ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಪ್ರಭು ಚವಾಣ್‌ಗೆ ಮತ್ತೆ ಒಲಿದ ಸಚಿವ ಸ್ಥಾನ

ಬಿಜೆಪಿ ವರಿಷ್ಠರ ವಿಶ್ವಾಸ ಉಳಿಸಿಕೊಂಡ ಔರಾದ್ ಶಾಸಕ
Last Updated 4 ಆಗಸ್ಟ್ 2021, 14:40 IST
ಅಕ್ಷರ ಗಾತ್ರ

ಬೀದರ್‌: ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದಲ್ಲಿ ವಕ್ಫ್, ಹಜ್ ಹಾಗೂ ಪಶು ಸಂಗೋಪನೆ ಸಚಿವರಾಗಿದ್ದ ಪ್ರಭು ಚವಾಣ್‌ ಬಿಜೆಪಿ ವರಿಷ್ಠರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈಗ ಮತ್ತೊಮ್ಮೆ ಸಚಿವರಾಗಿದ್ದಾರೆ.

ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ದಿನದಿಂದಲೂ ಬೆಂಗಳೂರಲ್ಲೇ ವಾಸ್ತವ್ಯ ಮಾಡಿದ್ದ ಪ್ರಭು ಚವಾಣ್‌ ನಿರೀಕ್ಷೆಯಂತೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲೂ ಸ್ಥಾನ ಪಡೆದಿದ್ದಾರೆ. ಔರಾದ್‌ ಕ್ಷೇತ್ರದ ಕಾಂಗ್ರೆಸ್‌ ಭದ್ರಕೋಟೆಯನ್ನು ಛಿದ್ರಗೊಳಿಸಿ ಸತತ ಮೂರನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಅವರಿಗೆ ಮನ್ನಣೆ ದೊರೆತಿದೆ.

ಜಿಲ್ಲೆಯಲ್ಲಿ ಮೊದಲು ಬಿಜೆಪಿಯ ಒಬ್ಬರೇ ಶಾಸಕರು ಇದ್ದರು. ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಶರಣು ಸಲಗರ ಆಯ್ಕೆಯಾದ ನಂತರ ಸಂಖ್ಯೆ ಎರಡಕ್ಕೆ ಏರಿದೆ. ಅನುಭವ ಹಾಗೂ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಪ್ರಭು ಚವಾಣ್‌ ಅವರಿಗೆ ಪ್ರಾತಿನಿಧ್ಯ ನೀಡಲಾಗಿದೆ.

ಲಂಬಾಣಿ ಸಮುದಾಯಕ್ಕೆ ಸೇರಿದ ಪ್ರಭು ಚವಾಣ್‌ ರಾಜಕೀಯದಲ್ಲಿ ತಳ ಮಟ್ಟದಿಂದ ಬೆಳೆದು ಬಂದಿದ್ದಾರೆ. ಪಕ್ಷ ನಿಷ್ಠೆ ವಿಷಯದಲ್ಲಿ ಎಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ವಕ್ಫ್, ಹಜ್ ಹಾಗೂ ಪಶು ಸಂಗೋಪನೆ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಶ್ಲಾಘಿಸಿದ್ದಾರೆ. ಬೀದರ್‌ನಲ್ಲಿ ರಾಜ್ಯ ಮಟ್ಟದ ಪಶು ಮೇಳ ನಡೆಸಿದ ಹಿರಿಮೆ ಇವರದ್ದಾಗಿದೆ.

‘ಬೀದರ್‌ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ ಇವರ ವಿರುದ್ಧ ಯಾವುದೇ ಗಂಭೀರ ಆರೋಪಗಳು ಕೇಳಿ ಬಂದಿಲ್ಲ. ವಿರೋಧ ಪಕ್ಷದ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಗುಣ ಇವರಲ್ಲಿ ಇದೆ’ ಎನ್ನುತ್ತಾರೆ ಬಿಜೆಪಿಯ ಮುಖಂಡ ರೇವಣಸಿದ್ದಪ್ಪ ಜಲಾದೆ.

‘ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಜತೆಗೆ ಅದನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದ ಶ್ರೇಯಸ್ಸು ಪ್ರಭು ಚವಾಣ್‌ ಅವರಿಗೆ ಸಲ್ಲುತ್ತದೆ. ಗೋವುಗಳ ಆರ್ಶೀವಾದದಿಂದಲೇ ಪ್ರಭು ಚವಾಣ್‌ ಮತ್ತೆ ಸಚಿವರಾಗಿದ್ದಾರೆ. ಪಶು ಸಂಗೋಪನೆ ಸಚಿವರಾಗಿಯೇ ಮುಂದುವರಿಯಲಿ ಎನ್ನುವುದು ನಮ್ಮ ಆಶಯ’ ಎಂದು ಬಿಜೆಪಿ ಕಲಬುರ್ಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್‌ ಠಾಕೂರ್‌ ಹೇಳುತ್ತಾರೆ.

ಬೀದರ್‌ ಸಂಸದ ಭಗವಂತ ಖೂಬಾ ಕೇಂದ್ರದಲ್ಲಿ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವರಾಗಿದ್ದಾರೆ. ಈಗ ಪ್ರಭು ಚವಾಣ್‌ ಮತ್ತೆ ಸಚಿವರಾಗಿದ್ದಾರೆ. ಇಬ್ಬರೂ ಔರಾದ್‌ ಮೂಲದವರು ಎನ್ನವುದು ವಿಶೇಷ. ಹೀಗಾಗಿ ಜಿಲ್ಲೆಯ ಜನರಲ್ಲಿ ಅಭಿವೃದ್ಧಿಯ ನಿರೀಕ್ಷೆಗಳು ಹೆಚ್ಚಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT