ಭಾನುವಾರ, ಸೆಪ್ಟೆಂಬರ್ 25, 2022
20 °C
ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

‘ಅಮೃತ’ ಧಾರೆಯಲ್ಲಿ ಮೊಳಗಿದ ದೇಶ ಭಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲಾಡಳಿತದ ವತಿಯಿಂದ ನಗರದ ಪೊಲೀಸ್‌ ಪರೇಡ್ ಮೈದಾನದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ 76ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಸಂದರ್ಭದಲ್ಲಿ ‘ಅಮೃತ’ ಧಾರೆಯಂತೆ ಸುರಿದ ಮಳೆಯಲ್ಲೇ ಶಾಲಾ ವಿದ್ಯಾರ್ಥಿಗಳು ಒಂದು ತಾಸು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ದೇಶ ಭಕ್ತಿ ಮೊಳಗಿಸಿದರು.

ಘೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ಶಾಲೆಯ 480 ವಿದ್ಯಾರ್ಥಿಗಳು, ಜನವಾಡದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 180 ವಿದ್ಯಾರ್ಥಿಗಳು ಹಾಗೂ ಮನ್ನಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 120 ವಿದ್ಯಾರ್ಥಿಗಳು ಸೇರಿ ಒಟ್ಟು 720 ವಿದ್ಯಾರ್ಥಿಗಳು ಅಮೃತ ಮಹೋತ್ಸವ ಲಾಂಛನ ನಿರ್ಮಾಣ ಮಾಡಿದರು.

75ರ ಸಂಖ್ಯೆ ಹಾಗೂ ತ್ರಿವರ್ಣದ ಸಮವಸ್ತ್ರ ಧರಿಸಿದ್ದ ಮಕ್ಕಳು ಧ್ವಜದ ಆಕಾರದಲ್ಲಿ ನಿಂತು ತಿಳಿ ನೀಲಿಯ ಬಟ್ಟೆಯಿಂದ ಚಕ್ರ ನಿರ್ಮಿಸಿ ತಿರುಗಿಸಿ ತಿರಂಗಾಕ್ಕೆ ಜೀವ ತುಂಬಿದರು. ಗ್ಯಾಲರಿಯಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಶಿಳ್ಳೆ ಹೊಡೆದು, ಕೇಕೆ ಹಾಕಿ ಸಂಭ್ರಮಿಸಿದರು.

ಪ್ರೇಕ್ಷಕರ ಒತ್ತಾಯದ ಮೇರೆಗೆ ಸುರಿಯುವ ಮಳೆಯಲ್ಲೇ ವಿದ್ಯಾರ್ಥಿಗಳು ಮತ್ತೊಮ್ಮೆ ಪ್ರದರ್ಶನ ನೀಡಿದರು. ಡ್ರೋಣ ಕ್ಯಾಮೆರಾ ಹಾಗೂ ವಿಡಿಯೊ ಮೂಲಕ ದೃಶ್ಯವನ್ನು ಸೆರೆ ಹಿಡಿದು ಮೈದಾನದ ಕ್ರೀಡಾಂಗಣದ ಎರಡೂ ಬದಿಗೆ ಅಳವಡಿಸಿದ್ದ ಪ್ಲಾಸ್ಮಾ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಯಿತು.

ಗುಂಪಾದ ಸಿದ್ಧಾರೂಢ ಪಬ್ಲಿಕ್‌ ಶಾಲೆಯ ಮಕ್ಕಳು ಕಾರ್ಗಿಲ್‌ ವಿಜಯೋತ್ಸವ ನೃತ್ಯ, ಮಂಗಲಪೇಟೆಯ ಮಡಿವಾಳೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಲೇಜಿಮ್ ನೃತ್ಯ ಪ್ರದರ್ಶಿಸಿದರು.

 
ಶಿವನಗರದ ಗುರುನಾನಕ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು ದೇಶ ರಂಗಿಲಾ, ರಂಗಿಲಾ ದೇಶ್‌ ಮೇ ರಂಗಿಲಾ... ಗೀತೆ ಹಾಡಿ ಭಾರತದ ಸಂಸ್ಕೃತಿಯನ್ನು ಬಿಂಬಿಸಿದರು. ಪಂಜಾಬ್, ಕಾಶ್ಮೀರ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್, ಕೇರಳ, ಗೋವಾ ಹಾಗೂ ಬಂಗಾಲದ ವೇಷಭೂಷಣದಲ್ಲಿ ನೃತ್ಯ ಪ್ರದರ್ಶಿಸಿ ವಿವಿಧತೆಯಲ್ಲಿ ಏಕತೆಯ ಭಾರತದ ವೈಶಿಷ್ಟವನ್ನು ಅನಾವರಣಗೊಳಿಸಿದರು.

 
ಮೈಲೂರಿನ ವಂದೇ ಮಾತರಂ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು ಭಗತಸಿಂಗ್‌, ಸುಖದೇವ ಹಾಗೂ ರಾಜಗುರು ಅವರ ದೇಶ ಪ್ರೇಮ ಹಾಗೂ ಹೋರಾಟದ ಚರಿತ್ರೆಯ ರೂಪಕ ಪ್ರದರ್ಶಿಸಿದರು. ಬ್ರಿಟಿಷರ ದಬ್ಬಾಳಿಕೆ, ಹಿಂಸೆಯ ನಡುವೆಯೂ ವೀರ ಸೇನಾನಿಗಳು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದನ್ನು ಕಣ್ಣು ಮುಂದೆ ಬಂದು ನಿಲ್ಲುವಂತೆ ಮಾಡಿದರು. ಕೊನೆಗೆ ಬ್ರಿಟಿಷರು ದೇಶ ಪ್ರೇಮಿಗಳನ್ನು ಗಲ್ಲಿಗೇರಿಸಿದ ದೃಶ್ಯ ಮನಕಲುಕುವಂತೆ ಮಾಡಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರಿ ಬಾಲ ಮಂದಿರದ ಮಕ್ಕಳು ದೇಶ ಭಕ್ತಿಗೀತೆಗೆ ಹೆಜ್ಜೆ ಹಾಕಿದರು. ಕೊನೆಯಲ್ಲಿ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಮೂಹ ನೃತ್ಯ ಪ್ರದರ್ಶಿಸಿದರು.

ಮೈದಾನದಲ್ಲಿ ಮುಂಜಾಗ್ರತಾ ಕ್ರಮವಾಗಿ ಮರಳು ಹಾಕಲಾಗಿತ್ತು. ಆದರೂ ಜಿಟಿ ಜಿಟಿ ಮಳೆಯಿಂದಾಗಿ ಮೈದಾನದಲ್ಲಿ ಕೆಸರು ತುಂಬಿಕೊಂಡಿತು. ಮಕ್ಕಳು ಸ್ವಲ್ಪವೂ ವಿಚಲಿತರಾಗದೇ ಕೆಸರಿನಲ್ಲಿ ಬಿದ್ದು ಹೊರಳಾಡಿ ನೃತ್ಯ ಪ್ರದರ್ಶಿಸಿ, ಪ್ರೇಕ್ಷಕರ ಮನಗೆದ್ದರು. ಮಕ್ಕಳು ಬೆಳಿಗ್ಗೆ 8 ಗಂಟೆಗೆ ಮೈದಾನಕ್ಕೆ ಬಂದಿದ್ದರಿಂದ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು