ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಧರಿಸದವರಿಗೆ ದಂಡದ ಬಿಸಿ

ನಗರದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಂಚಿನ ಸಂಚಾರ
Last Updated 9 ನವೆಂಬರ್ 2020, 15:44 IST
ಅಕ್ಷರ ಗಾತ್ರ

ಬೀದರ್: ‌‌‌ಕೋವಿಡ್‌ ಹರಡುವಿಕೆ ನಿಯಂತ್ರಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಜಿಲ್ಲಾಡಳಿತ ಪದೇ ಪದೇ ಮನವಿ ಮಾಡುತ್ತಿದ್ದರೂ ಅನೇಕ ಜನ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಸೋಮವಾರ ನಗರದಲ್ಲಿ ದಿಢೀರ್‌ ದಾಳಿ ನಡೆಸಿ, ನಿಮಯಗಳ ಪಾಲನೆ ಮಾಡದವರಿಗೆ ದಂಡ ವಿಧಿಸುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಮಾಸ್ಕ್ ಧರಿಸದೆ ಅಲ್ಲಲ್ಲಿ ನಿಂತಿದ್ದವರನ್ನು ತಮ್ಮ ಬಳಿ ಕರೆದರು. ಮಾಸ್ಕ್ ಏಕೆ ಹಾಕಿಕೊಂಡಿಲ್ಲ ಎಂದು ಪ್ರಶ್ನಿಸಿದರು. ಅವರಿಗೆ ಮಾಸ್ಕ್ ಕೊಟ್ಟು ಕಡ್ಡಾಯವಾಗಿ ಧರಿಸುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ ಬದಿಯ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದವರು, ಬೈಕ್‌ ಸವಾರರು ಹಾಗೂ ಆಟೊಗಳಲ್ಲಿ ಬರುತ್ತಿದ್ದವರನ್ನು ಕೈತೋರಿಸಿ ನಿಲ್ಲಿಸಿ ಮಾಸ್ಕ್‌ ಹಾಕಿಕೊಳ್ಳುವಂತೆ ಸೂಚನೆ ನೀಡಿದರು.

ಬೈಕ್, ಆಟೊ ತಡೆದು ಮಾಸ್ಕ್ ಜೇಬಿನಲ್ಲಿರಿಸಿಕೊಂಡು ತಿರುಗುತ್ತಿದ್ದ ದ್ವಿಚಕ್ರ ಸವಾರರು ಹಾಗೂ ಆಟೊ ಚಾಲಕರಿಗೆ ದಂಡ ವಿಧಿಸಿದರು. ದಂಡ ವಿಧಿಸುತ್ತಿದ್ದನ್ನು ದೂರದಿಂದಲೇ ಗಮನಿ ಸಿದ ಕೆಲವರು ಬೈಕ್, ಆಟೊ ನಿಲ್ಲಿಸಿ ಮಾಸ್ಕ್ ಧರಿಸಿ ಮುಂದೆ ಸಾಗಿದರು.

ನ್ಯಾಯಾಲಯ, ತಹಶೀಲ್ದಾರ್ ಕಚೇರಿ ರಸ್ತೆಯಲ್ಲಿ ಸಂಚರಿಸಿ ಕಾರ್ಯಾಚರಣೆ ನಡೆಸಿದರು. ರಸ್ತೆಯ ಬದಿಯಲ್ಲಿದ್ದ ಕೆಲವು ಅಂಗಡಿಗಳ ಮುಂದೆ ನಿಂತಿದ್ದ ಸಾರ್ವಜನಿಕರಿಗೆ ಮಾಸ್ಕ್ ಧರಿಸಲು ತಿಳಿಸಿದರು. ಮಾಸ್ಕ್ ಇಲ್ಲದೇ ಅಡ್ಡಾಡುತ್ತಿದ್ದ ಕೆಲವರು ‘ಕ್ಷಮಿಸಿ ಸರ್. ನಮ್ಮ ಬಳಿ ಹಣವಿಲ್ಲ. ನಮಗೆ ದಂಡ ವಿಧಿಸಬೇಡಿ, ನಾವು ಇನ್ನು ಮುಂದೆ ತಪ್ಪದೇ ಮಾಸ್ಕ್ ಧರಿಸುತ್ತೇವೆ’ ಎಂದು ಮನವಿ ಮಾಡಿಕೊಂಡರು.

ಗುಂಪಾ, ಮೈಲೂರ ಮತ್ತು ಮನ್ನಾಎಖ್ಖೆಳ್ಳಿ ಬಸ್‍ಗಳನ್ನು ನಿಲ್ಲಿಸಿ, ಬಸ್ ಏರಿದ ಡಿಸಿ ಮತ್ತು ಎಸ್ಪಿ ಅವರು ಮಾಸ್ಕ್‌ ಇಲ್ಲದವರಿಗೆ ಎಚ್ಚರಿಕೆ ನೀಡಿದರು.

‘ವೈಯಕ್ತಿಕ ಆರೋಗ್ಯ ಹಾಗೂ ಸಾರ್ವಜನಿಕ ಸ್ವಾಸ್ಥ್ಯ ಕಾಪಾಡಲು ಪ್ರತಿಯೊಬ್ಬರು ಮಾಸ್ಕ್‌ ಧರಿಸಬೇಕು. ಅಗತ್ಯವಿದ್ದರೆ ಮಾತ್ರ ಮನೆಗಳಿಂದ ಹೊರಗೆ ಬರಬೇಕು. ಹೊರಗೆ ಬಂದಾಗ ಮಾಸ್ಕ್‌ ಹಾಕಿಕೊಳ್ಳಬೇಕು’ ಎಂದು ರಾಮಚಂದ್ರನ್‌ ಮನವಿ ಮಾಡಿದರು.

100 ಉಚಿತ ಮಾಸ್ಕ್‌ ವಿತರಣೆ

ಬೀದರ್‌: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾಸ್ಕ್‌ ಧರಿಸದ ಬಡವರಿಗೆ ಎಚ್ಚರಿಕೆ ನೀಡಿ 100 ಮಾಸ್ಕ್‌ ಉಚಿತವಾಗಿ ವಿತರಿಸಿದರು.

ಪೊಲೀಸ್‌ ಹಾಗೂ ನಗರಸಭೆ 30ರಿಂದ 40 ಸಿಬ್ಬಂದಿ ನಿಯಮ ಉಲ್ಲಂಘಿಸಿದ ಪ್ರತಿ ವ್ಯಕ್ತಿಗೆ ₹100 ದಂಡ ವಿಧಿಸಿದರು. ಜತೆಗೆ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ತಿಳಿವಳಿಕೆಯನ್ನೂ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT