ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಕರ್ನಾಟಕ ಬಂದ್‌ ಬೆಂಬಲಿಸಿ ಪ್ರತಿಭಟನೆ

ಕೃಷಿ ಮಸೂದೆಗೆ ರೈತ, ಕಾರ್ಮಿಕ, ದಲಿತ ಸಂಘಟನೆಗಳ ವಿರೋಧ
Last Updated 28 ಸೆಪ್ಟೆಂಬರ್ 2020, 12:46 IST
ಅಕ್ಷರ ಗಾತ್ರ

ಬೀದರ್‌: ಕೃಷಿ, ಎಪಿಎಂಸಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಮಸೂದೆ ವಿರೋಧಿಸಿ ನಗರದಲ್ಲಿ ಸೋಮವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ರೈತರು ಹಾಗೂ ಕಾರ್ಮಿಕರ ಹಿತವನ್ನು ಕಡೆಗಣಿಸಿ ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟು ದೇಶ ವಿರೋಧಿ ನೀತಿ ಅನುಸರಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೈಸರ್ಗಿಕ ಸಂಪನ್ಮೂಲವನ್ನು ಕೆಲವೇ ಕೆಲವು ಶ್ರೀಮಂತರು, ಬಂಡವಾಳಶಾಹಿಗಳ ಒಡೆತನಕ್ಕೆ ಒಪ್ಪಿಸುವುದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಆರೋ‍ಪಿಸಿದರು.

ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ 1974ರಲ್ಲಿ ಭೂ ಸುಧಾರಣೆ ಕಾಯ್ದೆಗೆ ಮಹತ್ವದ ತಿದ್ದುಪಡಿಗಳನ್ನು ತಂದು ‘ಉಳುವವನೇ ಭೂ ಒಡೆಯ’ ಎಂದು ಘೋಷಿಸಿದ್ದರು. ಅರಸು ಅವರ ತಿದ್ದುಪಡಿಯ ಕಾಯ್ದೆ ಪ್ರಕಾರ
ಒಬ್ಬ ವ್ಯಕ್ತಿ ಒಣ ಭೂಮಿಯಾದರೆ 54 ಎಕರೆ, ತರಿ ಜಮೀನಾದರೆ 12 ರಿಂದ 18 ಎಕರೆ, ತೋಟವಾದರೆ 10 ಎಕರೆಗಿಂತ ಹೆಚ್ಚು ಭೂಮಿ ಹೊಂದುವಂತಿಲ್ಲ. ವ್ಯವಸಾಯ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ.
ಕೃಷಿ ಕುಟುಂಬಕ್ಕೆ ಸೇರದವರು ಕ್ರಯ, ಭೋಗ್ಯ ದಾನ, ವಿಲ್, ಗುತ್ತಿಗೆ ಇತ್ಯಾದಿ ಮೂಲಕ ಕೃಷಿ ಭೂಮಿ ಹೊಂದತಕ್ಕದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದರು.

ಕಾನೂನು ಬಾಹಿರವಾಗಿ ಕೃಷಿ ಭೂಮಿ ಹೊಂದಿದರೆ ಅಂಥವರಿಗೆ ದಂಡ ಹಾಕಿ ಭೂಮಿಯನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದು ಭೂಹೀನ ಬಡವರಿಗೆ ನೀಡುವ ಅವಕಾಶವನ್ನು ಒದಗಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ
ಭೂ ಸುಧಾರಣೆ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಮಾಡಿ ಕೃಷಿಕರವಲ್ಲದವರ ಕೈಗೆ ಕೃಷಿ ಭೂಮಿ ಒಪ್ಪಿಸಲು ಮುಂದಾಗಿದೆ ಎಂದು ಕಿಡಿಕಾರಿದರು.

