ಶನಿವಾರ, ಜುಲೈ 31, 2021
28 °C

ಲಾಕ್‍ಡೌನ್ ವಿಸ್ತರಣೆ ಇಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಜಿಲ್ಲೆಯಲ್ಲಿ ಇನ್ನೂ ಒಂದು ವಾರ ಲಾಕ್‍ಡೌನ್ ವಿಸ್ತರಿಸಬೇಕು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಆದರೆ, ಕೋವಿಡ್ ನಿಯಂತ್ರಣಕ್ಕೆ ಲಾಕ್‍ಡೌನ್ ಪರಿಹಾರ ಆಗಿರದ ಕಾರಣ ವಿಸ್ತರಣೆ ಮಾಡಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ತಿಳಿಸಿದ್ದಾರೆ.

ಕೋವಿಡ್ ನಿಯಂತ್ರಣ ಕ್ರಮವಾಗಿ ಜುಲೈ 15 ರಿಂದ ಜಾರಿಯಲ್ಲಿದ್ದ ಲಾಕ್‍ಡೌನ್‍ಗೆ ಜಿಲ್ಲೆಯ ಜನ ಸ್ಪಂದಿಸಿದ್ದಾರೆ. ಮುಂದೆಯೂ ಕೋವಿಡ್‌ ಸೋಂಕು ಹರಡುವಿಕೆ ನಿಯಂತ್ರಿಸುವಂತಾಗಲು ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ವೃದ್ಧರು ಹಾಗೂ ಮಕ್ಕಳು ಸಾಧ್ಯವಾದಷ್ಟು ಮನೆಯಲ್ಲಿ ಇರಬೇಕು ಎಂದು ಕೋರಿದ್ದಾರೆ.

ಸೋಂಕಿನ ಸರಪಳಿ ತುಂಡರಿಸಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಇದರಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ. ಶ್ರಾವಣದಲ್ಲಿ ಅನೇಕ ಹಬ್ಬಗಳು ಬಂದಿದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ.

ಗೊಂದಲ ಮೂಡಿಸಿದ ಆದೇಶ
ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸುವ ದಿಸೆಯಲ್ಲಿ ಜುಲೈ 29ರ ವರೆಗೆ ಲಾಕ್‌ಡೌನ್‌ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಧ್ಯಾಹ್ನ ಹೊರಡಿಸಿದ ಆದೇಶ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿತು. ಸಂಜೆ ವೇಳೆಗೆ ‘ಲಾಕ್‌ಡೌನ್‌ ಇಲ್ಲ’ ಎನ್ನುವ ಸಚಿವರ ಸಂದೇಶವೂ ಹರಿದಾಡಿತು. ಹೀಗಾಗಿ ಜನರಲ್ಲಿ ಗೊಂದಲ ಮೂಡಿತು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರ ಅಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಲಾಕ್‌ಡೌನ್‌ ಮುಂದುವರಿಸುವ ಅಗತ್ಯವಿಲ್ಲ ಎಂದು ಸಚಿವರು ಜಿಲ್ಲಾಡಳಿತಕ್ಕೆ ಸೂಚಿಸಿದ ನಂತರ ಜಿಲ್ಲಾಧಿಕಾರಿ ಸಂಜೆ ಮತ್ತೊಂದು ಆದೇಶ ಹೊರಡಿಸಿ ಲಾಕ್‌ಡೌನ್‌ ಮುಂದುವರಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಆದೇಶಗಳ ಗೊಂದಲದಿಂದಾಗಿ ಸಾರ್ವಜನಿಕರು ಪತ್ರಿಕೆಗಳ ಕಚೇರಿಗಳಿಗೆ ದೂರವಾಣಿ ಕರೆ ಮಾಡಿ ಖಚಿತ ಪಡಿಸಿಕೊಂಡರು.

ಲಾಕ್‌ಡೌನ್‌ ಮುಕ್ತಾಯ
ಜಿಲ್ಲೆಯಲ್ಲಿ ಜುಲೈ 15ರಿಂದ ಜಾರಿಯಲ್ಲಿದ್ದ ಲಾಕ್‌ಡೌನ್‌ ಬುಧವಾರ ನಸುಕಿನ ಜಾವ 5 ಗಂಟೆಗೆ ಕೊನೆಗೊಂಡಿತು. ಒಂದು ವಾರ ಲಾಕ್‌ಡೌನ್‌ ಇದ್ದರೂ ಜನ ಅಚ್ಚುಕಟ್ಟಾಗಿ ಪಾಲನೆ ಮಾಡಲಿಲ್ಲ. ಪೊಲೀಸ್‌ ಸಿಬ್ಬಂದಿ ಕೊರತೆಯಿಂದಾಗಿ ಪೊಲೀಸ್‌ ಅಧಿಕಾರಿಗಳಿಗೆ ಸಾರ್ವಜನಿಕರ ಮೇಲೆ ಹೆಚ್ಚು ಒತ್ತಡ ಹಾಕಲು ಸಾಧ್ಯವಾಗಲಿಲ್ಲ.

