ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ಬಸವರಾಜ ರೊಡ್ಡ ಕೈಹಿಡಿದ ‘ಖವಾ’

ಚಿಟಗುಪ್ಪ ತಾಲ್ಲೂಕಿನ ಮೀನಕೇರಾದಲ್ಲಿ ಆರ್ಥಿಕ ಸ್ವಾವಲಂಬನೆಗೆ ಖವಾ-, ಪನ್ನೀರ್ ಉದ್ಯಮ
ವೀರೇಶ್‌ ಎನ್.ಮಠಪತಿ
Published 7 ಮಾರ್ಚ್ 2024, 5:47 IST
Last Updated 7 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕೃಷಿ ಮುಖ್ಯ ಕಸುಬು. ಕೆಲವರು ನೇರವಾಗಿ ಕೃಷಿಯಲ್ಲಿ ತೊಡಗಿಕೊಂಡರೆ, ಕೆಲವರು ಕೃಷಿಯ ಉಪ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿ ಜೀವನ ಕಟ್ಟಿಕೊಂಡಿದ್ದಾರೆ.

ಉಪ ಉತ್ಪನ್ನದಲ್ಲಿ ಮುಖ್ಯವಾಗಿ ಹೈನುಗಾರಿಕೆ ಇಲ್ಲಿನ ರೈತರ, ಕೃಷಿ ಕಾರ್ಮಿಕರ ಆದಾಯದ ಮೂಲವಾಗಿದೆ. ತಾಲ್ಲೂಕಿನ ಶೇ 70ರಷ್ಟು ಗ್ರಾಮೀಣ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಯ ದಾರಿ ಕಂಡುಕೊಂಡಿದ್ದಾರೆ. 1984ರಿಂದ ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ರಾಜ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸ್ಥಾಪಿಸಿದ್ದು, ದಿನದಿಂದ ದಿನಕ್ಕೆ ಹಾಲಿನ ಉತ್ಪಾದನೆ ತಾಲ್ಲೂಕಿನಲ್ಲಿ ಸಮೃದ್ಧವಾಗಿದೆ.

ಗುಜರಾತಿನಲ್ಲಿ ಕ್ಷೀರಕ್ರಾಂತಿಗೆ ಕಾರಣರಾದ ವರ್ಗಿಸ್ ಕುರಿಯನ್ ಅವರು ಬೀದರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೀದರ್‌ ಜಿಲ್ಲೆ ಚಿಟಗುಪ್ಪ ತಾಲ್ಲೂಕಿನಲ್ಲಿಯ ಹಾಲಿನ ಸಮೃದ್ಧಿಯನ್ನು ನೋಡಿ 'ಪೈಪಿನ ಮೂಲಕ ಸಾಗಿಸುವಷ್ಟು ಪ್ರಮಾಣದ ಹಾಲು ಉತ್ಪಾದನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ’ ಎಂದಿದ್ದರು.

ತಾಲ್ಲೂಕಿನ ಮಿನಕೇರಾ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಗ್ರಾಮದ ಬಸವರಾಜ ರೊಡ್ಡ ಅವರು  ಖವಾ ಹಾಗೂ ಪನೀರ್‌ ತಯಾರಿಕೆಯಲ್ಲಿ ತೊಡಗಿದ್ದು, ಇವರ ಉತ್ಪನ್ನಕ್ಕೆ ಜಿಲ್ಲೆಯ ಹುಮನಾಬಾದ್‌, ಬಸವಕಲ್ಯಾಣ, ಕಲಬುರಗಿ ಜಿಲ್ಲೆಯ ಚಿಮ್ಮನಚೋಡ್‌, ಸುಲೆಪೇಟ, ಚಿಂಚೋಳಿ, ಕಲಬುರಗಿ, ತೆಲಂಗಾಣದ ಜಹಿರಾಬಾದ್‌ ಇತರೆಡೆಗಳಲ್ಲಿ ಬಹು ಬೇಡಿಕೆ ಇದೆ.

ಬಸವರಾಜ ಅವರು ನಿತ್ಯ ಮುಂಜಾನೆ, ಸಂಜೆ ತಮ್ಮದೇ ಆಟೊದಲ್ಲಿ ಸುತ್ತಲಿನ ಹಲವು ಗ್ರಾಮಗಳಿಗೆ ಹೋಗಿ ರೈತ ಮಹಿಳೆಯರಿಂದ ನೇರವಾಗಿ ಹಾಲು ಖರೀದಿಸಿ, ತಮ್ಮ ಮನೆಯಲ್ಲಿಯೇ ನಿರ್ಮಿಸಿದ ಭಟ್ಟಿಯಲ್ಲಿ ತಮ್ಮ ಪತ್ನಿ, ಮಗ ಅವರೊಂದಿಗೆ ಕೂಡಿ ಖವಾ ತಯಾರಿಸುತ್ತಿದ್ದಾರೆ.

‘ನಾನು ಹೇಳಿದಷ್ಟು ಹಣ ಕೊಟ್ಟು  ಖವಾ ಖರೀದಿಸುವ ಗ್ರಾಹಕರು ನನ್ನಲ್ಲಿದ್ದಾರೆ. ಹೀಗಾಗಿ ಗುಣಮಟ್ಟಕ್ಕೆ ಅತ್ಯಂತ ಹೆಚ್ಚಿನ ಒತ್ತುಕೊಟ್ಟು ಖವಾ ಸಿದ್ಧಪಡಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹ 400 ರಿಂದ 450ರ ವರೆಗೆ ಮಾರಾಟ ಮಾಡುತ್ತಿದ್ದೇನೆʼ ಎಂದು ಖವಾ ತಯಾರಕ ಬಸವರಾಜ ರೊಡ್ಡ ಹೇಳುತ್ತಾರೆ.

ಪ್ರತಿದಿನ ಕನಿಷ್ಠ 60-80 ಕೆ.ಜಿ ಖವಾ ಸಿದ್ಧಪಡಿಸಿ ಹೊಟೇಲ್‌ಗಳಿಗೆ ಸರಬರಾಜು ಮಾಡುತ್ತಾರೆ. ಹಲವರು ನೇರವಾಗಿ ಭಟ್ಟಿಗೆ ಬಂದು ಸ್ಥಳದಲ್ಲಿಯೇ ಖರೀದಿಸಿ ಹೋಗುತ್ತಾರೆ.

ಗರಿಗರಿಯಾಗಿ ಸಿದ್ಧಪಡಿಸಿದ ಖವಾ
ಗರಿಗರಿಯಾಗಿ ಸಿದ್ಧಪಡಿಸಿದ ಖವಾ

ಒಂದು ಲೀಟರ್‌ ಹಾಲಿಗೆ 200 ಗ್ರಾಂ ಖವಾ ತಯಾರಾಗುತ್ತದೆ. ಸರ್ಕಾರ ಹಾಲಿನ ಬೆಲೆ ಹೆಚ್ಚಳ ಮಾಡುತ್ತಿದೆ. ಆದರೆ ಖವಾ ಬೆಲೆ ಕಡಿಮೆ ಇದೆ. ಹೀಗಾಗಿ ಖವಾ ಉದ್ಯಮ ಸಂಕಷ್ಟದಲ್ಲಿದೆ. ನಮಗೂ ಪ್ರೋತ್ಸಾಹಧನ ನೀಡಬೇಕು ಎಂದು ಬಸವರಾಜ ಆಗ್ರಹಿಸುತ್ತಾರೆ.

‘ಕಳೆದ ಹತ್ತು ವರ್ಷಗಳಿಂದ ಮಿನಕೇರಾದಲ್ಲಿ ಖವಾ ಖರೀದಿ ಮಾಡುತ್ತಿದ್ದು, ಪರಿಶುದ್ಧತೆ, ಉತ್ತಮ ಗುಣಮಟ್ಟ ಹೊಂದಿದೆ. ಜಾಮೂನ್‌, ಹೋಳಿಗೆ, ಪಾಯಸ ಇತ್ಯಾದಿ ಸಹಿ ಪದಾರ್ಥಗಳು ಮಾಡಲು ತುಂಬ ಚನ್ನಾಗಿದೆʼ ಎಂದು ಗ್ರಾಹಕ ಗಜಾನನ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT