ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ನಿರ್ವಹಣೆ ಇಲ್ಲದೆ ಸೊರಗಿದ ತಂಗುದಾಣಗಳು

ಪ್ರಚಾರಕ್ಕಾಗಿ ಶಾಸಕ/ಸಂಸದರ ಅನುದಾನದಡಿ ನಿರ್ಮಾಣ; ಬಿಡಾಡಿ ದನ, ನಾಯಿಗಳ ಆಶ್ರಯ ತಾಣ
Published 18 ಮಾರ್ಚ್ 2024, 0:30 IST
Last Updated 18 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಬೀದರ್‌: ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಮುಖ ಸ್ಥಳಗಳಲ್ಲಿ ಬಸ್‌ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಸೂಕ್ತ ನಿರ್ವಹಣೆಯಿಲ್ಲದೆ ಸಾರ್ವಜನಿಕರ ಬಳಕೆಗೆ ಬಾರದಂತಾಗಿವೆ.

ಒಂದು ಸಲ ತಂಗುದಾಣ ಉದ್ಘಾಟನೆಗೊಂಡರೆ ಆ ಕಡೆ ಯಾರು ಕೂಡ ತಿರುಗಿಯೂ ನೋಡುವುದಿಲ್ಲ. ಅಲ್ಲಿ ನಿತ್ಯ ಸಂಗ್ರಹವಾಗುವ ಕಸ ಯಾರು ಹೊಡೆಯುವುದಿಲ್ಲ. ತ್ಯಾಜ್ಯ ಬಿದ್ದರೆ ವಿಲೇವಾರಿ ಆಗುವುದಿಲ್ಲ. ಅಲ್ಲಿರುವ ಆಸನಗಳು, ವಿದ್ಯುತ್‌ ದೀಪಗಳು ಹಾಳಾದರೆ ದುರಸ್ತಿಗೊಳಿಸುವ ಗೋಜಿಗೆ ಹೋಗುವುದಿಲ್ಲ. ಅಷ್ಟೇಕೆ ಅದರ ತಗಡು ಕಿತ್ತು ಹೋದರೆ, ಆರ್‌ಸಿಸಿ ಬೀಳುವ ಹಂತಕ್ಕೆ ತಲುಪಿದರೂ ಸರಿಪಡಿಸುವುದಿಲ್ಲ. ಇದರ ಪರಿಣಾಮ ಪ್ರಯಾಣಿಕರು, ತಂಗುದಾಣಗಳಿದ್ದರೂ ಅವುಗಳ ಒಳಗೆ ಕುಳಿತುಕೊಳ್ಳುವುದಿಲ್ಲ. ಹೀಗಾಗಿ ಹೆಚ್ಚಿನ ತಂಗುದಾಣಗಳು ಬಿಡಾಡಿ ದನಗಳು, ಬೀದಿ ನಾಯಿಗಳಿಗೆ ಆಶ್ರಯ ತಾಣವಾಗಿ ಬದಲಾಗಿವೆ. ಕೆಲವಂತೂ ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌ ಸ್ಥಳ, ಗುಜರಿ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳಗಳಾಗಿವೆ. 

ನಗರದ ಹೃದಯ ಭಾಗದ ನೆಹರೂ ಕ್ರೀಡಾಂಗಣ ಮುಂಭಾಗದ ಮುಖ್ಯರಸ್ತೆ, ಚಿದ್ರಿ ಮುಖ್ಯರಸ್ತೆಯ ಬೊಮ್ಮಗೊಂಡೇಶ್ವರ ವೃತ್ತ, ಗಾಂಧಿ ಗಂಜ್‌ ಹೀಗೆ ಪ್ರಮುಖ ಸ್ಥಳಗಳ ತಂಗುದಾಣಗಳ ನಿರ್ವಹಣೆ ಕಡೆಗೂ ಗಮನಹರಿಸುತ್ತಿಲ್ಲ. 