ಅಂಗಡಿ ಮುಂಗಟ್ಟುಗಳು ಬಂದ್‌ ಇದ್ದರೂ ಅನೇಕ ಜನ ಬೈಕ್‌ ಮೇಲೆ ಓಡಾಡಿದರು. ಕೆಲವರು ಮಾಸ್ಕ್‌ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ದು ಕಂಡು ಬಂದಿತು. ಕೆಲವು ಕಡೆ ಪಾನಬೀಡಾ ಅಂಗಡಿಗಳು ತೆರೆದುಕೊಂಡಿದ್ದವು. ಸಣ್ಣಪುಟ್ಟ ಸ್ಟೋರ್‌ಗಳಲ್ಲಿ ದುಪ್ಪಟ್ಟು ಬೆಲೆಗೆ ಗುಟ್ಕಾ ಮಾರಾಟವಾದವು.

ಲಾಕ್‌ಡೌನ್‌ ಮುಂದುವರಿಸಿಲ್ಲ. ಆದರೆ, ಅಧಿಕಾರಿಗಳು ಬುಧವಾರ ನೇರವಾಗಿ ರಸ್ತೆಗೆ ಇಳಿದು ಮಾಸ್ಕ್‌ ಹಾಕದವರಿಗೆ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.

65 ಜನರಿಗೆ ಕೋವಿಡ್ ಸೋಂಕು; ಜಿಲ್ಲೆಯಲ್ಲಿ ಮತ್ತೆ ಇಬ್ಬರ ಸಾವು
ಜಿಲ್ಲೆಯಲ್ಲಿ ಮಂಗಳವಾರ 65 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕೋವಿಡ್ ವೈರಾಣು ಪೀಡಿತರ ಸಂಖ್ಯೆ 1,468ಕ್ಕೆ ಏರಿದೆ.

ಬೀದರ್‌ನ 30 ವರ್ಷದ ಮಹಿಳೆ ಜ್ವರ ಹಾಗೂ ಉಸಿರಾಟ ಸಮಸ್ಯೆಯಿಂದ ಜುಲೈ 18 ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಮರು ದಿನ ಕೊನೆಯುಸಿರೆಳೆದಿದ್ದರು. 75 ವರ್ಷದ ವೃದ್ಧ ಕಫ ಹಾಗೂ ಉಸಿರಾಟ ತೊಂದರೆಯಿಂದಾಗಿ ಜುಲೈ 16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಜುಲೈ 19 ರಂದು ಮೃತಪಟ್ಟಿದ್ದರು.

ಜಿಲ್ಲೆಯಲ್ಲಿ ನಾಲ್ವರು ಬಾಲಕಿಯರು, ಒಬ್ಬ ಬಾಲಕ, 24 ಮಹಿಳೆಯರು ಹಾಗೂ 36 ಪುರುಷರಿಗೆ ಸೋಂಕು ತಗುಲಿದೆ. ಬೀದರ್‌ ತಾಲ್ಲೂಕಿನಲ್ಲಿ ಅತಿ ಹೆಚ್ಚು 32 ಮಂದಿ, ಬಸವಕಲ್ಯಾಣದಲ್ಲಿ ನಾಲ್ವರು, ಹುಮನಾಬಾದ್‌ ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ ತಲಾ 12 ಮಂದಿಗೆ ಸೋಂಕು ದೃಢಪಟ್ಟಿದೆ.

ಬರಬೇಕಿದೆ 692 ಮಂದಿ ವರದಿ
ಬೀದರ್ ಜಿಲ್ಲೆಯಲ್ಲಿ ಈವರೆಗೆ 46,591 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಇವರಲ್ಲಿ 44,431 ಮಂದಿಯ ವೈದ್ಯಕೀಯ ವರದಿ ನೆಗೆಟಿವ್ ಮತ್ತು 1,468 ಜನರ ವರದಿ ಪಾಸಿಟಿವ್ ಬಂದಿದೆ.

560 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ 25 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 692 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬರಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು