಬೆಲ್ಲ ಒಯ್ಯುತ್ತಾರೆ. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‍ನವರು ಖರೀದಿಸುತ್ತಾರೆ. ಬೆಳಗಾವಿ, ಕಲಬುರಗಿ ಸೇರಿದಂತೆ ವಿವಿಧೆಡೆಯಿಂದ ವೈದ್ಯರು, ಅಧಿಕಾರಿಗಳು ಕರೆ ಮಾಡಿ ತರಿಸಿಕೊಳ್ಳುತ್ತಾರೆ’ ಎಂದು ಹೇಳುತ್ತಾರೆ ಅವರು.

ಭೀಮ ರೆಡ್ಡಿ ಅವರ ಬಳಿ ಸಾವಯವ ಬೆಲ್ಲ ಖರೀದಿಸುತ್ತಿರುವ ಗ್ರಾಹಕರು
ಭೀಮ ರೆಡ್ಡಿ ಅವರ ಬಳಿ ಸಾವಯವ ಬೆಲ್ಲ ಖರೀದಿಸುತ್ತಿರುವ ಗ್ರಾಹಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT