ಶುಕ್ರವಾರ, ಸೆಪ್ಟೆಂಬರ್ 25, 2020
22 °C
‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮ

ಪಡಿತರ ವಿತರಣೆ ಸಮಸ್ಯೆ ತೋಡಿಕೊಂಡ ಜನರು: ತ್ವರಿತ ಇತ್ಯರ್ಥದ ಭರವಸೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್ ಸೋಂಕಿನಿಂದಾಗಿ ಜಾರಿಗೊಳಿಸಿದ್ದ ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡ ಅನೇಕ ವಲಸೆ ಕಾರ್ಮಿಕರು, ಸಕಾಲದಲ್ಲಿ ಆಹಾರಧಾನ್ಯ ಪಡೆಯಲಾಗದವರು, ಆರ್ಥಿಕ ಸಂಕಷ್ಟದಲ್ಲಿರುವವರು, ವೃದ್ಧರು ಹಾಗೂ ಹೊಸದಾಗಿ ಪಡಿತರ ಚೀಟಿ ಪಡೆಯಲಿಚ್ಛಿಸುವವರು ಜಿಲ್ಲೆಯ ವಿವಿಧೆಡೆಯಿಂದ ‘ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮ’ಕ್ಕೆ ಕರೆಗಳನ್ನು ಮಾಡುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

ಬೀದರ್ ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ‘ಫೋನ್ ಇನ್ ಕಾರ್ಯಕ್ರಮ’ದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಬಾಬು ರೆಡ್ಡಿ ಅವರು ಎಲ್ಲ ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಿಸಿದರು.

ಕೋವಿಡ್ ಸಮಯದಲ್ಲಿ ತಾಂತ್ರಿಕ ಕಾರಣದಿಂದಾಗಿ ಪಡಿತರ ಚೀಟಿ ದೊರಕುವಲ್ಲಿ ವಿಳಂಬವಾಗಿರುವವರು ತಕ್ಷಣ ಪಡಿತರ ಚೀಟಿ ಬರಲಿರುವ ಶುಭ ಸುದ್ದಿ ಕೇಳಿ ಪ್ರಜಾವಾಣಿಗೆ ಧನ್ಯತಾಭಾವ ವ್ಯಕ್ತಪಡಿಸಿದರು. ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಿದ್ದಕ್ಕೆ ಆಹಾರ ಇಲಾಖೆಯ ಅಧಿಕಾರಿಗಳಿಗೂ ಕೃತಜ್ಞತೆ ಹೇಳಿದರು.

ಪಡಿತರ ಅಂಗಡಿಗಳ ಮಾಲೀಕರು ಹೆಬ್ಬೆಟ್ಟಿನ ಗುರುತು, ಓಟಿಪಿ ಕೊಟ್ಟರೂ ಫಲಾನುಭವಿಗಳಿಗೆ ಎರಡು ದಿನಗಳ ನಂತರ ಆಹಾರಧಾನ್ಯ ವಿತರಿಸುತ್ತಿರುವ ಬಗ್ಗೆ ಅನೇಕರು ಫೋನ್ಇನ್ ಕಾರ್ಯಕ್ರಮದಲ್ಲಿ ದೂರಿದರು. ಇದಕ್ಕೆ ಸ್ಪಂದಿಸಿದ ರೆಡ್ಡಿ ಅವರು ವ್ಯವಸ್ಥೆಯಲ್ಲಿನ ಲೋಪವನ್ನು ತಕ್ಷಣ ಸರಿಪಡಿಸುವ ಭರವಸೆ ನೀಡಿದರು.

ಒಂದು ದಿನ ಹೆಬ್ಬೆಟ್ಟು ಗುರುತು ಪಡೆದು, ಇನ್ನೊಂದು ದಿನ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆ. ಹೆಬ್ಬೆಟ್ಟು ಗುರುತು ಪಡೆದ ತಕ್ಷಣ ಆಹಾರಧಾನ್ಯ ವಿತರಿಸಲು ವ್ಯವಸ್ಥೆ ಮಾಡುವಂತೆಯೂ ಕೆಲವರು ಮನವಿ ಮಾಡಿಕೊಂಡರು. ವೃದ್ಧರ ಹೆಬ್ಬೆಟ್ಟಿನ ಗೆರೆಗಳು ಮಾಸಿ ಹೋಗಿರುವ ಕಾರಣ ಅವರಿಗೆ ಹೆಬ್ಬೆಟ್ಟಿನ ಗುರುತು ಕಡ್ಡಾಯಗೊಳಿಸುವುದು ಬೇಡ ಎಂದು ಕೆಲವರು ವಿನಂತಿಸಿಕೊಂಡರು.

* ನಮ್ಮ ಊರಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ ಇದೆಯೇ?
–ರಾಜಕುಮಾರ, ಹುಮನಾಬಾದ್ ತಾಲ್ಲೂಕಿನ ಒಳಖಿಂಡಿ ಗ್ರಾಮ
ಉತ್ತರ: ಯಾವುದೇ ಗ್ರಾಮದಲ್ಲಿ 800 ಜನಸಂಖ್ಯೆ ಇದ್ದರೆ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ ಇದೆ. ಆದರೆ, ಸರ್ಕಾರದ ಮಾರ್ಗಸೂಚಿ ಅನ್ವಯ ಮೊದಲು ಸೊಸೈಟಿಗೆ ಇಲ್ಲವೆ ಎಸ್ಸೆಸ್ಸೆಲ್ಸಿ ಪಾಸಾದ ಅಂಗವಿಕಲರಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ.

* ಒಬ್ಬರೇ ಇದ್ದರೂ ಪಡಿತರ ಚೀಟಿ ಪಡೆಯಬಹುದೆ?
–ವೀರಭದ್ರಪ್ಪ, ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ
ಉತ್ತರ: ಕೃಷಿ ಭೂಮಿ ಇದ್ದವರು, ವಾರ್ಷಿಕ ₹ 1 ಲಕ್ಷ ಆದಾಯ ಇದ್ದವರಿಗೆ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ ಇಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಪಡಿತರ ಚೀಟಿ ಮಂಗಳೂರಿನಲ್ಲಿ ಮುದ್ರಣಗೊಂಡು ನೇರವಾಗಿಯೇ ನಿಮ್ಮ ಮನೆಗೆ ಬರಲಿದೆ. ಇದಕ್ಕೆ ಮಧ್ಯವರ್ತಿಗಳ ಅಗತ್ಯವಿಲ್ಲ.

* ಅಲಿಯಂಬರ್, ವಿಳಾಸಪುರ ಹಾಗೂ ರಾಜಗೀರಾ ಗ್ರಾಮಗಳಲ್ಲಿ ಪಡಿತರ ವಿತರಣೆ ಸಮರ್ಪಕವಾಗಿಲ್ಲ. ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ
– ಸುಬ್ಬಣ್ಣ ಕರಕನಳ್ಳಿ, ಬೀದರ್
ಉತ್ತರ: ವಿಚಾರಣೆ ಕಾಯ್ದಿರಿಸಿ ಪಡಿತರ ವಿತರಕರ ಲೈಸನ್ಸ್ ಅಮಾನತು ಮಾಡಲಾಗಿದೆ. ಸಾರ್ವಜನಿಕರಿಂದ ದೂರುಗಳು ಬಂದಿರುವ ಕಾರಣ ತನಿಖೆ ನಡೆಸಲಾಗುತ್ತಿದೆ.

* ಜಿಲ್ಲೆಯಲ್ಲಿ ಪಡಿತರ ಚೀಟಿಯ ಮೇಲೆ ಜೋಳ ವಿತರಿಸಲು ಏಕೆ ಕ್ರಮ ಕೈಗೊಳ್ಳಬಾರದು?
–ಚಂದ್ರಕಾಂತ ಪಾಟೀಲ ಜೈನಾಪುರ.
ಉತ್ತರ: ರಾಯಚೂರು ಹಾಗೂ ಬಳ್ಳಾರಿಯಲ್ಲಿ ಮಾತ್ರ ಜೋಳ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲೂ ಜೋಳದ ಬೇಡಿಕೆ ಇರುವ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು.