ಬಸ್‌ಗಳು, ಮ್ಯಾಕ್ಸಿಕ್ಯಾಬ್‌, ಕ್ರೂಸರ್‌, ಟಂಟಂ ಸೇರಿದಂತೆ ಇತರೆ ವಾಹನಗಳು ನಿಲ್ಲುವ ಸ್ಥಳಗಳಲ್ಲಿ ಜನರ ಅನುಕೂಲದ ದೃಷ್ಟಿಯಿಂದ ಬಸ್‌ ತಂಗುದಾಣಗಳನ್ನು ನಿರ್ಮಿಸಲಾಗಿದೆ. ವಾಹನಗಳು ಬರುವವರೆಗೆ ಬಿಸಿಲು, ಮಳೆಯಿಂದ ರಕ್ಷಣೆ ಸಿಗಲಿ ಎನ್ನುವುದು ಅದರ ನಿರ್ಮಾಣದ ಹಿಂದಿನ ಉದ್ದೇಶ. ಬಹುತೇಕವು ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಸದರ ಅನುದಾನದ ಅಡಿಯಲ್ಲಿ ನಿರ್ಮಾಣಗೊಂಡಿವೆ.

ಹೆಚ್ಚಿನ ಜನ ಅಲ್ಲಿಂದ ಓಡಾಡುವುದರಿಂದ ಪ್ರಚಾರ ಸಿಗಬಹುದು ಎಂಬ ಕಾರಣಕ್ಕಾಗಿ ಹೆಚ್ಚಿನ ಜನಪ್ರತಿನಿಧಿಗಳು, ಶಾಸಕ ಹಾಗೂ ಸಂಸದರ ಅನುದಾನದಡಿ ತಂಗುದಾಣಗಳನ್ನು ನಿರ್ಮಿಸುತ್ತಾರೆ. ಆನಂತರ ಅವುಗಳು ಯಾವ ಸ್ಥಿತಿಗೆ ತಲುಪಿವೆ ಎನ್ನುವುದರ ಕಡೆಗೆ ಗಮನ ಹರಿಸುವುದಿಲ್ಲ. ಒಬ್ಬ ಶಾಸಕರ ಅವಧಿಯಲ್ಲಾದ ಬಸ್‌ ತಂಗುದಾಣಗಳನ್ನು ಮತ್ತೊಬ್ಬರು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ.

ಕೆಲವೆಡೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದಲೂ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಕನಿಷ್ಠ ಅವುಗಳ ನಿರ್ವಹಣೆಯಾದರೂ ಸ್ಥಳೀಯ ಸಂಸ್ಥೆಗಳು ಮಾಡಬೇಕು. ಆ ಕೆಲಸ ಕೂಡ ಆಗುತ್ತಿಲ್ಲ.

ಇದು ನಗರ ಪ್ರದೇಶದ ಬಸ್‌ ತಂಗುದಾಣಗಳಿಗೆ ಸೀಮಿತವಾಗಿಲ್ಲ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲೂ ಇದೇ ಪರಿಸ್ಥಿತಿ ಇದೆ. ಇನ್ನು, ಅನೇಕ ಗ್ರಾಮಗಳಲ್ಲಿ ತಂಗುದಾಣಗಳೇ ಇಲ್ಲ. ಹೊಸದಾಗಿ ನಿರ್ಮಾಣಗೊಂಡ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ವ್ಯವಸ್ಥೆಯೇ ಇಲ್ಲ. ಜನ ಅನಿವಾರ್ಯವಾಗಿ ಬಸ್ಸಿಗಾಗಿ ಬಿಸಿಲು, ಮಳೆ ಲೆಕ್ಕಿಸದೆ ಬಯಲಲ್ಲಿ ನಿಲ್ಲುತ್ತಾರೆ. ಮತ್ತೆ ಕೆಲವೆಡೆ ಹೋಟೆಲ್‌, ಮಳಿಗೆಗಳನ್ನು ಆಶ್ರಯಿಸಿದ್ದಾರೆ. ಈ ಸಂಬಂಧ ನಗರಸಭೆ ಪೌರಾಯುಕ್ತ ಶಿವರಾಜ ರಾಥೋಡ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ. 

ಬಸ್‌ ತಂಗುದಾಣದ ಲೋಹದ ಆಸನಗಳು ತುಕ್ಕು ಹಿಡಿದು ಹಾಳಾಗಿವೆ. ತ್ಯಾಜ್ಯ ತುಂಬಿಕೊಂಡಿದೆ
ಬಸ್‌ ತಂಗುದಾಣದ ಲೋಹದ ಆಸನಗಳು ತುಕ್ಕು ಹಿಡಿದು ಹಾಳಾಗಿವೆ. ತ್ಯಾಜ್ಯ ತುಂಬಿಕೊಂಡಿದೆ
ವಿದ್ಯುತ್‌ ಸಂಪರ್ಕದ ಬೋರ್ಡ್‌ ಕಿತ್ತು ಹೋಗಿದೆ
ವಿದ್ಯುತ್‌ ಸಂಪರ್ಕದ ಬೋರ್ಡ್‌ ಕಿತ್ತು ಹೋಗಿದೆ
ಬಸ್‌ ತಂಗುದಾಣದಲ್ಲಿ ನೇತಾಡುತ್ತಿರುವ ವಿದ್ಯುತ್‌ ಮೀಟರ್‌ -ಪ್ರಜಾವಾಣಿ

ಬಸ್‌ ತಂಗುದಾಣದಲ್ಲಿ ನೇತಾಡುತ್ತಿರುವ ವಿದ್ಯುತ್‌ ಮೀಟರ್‌ -ಪ್ರಜಾವಾಣಿ

ಚಿತ್ರಗಳು: ಲೋಕೇಶ ವಿ. ಬಿರಾದಾರ

ಬೀದರ್‌ನ ಗಾಂಧಿ ಗಂಜ್‌ ಸಮೀಪದ ಬಸ್‌ ತಂಗುದಾಣ ವಾಹನಗಳ ಪಾರ್ಕಿಂಗ್‌ ಸ್ಥಳವಾಗಿ ಬದಲಾಗಿದೆ
ಬೀದರ್‌ನ ಗಾಂಧಿ ಗಂಜ್‌ ಸಮೀಪದ ಬಸ್‌ ತಂಗುದಾಣ ವಾಹನಗಳ ಪಾರ್ಕಿಂಗ್‌ ಸ್ಥಳವಾಗಿ ಬದಲಾಗಿದೆ
ಬೀದರ್‌ನ ಬೊಮ್ಮಗೊಂಡೇಶ್ವರ ವೃತ್ತದಲ್ಲಿರುವ ಬಸ್‌ ತಂಗುದಾಣದ ಅವಸ್ಥೆ
ಬೀದರ್‌ನ ಬೊಮ್ಮಗೊಂಡೇಶ್ವರ ವೃತ್ತದಲ್ಲಿರುವ ಬಸ್‌ ತಂಗುದಾಣದ ಅವಸ್ಥೆ

ಶಾಸಕರು ಸಂಸದರು ಬಸ್‌ ತಂಗುದಾಣಗಳನ್ನು ಪ್ರಚಾರಕ್ಕಾಗಿ ನಿರ್ಮಿಸುತ್ತಾರೆ. ಹೆಚ್ಚಿನವು ಗುಣಮಟ್ಟದಿಂದ ಕೂಡಿರುವುದಿಲ್ಲ.

-ರಾಕೇಶ್‌ ವಿದ್ಯಾರ್ಥಿ

ಬಸ್‌ ತಂಗುದಾಣಗಳು ನಾಯಿ ಹಂದಿಗಳಿಗೆ ಆಶ್ರಯ ತಾಣವಾಗಿವೆ. ಏಕೆಂದರೆ ಅವುಗಳ ನಿರ್ವಹಣೆ ಇರುವುದಿಲ್ಲ.

0ಸವಿತಾ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT