ಭಾನುವಾರ, ಡಿಸೆಂಬರ್ 4, 2022
19 °C
ಲಾಡಗೇರಿ ನಿವಾಸಿಗಳ ಸಾಂಸ್ಕೃತಿಕ ಕಾರ್ಯಕ್ರಮ

ಜನಮನ ಸೆಳೆದ ಕಲಾ ತಂಡಗಳ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ವಿಜಯದಶಮಿ ಅಂಗವಾಗಿ ವಿಶಾಲ್ ಫ್ರೆಂಡ್ಸ್ ಅಸೋಸಿಯೇಷನ್ ಹಾಗೂ ಲಾಡಗೇರಿ ನಿವಾಸಿಗಳ ವತಿಯಿಂದ ನಗರದ ಲಾಡಗೇರಿಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾ ತಂಡಗಳ ಪ್ರದರ್ಶನ ಜನ ಮನ ಸೆಳೆಯಿತು.

ಸುಮೀತ್, ಆದರ್ಶ, ವಿಶಾಲ್, ಶರಣು ಹಾಗೂ ಸಾಯಿನಾಥ ಅವರನ್ನು ಒಳಗೊಂಡ ತಂಡ ಪ್ರದರ್ಶಿಸಿದ ಶಿವ ತಾಂಡವ ನೃತ್ಯ ಸಭಿಕರನ್ನು ಬೆರಗುಗೊಳಿಸಿತು. ಕವಿತಾ ಶಿವದಾಸ ಸ್ವಾಮಿ ಹಾಗೂ ತಂಡ ಹರಿಸಿದ ಗಾನ ಸುಧೆ, ದುರ್ಗಾ ಪ್ರಾರ್ಥನೆ, ಗರ್ಭಾ ನೃತ್ಯ ಮೊದಲಾದ ಕಲೆಗಳ ಪ್ರದರ್ಶನಗಳು ರಸದೌತಣ ಉಣ ಬಡಿಸಿದವು.

ಇದಕ್ಕೂ ಮುನ್ನ ಕುಂಬಾರವಾಡದಿಂದ ಬಂದ ದೇವಿ ಪಲ್ಲಕ್ಕಿ ಮೆರವಣಿಗೆಗೆ ಭವ್ಯ ಸ್ವಾಗತ ನೀಡಲಾಯಿತು. ಮೆರವಣಿಗೆಯು ಲಾಡಗೇರಿ, ಬಿದ್ರಿ ವೃತ್ತದ ಮಾರ್ಗವಾಗಿ ಶಾರ ಹನುಮಾನ ಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು. ಸಹಸ್ರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ದೇಶದ ಪರಂಪರೆ, ಸಂಸ್ಕೃತಿ ರಕ್ಷಣೆಯಲ್ಲಿ ದಸರಾ ಹಬ್ಬದ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಪಲ್ಲಕ್ಕಿ ಸ್ವಾಗತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಹೇಳಿದರು.
ಹಬ್ಬದ ಶುಭ ಸಂದರ್ಭದಲ್ಲಿ ಸಕಲರಿಗೆ ಒಳಿತು ಉಂಟು ಮಾಡಲು ದೇವಿಯಲ್ಲಿ ಪ್ರಾರ್ಥಿಸೋಣ ಎಂದರು.

ಶಾಸಕ ರಹೀಂಖಾನ್ ಮಾತನಾಡಿ, ಭಾರತ ಬಹು ಸಂಸ್ಕೃತಿ ದೇಶವಾಗಿದೆ. ಎಲ್ಲರೂ ಸಹೋದರತ್ವ, ಸೌಹಾರ್ದದಿಂದ ಬಾಳಬೇಕು ಎಂದು ನುಡಿದರು. ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ದಸರಾ ಹಬ್ಬ ದುಷ್ಟರ ಸಂಹಾರ, ಶಿಷ್ಟರ ಸಂರಕ್ಷಣೆಯ ಪ್ರತೀಕವಾಗಿದೆ. ಮಹಿಷಾಸುರನನ್ನು ಸಂಹರಿಸಿದ ದುರ್ಗಾ ಮಾತೆಯ ಆರಾಧನೆ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಭಯೋತ್ಪಾದನೆಯಲ್ಲಿ ತೊಡಗಿದ್ದ ಪಿಎಫ್‍ಐ ಸೇರಿ ಹಲವು ಸಂಘಟನೆಗಳನ್ನು ನಿಷೇಧಿಸಿರುವುದು ದೇಶದ ಜನರಿಗೆ ಸಂತಸ ತಂದಿದೆ ಎಂದು ಹೇಳಿದರು.

ವಿಶಾಲ್ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ವಿಜಯದಶಮಿ ಅಂಗವಾಗಿ 19 ವರ್ಷಗಳಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ. ಅಸೋಸಿಯೇಷನ್ ಕಾರ್ಯಕ್ಕೆ ತಮ್ಮ ಸಹಕಾರ ಸದಾ ಇರಲಿದೆ ಎಂದು ತಿಳಿಸಿದರು.
ಲಾಡಗೇರಿ ಹಿರೇಮಠದ ಗಂಗಾಧರ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ನಗರಸಭೆ ಸದಸ್ಯರಾದ ಧನರಾಜ ಹಂಗರಗಿ, ಹಣಮಂತ ಮಲ್ಕಾಪುರೆ, ರಾಜಾರಾಮ ಚಿಟ್ಟಾ, ಮುಖಂಡರಾದ ವಿಜಯಕುಮಾರ ಆನಂದೆ, ಆಕಾಶ ಪಾಟೀಲ ಅಯಾಸಪುರ, ದತ್ತು ಪಾಟೀಲ, ಶರಣಪ್ಪ ಮೈಲೂರ, ನಾಗರಾಜ ಹುಲಿ, ಮಲ್ಲಿಕಾರ್ಜುನ ಗಿರಿ, ಸತೀಶ್ ರಾಮಖಾನೆ, ರವಿ ಗುಂಜಟ್ಟೆ, ಚಂದು ಹುಲೆಪ್ಪನೋರ್ ಇದ್ದರು. ಸತ್ಯಪ್ರಕಾಶ ಸ್ವಾಗತಿಸಿದರು. ರಾಜು ದುಗಾನಿ ನಿರೂಪಿಸಿದರು. ಸೋಮಶೇಖರ ಪಾಟೀಲ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.