* ಲಾಕ್‌ಡೌನ್‌ ಸಮಯದಲ್ಲಿ ಓಲ್ಡ್‌ಸಿಟಿಯಲ್ಲಿ ಅನೇಕ ಜನರಿಗೆ ಆಹಾರಧಾನ್ಯ ಪೂರೈಕೆಯಾಗಿಲ್ಲ. ಅವರಿಗೆ ಮತ್ತೆ ಆಹಾರಧಾನ್ಯ ಸರಬರಾಜು ಮಾಡಲು ಸಾಧ್ಯವಿದೆಯೇ?
–ವೀರಭದ್ರಪ್ಪ ಉಪ್ಪಿನ್, ನಿವೃತ್ತ ಅಧಿಕಾರಿ
ಉತ್ತರ: ಬೀದರ್ ಉಪ ವಿಭಾಗಾಧಿಕಾರಿ ಮಾರ್ಗದರ್ಶನದಲ್ಲಿ ಓಲ್ಡ್‌ಸಿಟಿಯಲ್ಲಿ ಈಗಾಗಲೇ ಆಹಾರ ಧಾನ್ಯ ವಿತರಣೆ ಮಾಡಲಾಗಿದೆ. ಒಟಿಪಿ ಪಡೆದು ದಾಖಲೆ ಇಟ್ಟುಕೊಳ್ಳಲಾಗಿದೆ.

* ಶ್ರೀಮಂತರಿಗೆ ಮಾತ್ರ ಪಡಿತರ ಹಂಚಲಾಗುತ್ತಿದೆ. ಬಡವರಿಗೆ ಸರಿಯಾಗಿ ಪಡಿತರ ವಿತರಿಸಲು ಕ್ರಮ ಕೈಗೊಳ್ಳಬೇಕು.
–ಹುಮನಾಬಾದ್‌ನ ಲಕ್ಷ್ಮೀಕಾಂತ ಹುಂದಳಗೆ
ಉತ್ತರ: ಅರ್ಹತೆ ಇದ್ದವರಿಗೆ ಮಾತ್ರ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಆದರೂ ಕೆಲವರು ತಪ್ಪು ಮಾಹಿತಿ ನೀಡಿ ಪಡಿತರ ಚೀಟಿ ಪಡೆದಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದಂಡ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

* ವಲಸೆ ಕಾರ್ಮಿಕರಿಗೆ ಸರಿಯಾಗಿ ಆಹಾರಧಾನ್ಯ ಸಿಗುತ್ತಿಲ್ಲ. ಇಲಾಖೆಯಿಂದ ಏನು ಕ್ರಮ ಕೈಗೊಳ್ಳಲಾಗಿದೆ?
–ಬಸವರಾಜ ಮಾಳಗೆ,
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಉತ್ತರ: ಆಗಸ್ಟ್‌ನಲ್ಲಿ ಪಡಿತರ ಚೀಟಿ ಇಲ್ಲದ ವಲಸೆ ಕಾರ್ಮಿಕರಿಗೆ ಹಾಗೂ ಅಂಗವಿಕಲರಿಗೆ ಆಧಾರ್ ಕಾರ್ಡ್ ಆಧಾರದ ಮೇಲೆಯೇ ಪಡಿತರ ವಿತರಿಸಲಾಗಿದೆ. ಗುಳೆ ಹೋಗಿ ಮರಳಿ ಬಂದವರಿದ್ದರೆ ಅವರಿಗೂ ಆಹಾರಧಾನ್ಯ ವಿತರಿಸಲಾಗುವುದು. ಆಧಾರ್ ಕಾರ್ಡ್‌ನೊಂದಿಗೆ ಸಮೀಪದ ಪಡಿತರ ಅಂಗಡಿಗೆ ಭೇಟಿ ನೀಡಿ ಮಾಹಿತಿ ನೀಡಿದರೂ ಸಾಕು ಆಹಾರಧಾನ್ಯ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.

* ಬೀದರ್ ತಾಲ್ಲೂಕಿನ ಅಲಿಯಂಬರ್‌ನಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಅನೇಕ ಜನರಿಗೆ ಪಡಿತರ ಆಹಾರ ಧಾನ್ಯವನ್ನೇ ವಿತರಿಸಿಲ್ಲ. ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ.
–ಸಾಯಿ ಶಿಂದೆ, ನಾವದಗೇರಿ
ಉತ್ತರ: ಅಲಿಯಂಬರ್‌ನಲ್ಲಿ ಸೊಸೈಟಿ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಸೊಸೈಟಿ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನಮಗೆ ಇಲ್ಲ. ಶಿಸ್ತು ಕ್ರಮಕ್ಕೆ ಸಂಬಂಧಪಟ್ಟವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ.

* ಹೆಬ್ಬೆಟ್ಟಿನ ಗುರುತು ಮ್ಯಾಚ್ ಆಗದ ಕಾರಣ ಧಾನ್ಯ ಕೊಡುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ.
– ಚೇತನ್ ಸೋರಳ್ಳಿ, ಆಣದೂರು
ಉತ್ತರ: ಹೆಬ್ಬೆಟ್ಟಿನ ಗುರುತು ಮ್ಯಾಚ್ ಆಗದಿದ್ದರೆ ಓಟಿಪಿ ಕೊಡಬಹುದು. ನೆಟ್‌ವರ್ಕ್ ಇಲ್ಲವಾದರೂ ಒಂದೊಮ್ಮೆ ಸಮಸ್ಯೆಯಾಗುತ್ತದೆ. ಲೋಪವಾಗಿದ್ದರೆ ಅದನ್ನು ತಕ್ಷಣ ಸರಿಪಡಿಸಲಾಗುವುದು.

* ನನಗೆ ಸ್ವಂತ ಮನೆ ಇಲ್ಲ, ಪಡಿತರ ಚೀಟಿ ಇಲ್ಲದ ಕಾರಣ ಆಹಾರಧಾನ್ಯ ಸಹ ಪಡೆಯಲು ಸಾಧ್ಯವಾಗಿಲ್ಲ. ಪಡಿತರ ಚೀಟಿ ಪಡೆಯಲು ಏನು ಮಾಡಬೇಕು?
–ಸುರೇಖಾ, ಬೀದರ್ ತಾಲ್ಲೂಕು ಬರೂರ್
ಉತ್ತರ: ಆಧಾರ್ ಕಾರ್ಡ್ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದರೆ ತಕ್ಷಣ ಪಡಿತರ ಚೀಟಿ ಕೊಡಲಾಗುವುದು. ಬಡವರಿಗೆ ಪಡಿತರ ಚೀಟಿ ಕೊಡಲು ವಿಳಂಬ ಮಾಡುವುದಿಲ್ಲ.

* ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಒಂದು ವರ್ಷ ಆಗಿದೆ. ಇನ್ನೂ ಬಂದಿಲ್ಲ. ಏನು ಮಾಡಬೇಕು. ಸ್ಟೇಟಸ್ ಸಹ ಗೊತ್ತಾಗುತ್ತಿಲ್ಲ?
–ಅರವಿಂದ ಕುಲಕರ್ಣಿ, ಬೀದರ್ ತಾಲ್ಲೂಕು ಬಾವಗಿ, ಸಿದ್ದು, ಖಟಕಚಿಂಚೋಳಿ, ಶಶಿಕಾಂತ ಡಾಂಗೆ, ಹುಮನಾಬಾದ್ ತಾಲ್ಲೂಕಿನ ಗಡವಂತಿ.
ಉತ್ತರ: ಕೋವಿಡ್ ಇದ್ದ ಕಾರಣ ಕೆಲ ಕಾರ್ಯಗಳು ಸ್ಥಗಿತವಾಗಿವೆ. ಕೋವಿಡ್ ಮುಗಿದ ತಕ್ಷಣ ಅರ್ಹ ಎಲ್ಲರಿಗೂ ಪಡಿತರ ಚೀಟಿ ದೊರೆಯಲಿದೆ

* ಔರಾದ್ ತಾಲ್ಲೂಕಿನಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತ ಅಕ್ಕಿಗೂ ₹ 30 ಪಡೆಯುತ್ತಿದ್ದಾರೆ. ಒಂದು ದಿನ ಟೋಕನ್, ಇನ್ನೊಂದು ದಿನ ರೇಷನ್ ಕೊಡುತ್ತಿದ್ದಾರೆ. ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿರಿ
–ಪ್ರದೀಪ ಯನಗುಂದೆ, ಔರಾದ್
ಉತ್ತರ: ಉಚಿತ ಅಕ್ಕಿಗೆ ಹಣ ಪಡೆಯುತ್ತಿದ್ದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು.

* ಪಡಿತರ ಚೀಟಿಯಲ್ಲಿನ ಹೆಸರು ತಿದ್ದುಪಡಿ ಮಾಡಲು ಏನು ಮಾಡಬೇಕು?
–ಜ್ಞಾನೇಶ್ವರ ಭೋಸ್ಲೆ, ಘಾಟಬೋರಾಳ್
ಉತ್ತರ: ತಿದ್ದುಪಡಿಗೆ ಯಾವುದೇ ಸಮಸ್ಯೆ ಇಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿಗೆ ಬಂದು ತಿದ್ದುಪಡಿ ಮಾಡಿಕೊಳ್ಳಬಹುದು. ಬೇರೆ ಜಿಲ್ಲೆಯಲ್ಲಿ ಇದ್ದರೂ ಅಲ್ಲಿಂದ ಇಲ್ಲಿಗೆ ವರ್ಗ ಮಾಡಿಸಿಕೊಳ್ಳಬಹುದಾಗಿದೆ.

ಫಲಾನುಭವಿಗಳು ಮೊದಲು ಆಹಾರಧಾನ್ಯ ತರಲು ಚಾಂಗಲೇರಾಗೆ ಹೋಗಬೇಕಿತ್ತು. ಅಧಿಕಾರಿಗಳು ಗ್ರಾಮದಲ್ಲೇ ಆಹಾರ ಧಾನ್ಯ ಪೂರೈಕೆ ಮಾಡಲು ಕ್ರಮ ಕೈಗೊಂಡಿರುವುದು ಸಂತಸ ತಂದಿದೆ ಎಂದು ಪೋಲಕಪಳ್ಳಿಯ ರಾಕೇಶ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ವಲಸೆ ಕಾರ್ಮಿಕರಿಗೆ ಒಂದೇ ಬಾರಿ ಆಹಾರಧಾನ್ಯ ಕೊಡಲಾಗಿದೆ. ಇನ್ನೊಂದು ಬಾರಿ ಕೊಡಲು ವ್ಯವಸ್ಥೆ ಮಾಡಬೇಕು ಎಂದು ಭಾಲ್ಕಿ ತಾಲ್ಲೂಕಿನ ಜೈನಾಪುರದ ಸಂಗಮೇಶ್ವರ ಜ್ಯಾಂತೆ ಮನವಿ ಮಾಡಿದರು.

ಚಿಟಗುಪ್ಪದ ಶಿರಿಷ್ ಭಾಗವತ್,
ಓಲ್ಡ್‌ಸಿಟಿಯ ಜಿಯಾ ಮುಸ್ತೈದಪುರ, ಖಟಕಚಿಂಚೋಳಿಯ ಸಂತೋಷ ಭದ್ರಶೆಟ್ಟಿ, ಹುಮನಾಬಾದ್‌ನ ಮನೋಜ್, ಚಿಟಗುಪ್ಪದ ಸೂರ್ಯಕಾಂತ, ಸಾಯಿ ಶಿಂದೆ, ಓಂಕಾರ ಪಾಟೀಲ ಫೋನ್ಇನ್‌ನಲ್ಲಿ ಕರೆ ಮಾಡಿದರು.