ಪಟ್ಟಭದ್ರರು ಒತ್ತಡ ಹಾಕಿ ಅಥವಾ ಆಮಿಷ ಒಡ್ಡಿ ರೈತರ ಭೂಮಿಯನ್ನು ಕಬಳಿಸಲಿದ್ದಾರೆ. ಇದರಿಂದ ರೈತರು ಬೀದಿಗೆ ಬರಲಿದ್ದಾರೆ. ರೈತರು ಕಾರ್ಪೋರೇಟ್ ಕುಳಗಳ ಗುಲಾಮರಾಗುವಂತಹ ಸ್ಥಿತಿ ನಿರ್ಮಾಣವಾಗುವ ಮೊದಲು ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮೊದಲು ನಗರದ ಅಂಬೇಡ್ಕರ್‌ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಬಸವೇಶ್ವರ ವೃತ್ತಕ್ಕೆ ಬಂದು ಅಲ್ಲಿಂದ ಭಗತಸಿಂಗ್‌ ವೃತ್ತದ ಮಾರ್ಗವಾಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಕೆಲ ಹೊತ್ತು ಧರಣಿ ನಡೆಸಿದರು. ನಂತರ ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ, ದಯಾನಂದ ಸ್ವಾಮಿ, ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ನಜೀರ್‌ ಅಹ್ಮದ್, ಅಹ್ಮದ್‌ ಜಂಬಗಿ, ಸಿಪಿಐ ಮುಖಂಡ ಬಾಬುರಾವ್‌ ಹೊನ್ನಾ, ಸಿಐಟಿಯು ಮುಖಂಡ ಆರ್.ಪಿ.ರಾಜಾ, ವೆಲ್‌ಫೇರ್ ‍ ಪಾರ್ಟಿ ಆಫ್‌ ಇಂಡಿಯಾದ ಮುಬಾಸಿರ್ ಸಿಂದೆ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಾಬುರಾವ್‌ ಪಾಸ್ವಾನ್. ಡಿಎಸ್‌ಎಸ್‌ (ಭೀಮವಾದ) ಜಿಲ್ಲಾ ಸಂಚಾಲಕ ಕಲ್ಯಾಣರಾವ್‌ ಭೋಸ್ಲೆ, ಸೆಂಟ್ರಿಂಗ್ ವರ್ಕರ್ಸ್ ಯೂನಿಯನ್‌ನ ಮನ್ಸೂರ್‌ ಅಹ್ಮದ್‌ ಖಾದ್ರಿ, ಮಹಮ್ಮದ್‌ ಹಬೀಬುದ್ದಿನ್, ಪಂಡಿತ ನಿರ್ಣಾಕರ್, ರವಿ ವಾಡೇಕರ್, ವೀರ ಕನ್ನಡಿಗರ ಸೇನೆಯ ಸುಬ್ಬಣ್ಣ ಕರಕನಳ್ಳಿ, ಕನ್ನಡ ಸಮರ ಸೇನೆಯ ಅವಿನಾಶ ದೀನೆ, ಕರ್ನಾಟಕ ಪ್ರಜಾಶಕ್ತಿ ಸಮತಿಯ ಮಹೇಂದ್ರಕರ್‌ ಹೊಸಮನಿ ಪಾಲ್ಗೊಂಡಿದ್ದರು,

ಕರ್ನಾಟಕ ವಿಶ್ವ ನಿರ್ಮಾಣ ಸೇನೆ, ಕರ್ನಾಟಕ ಸರ್ಕಾರಿ ಗ್ರಾಮೀಣ ಗ್ರಂಥಾಲಯಗಳ ನೌಕರರ ಸಂಘ, ಕರ್ನಾಟಕ ಪ್ರಜಾಶಕ್ತಿ ಸಮಿತಿ, ಬಹುಜನ ಜಾಗೃತಿ ವೇದಿಕೆ, ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾಸಂಘದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.


ತೆರೆದಿದ್ದ ಅಂಗಡಿ ಮುಂಗಟ್ಟುಗಳು

ಬೀದರ್‌: ನಗರದಲ್ಲಿ ಸೋಮವಾರ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಹಾಗೂ ಆಟೊರಿಕ್ಷಾಗಳು ಎಂದಿನಂತೆ ಸಂಚರಿಸಿದವು.
ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದವು. ಹೋಟೆಲ್, ಬ್ಯಾಂಕ್‌, ಪೆಟ್ರೋಲ್‌ ಬಂಕ್, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ತೆರೆದುಕೊಂಡಿದ್ದವು. ಲಾಕ್‌ಡೌನ್‌ ನಂತರ ಇನ್ನೂ ಮಾರುಕಟ್ಟೆ ಚೇತರಿಸಿಕೊಂಡಿಲ್ಲ. ಹೀಗಾಗಿ ಪ್ರತಿಭಟನಾಕಾರರು ಒತ್ತಾಯದಿಂದ ಅಂಗಡಿಗಳನ್ನು ಬಂದ್‌ ಮಾಡುವ ಪ್ರಯತ್ನಕ್ಕೆ ಕೈಹಾಕಲಿಲ್ಲ.
ಕೇಂದ್ರ ಬಸ್‌ ನಿಲ್ದಾಣ, ಡಾ.ಅಂಬೇಡ್ಕರ್‌ ವೃತ್ತ, ಭಗತ್‌ಸಿಂಗ್‌ ವೃತ್ತ, ಬಸವೇಶ್ವರ ವೃತ್ತ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಮೀಪ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT