ಹೆಡಗಾಪೂರ (ಬೀದರ್): ಕಲಬುರಗಿಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆ ಬಗ್ಗೆ ಅಸಮಾಧಾನ ಹೊರಹಾಕಿರುವ ಔರಾದ್ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಭು ಚವಾಣ್, ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಅನುದಾನ ಹಾಗೂ ಯೋಜನೆಗಳನ್ನು ಘೋಷಿಸಿದ್ದಾರೆ. ಸರ್ಕಾರದ ನಡೆ ನನಗೆ ಹಿಡಿಸಿಲ್ಲ ಎಂದು ಹೇಳಿದರು.
ಇಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬಳಿ ಹಣವೇ ಇಲ್ಲ. ಪ್ರಚಾರದ ಸಲುವಾಗಿ ಇಲ್ಲಿಗೆ ಬಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಆಗುತ್ತಿಲ್ಲ ಎಂದರು.
ಔರಾದ್ ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲ್ಲೂಕು. ಆದರೆ, ಈ ಕ್ಷೇತ್ರಕ್ಕೆ ಏನೂ ಕೊಟ್ಟಿಲ್ಲ. ಸರ್ಕಾರದ ನಿಲುವು ಜನವಿರೋಧಿ, ರೈತರ ವಿರೋಧಿಯಾಗಿದೆ. ಕಲ್ಯಾಣ ಕರ್ನಾಟಕದ ವಿಮೋಚನೆಯಲ್ಲಿ ಜಿಲ್ಲೆಯ ಗೋರಟಾ ಗ್ರಾಮದ ಅನೇಕರು ಜೀವ ಕೊಟ್ಟಿದ್ದಾರೆ. ಆ ಗ್ರಾಮದ ಹುತಾತ್ಮ ಸ್ಮಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ಕೊಡಬೇಕಿತ್ತು. ಆದರೆ, ಆ ಕೆಲಸ ಮಾಡಿಲ್ಲ. ಕಲಬುರಗಿಯಲ್ಲಿ ಮೊದಲು ಸಚಿವ ಸಂಪುಟ ಸಭೆ ನಡೆಸಿದ್ದು ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಿದ್ದಾಗ. ಇದರಲ್ಲಿ ಹೊಸತೇನೂ ಇಲ್ಲ ಎಂದು ಹೇಳಿದರು.
ಕೆಕೆಆರ್‌ಡಿಬಿಗೆ ₹5 ಸಾವಿರ ಕೋಟಿ ಅನುದಾನ ಮಂಜೂರಾಗಿದೆ. ನನ್ನ ಕ್ಷೇತ್ರಕ್ಕೆ ₹130 ಕೋಟಿ ಅನುದಾನ ಬರಬೇಕು. ಆದರೆ, ₹85 ಕೋಟಿ ಕೊಡುತ್ತಿದ್ದಾರೆ. ಇದರ ಬಗ್ಗೆ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇನೆ ಎಂದು ತಿಳಿಸಿದರು.
ಯಾದಗಿರಿಯಲ್ಲಿ ಕಾಂಗ್ರೆಸ್ ಶಾಸಕನ ವಿರುದ್ಧ ಪ್ರಕರಣ ದಾಖಲಾಗಿದೆ. ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಅವರು ನಮ್ಮ ಪಕ್ಷದ ಶಾಸಕನ ವಿರುದ್ಧ ಮನಬಂದಂತೆ ಮಾತನಾಡಿದ್ದಾರೆ. ಹೀಗಿದ್ದರೂ ಇಬ್ಬರ ವಿರುದ್ಧ ಕ್ರಮ ಜರುಗಿಸಿಲ್ಲ. ಆದರೆ, ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಿಢೀರನೆ ಕ್ರಮ ಕೈಗೊಂಡಿದ್ದಾರೆ. ಇದು ಸರಿಯಾದುದಲ್ಲ ಎಂದು ಹೇಳಿದರು.