 

ತಾಯಿಗಾಗಿ ಮಸ್ಕತ್‌ನಿಂದ ಕರೆ

ಕಮಲನಗರ ತಾಲ್ಲೂಕಿನ ಹೊಳಸಮುದ್ರದಲ್ಲಿ ನನ್ನ ತಾಯಿ ವಾಸವಾಗಿದ್ದಾರೆ. ನಾನು ಮಸ್ಕತ್‌ನಲ್ಲಿ ಇದ್ದೇನೆ. ನನ್ನ ತಾಯಿ ಎಪಿಎಲ್ ಕಾರ್ಡ್‌ ಪಡೆಯಬಹುದೆ? ಎಪಿಎಲ್‌ನಲ್ಲಿ ಪಡಿತರ ಧಾನ್ಯ ಪಡೆಯಲು ಸಾಧ್ಯವಿದೆಯೇ?
–ನೀಲಕಂಠ ಹಂಗರಗಿ, ಮಸ್ಕತ್
ಉತ್ತರ: ಎಪಿಎಲ್ ಪಡಿತರ ಚೀಟಿಗೂ ಪ್ರತಿ ಕೆ.ಜಿಗೆ ₹ 15 ರಂತೆ ಗರಿಷ್ಠ 10 ಕೆ.ಜಿ ವರೆಗೆ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಎಪಿಎಲ್ ಪಡಿತರ ಚೀಟಿ ಪಡೆಯ ಬಯಸುವವರಿಗೆ ಯಾವುದೇ ಆದಾಯದ ಮಿತಿ ಇಲ್ಲ.

ತಂದೆಗೆ ಪಡಿತರ ಚೀಟಿ ಕೊಡಿ

ಬೀದರ್‌ನ ನಯಾಕಮಾನ್‌ನಲ್ಲಿ ನನ್ನ ತಂದೆ ಇದ್ದಾರೆ. ಹೊಲ, ಮನೆ ಇಲ್ಲ. ಚಿಕ್ಕದೊಂದು ಚಹಾ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸಿದ್ದಾರೆ. ಒಬ್ಬರೇ ಇರುವ ಅವರಿಗೆ ಬಿಪಿಎಲ್ ಕಾರ್ಡ್ ಮಂಜೂರು ಮಾಡಿರಿ ಎಂದು ಅಂಬಿಕಾ ವಿಶ್ವನಾಥ ಮನವಿ ಮಾಡಿದರು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಇಲ್ಲವೆ ಕಚೇರಿಗೆ ಬಂದು ಮಾಹಿತಿ ಕೊಟ್ಟರೂ ಪಡಿತರ ಚೀಟಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಬಾಬುರೆಡ್ಡಿ ಭರವಸೆ ನೀಡಿದರು.

ಹೊಸ ಅರ್ಜಿ ಯಾವಾಗ ಸಲ್ಲಿಸಬೇಕು?

ಪಡಿತರ ಚೀಟಿ ಪಡೆಯಲು ಯಾವಾಗ ಬೇಕಾದರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೈಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ಪರಿಶೀಲಿಸಿ ಮಂಜೂರು ಮಾಡುತ್ತಾರೆ. ಸರಿಯಾದ ದಾಖಲೆಗಳನ್ನು ಒದಗಿಸಿದ್ದರೆ ಮಂಗಳೂರಿನಲ್ಲಿ ಮುದ್ರಣಗೊಂಡು ನೇರವಾಗಿ ಅರ್ಜಿ ಸಲ್ಲಿಸಿದವರ ವಿಳಾಸಕ್ಕೆ ಪಡಿತರ ಚೀಟಿ ಅಂಚ ಮೂಲಕ ಬರಲಿದೆ.

467 ಅನರ್ಹ ಪಡಿತರ ಚೀಟಿಗಳ ರದ್ದು

ಹೊಸ ಪಡಿತರ ಚೀಟಿಗಾಗಿ ಜಿಲ್ಲೆಯ ವಿವಿಧೆಡೆಯಿಂದ 39,160 ಅರ್ಜಿಗಳು ಬಂದಿದ್ದವು. 17,898 ಅರ್ಜಿಗಳನ್ನು ಅನುಮೋದಿಸಲಾಗಿದೆ. 16,244 ಅರ್ಜಿಗಳನ್ನು ರದ್ದುಪಡಿಸಲಾಗಿದೆ. ಒಟ್ಟು 34,142 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. 5,027 ಅರ್ಜಿಗಳು ಬಾಕಿ ಉಳಿದುಕೊಂಡಿವೆ. ಜಿಲ್ಲೆಯಲ್ಲಿ ಒಟ್ಟು 467 ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು