ಶುಕ್ರವಾರ, ಅಕ್ಟೋಬರ್ 23, 2020
21 °C

ಬಸವಕಲ್ಯಾಣ ಕ್ಷೇತ್ರ| ಬಿಜೆಪಿ ಟಿಕೆಟ್‌ ಕೊಟ್ಟರೆ ಸ್ಪರ್ಧಿಸಲು ಸಿದ್ಧ: ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಬಿ.ನಾರಾಯಣರಾವ್ ಅವರ ನಿಧನದಿಂದ ತೆರವಾದ ಈ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ನೀಡುವ ನಿರ್ಧಾರ ಪಕ್ಷದ ವರಿಷ್ಠರಿಗೆ ಬಿಡಲಾಗಿದೆ. ನಾನೂ ಸ್ಪರ್ಧಿಸುವುದಕ್ಕೆ ಸಿದ್ಧನಿದ್ದೇನೆ’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಕಳೆದ ಸಲ ಪಕ್ಷದ ಅಭ್ಯರ್ಥಿ ಇದ್ದುದರಿಂದ ನನ್ನನ್ನು ಪಕ್ಷ ಪರಿಗಣಿಸಲಿದೆ ಎಂಬ ಭರವಸೆಯಿದೆ. ಆದರೆ, ಪಕ್ಷದಲ್ಲಿ 12 ಜನ ಆಕಾಂಕ್ಷಿಗಳಿದ್ದು ಯಾರಿಗೆ ಟಿಕೆಟ್ ದೊರಕುತ್ತದೆ ಎಂಬುದು ಕೊನೆಯವರೆಗೂ ಹೇಳಲಾಗದು. ಆದರೆ, ಕೆಲವರು ಈಗಾಗಲೇ ತಮಗೇ ಟಿಕೆಟ್ ಅಂತಿಮವಾಗಿದೆ ಎಂದು ಹೇಳಿ ಜನರ ದಿಕ್ಕು ತಪ್ಪಿಸುತ್ತಿರುವುದು ಸರಿಯಲ್ಲ’ ಎಂದರು.

‘ನಾನು ಪಕ್ಷ ಬಿಡಲಿದ್ದೇನೆ ಎಂದೂ ಕೆಲವರು ಊಹಾಪೋಹ ಹರಡಿಸುತ್ತಿದ್ದಾರೆ. ನಾನು ಎಲ್ಲಿಗೂ ಹೋಗುವುದಿಲ್ಲ. ಪಕ್ಷ ನೀಡಿದ ಜವಾಬ್ದಾರಿ ವಹಿಸಿಕೊಂಡು ಚುನಾವಣಾ ಕಣದಲ್ಲಿ ಯಾರಿದ್ದರೂ ಅವರ ಗೆಲುವಿಗೆ ಪ್ರಯತ್ನಿಸುತ್ತೇನೆ. ಒಟ್ಟಾರೆ, ಸ್ಥಳೀಯರು ಕಣದಲ್ಲಿರಬೇಕು ಎಂಬುದು ನನ್ನ ಭಾವನೆ. ಬಿ.ನಾರಾಯಣರಾವ್ ಅವರು ಉತ್ತಮ ಕಾರ್ಯನಿರ್ವಹಿಸಿ ಅಕಾಲ ಮರಣ ಹೊಂದಿದ್ದು, ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿತರಿಗೆ ಮನವಿಪತ್ರ ಸಲ್ಲಿಸಿದ್ದೇನೆ. ಹಿಂದಿನ ಅವಧಿಯಲ್ಲಿ ನಾನು ಶಾಸಕನಿದ್ದಾಗ ಮಂಜೂರಾದ 80 ಕಾಮಗಾರಿಗಳ ಕೆಲಸ ಪೂರ್ಣಗೊಳಿಸಲು ಕೂಡ ಸಂಬಂಧಿತರಿಗೆ ಆಗ್ರಹಿಸಿದ್ದೇನೆ’ ಎಂದರು.

‘ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಬರೀ ಶರಣ ಸ್ಮಾರಕಗಳ ಜೋರ್ಣೋದ್ಧಾರ ನಡೆಸಿದರೆ ಸಾಲದು, ನಗರದಲ್ಲಿನ ಮೂಲಸೌಲಭ್ಯ ಸುಧಾರಣೆಗೂ ಆದ್ಯತೆ ನೀಡಬೇಕು. ಮಂಡಳಿ ವಿಶೇಷಾಧಿಕಾರಿಯನ್ನಾಗಿ ಡಾ.ಎಚ್.ಆರ್.ಮಹಾದೇವ ಅವರನ್ನು ನೇಮಿಸಿರುವುದು ಸ್ವಾಗತಾರ್ಹ. ಅವರು ನಗರದ ವಿಕಾಸ ಕೈಗೊಂಡು ಇದೊಂದು ಪ್ರವಾಸಿಗರ ಉತ್ತಮ ತಾಣವನ್ನಾಗಿ ರೂಪಿಸಬೇಕು. ತಾಲ್ಲೂಕಿನ 16 ಕೆರೆ ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳ್ಳಬೇಕು. ಅಟೋನಗರ ನಿರ್ಮಾಣವಾಗಬೇಕು. ಮಹಿಳೆಯರಿಗಾಗಿ ಕಾರ್ಖಾನೆ ಸ್ಥಾಪಿಸಬೇಕು. ಕೌಶಲ ಅಭಿವೃದ್ಧಿ ಹಾಗೂ ತರಬೇತಿ ಕೇಂದ್ರ ಆರಂಭವಾಗಬೇಕು. ಇದಕ್ಕಾಗಿ ಸರ್ಕಾರ ₹ 100 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು. ಲಾಕ್ ಡೌನ್ ಕಾಲದಲ್ಲಿ ನಗರದಲ್ಲಿ ಅನೇಕ ಕಡೆ ಜಮೀನು ಅತಿಕ್ರಮಣ ನಡೆದಿದ್ದು ಈ ಬಗ್ಗೆ ಕ್ರಮಕ್ಕಾಗಿ ಸಂಬಂಧಿತ ಇಲಾಖೆಯವರಿಗೆ ಕೇಳಿಕೊಂಡಿದ್ದೇನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು