ಶುಕ್ರವಾರ, ಏಪ್ರಿಲ್ 16, 2021
22 °C
ವಿವಿಧ ಸಂಘಟನೆಗಳಿಂದ ರಾಜ್ಯಪಾಲರಿಗೆ ಮನವಿ ಪತ್ರ

ಹೊಸ ಪಶು ವಿವಿ ಸ್ಥಾಪನೆ ತಡೆಗೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಾಜ್ಯದ ಶಿವಮೊಗ್ಗದಲ್ಲಿ ಎರಡನೇ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರಿಕರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ನಂಜುಂಡಪ್ಪ ವರದಿ ಅನ್ವಯ ಬೀದರ್‌ನಲ್ಲಿ 2005 ರಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯ ಅಧೀನದಲ್ಲಿ ಪಶು ವೈದ್ಯಕೀಯ, ಹೈನು, ಮೀನುಗಾರಿಕೆ ಕಾಲೇಜುಗಳು, ಸಂಶೋಧನಾ ಕೇಂದ್ರಗಳು ಸೇರಿ 23 ಸಂಸ್ಥೆಗಳು ಇವೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯ ಆರಂಭವಾಗಿ 16 ವರ್ಷಗಳಾದರೂ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ಸಾವಿರ ಹುದ್ದೆಗಳ ಮಂಜೂರಾತಿ ಇದ್ದರೂ, ಕೇವಲ ಗುತ್ತಿಗೆ ಸಿಬ್ಬಂದಿ ಇದ್ದಾರೆ. ಮುಖ್ಯ ಆಡಳಿತ ಕಚೇರಿ ಇಲ್ಲ. ಮೂಲಸೌಕರ್ಯಗಳ ಕೊರತೆ ಕಾರಣ ವಿಶ್ವವಿದ್ಯಾಲಯ ಅಧೀನದ ಕಾಲೇಜುಗಳ ಮಾನ್ಯತೆಗೆ ಸಮಸ್ಯೆಯಾಗಿದೆ ಎಂದು ದೂರಿದರು.

ಬೇರೆ ರಾಜ್ಯಗಳಲ್ಲಿ ಎರಡು ಪಶು ವೈದ್ಯಕೀಯ ವಿಶ್ವವಿದ್ಯಾಲಯಗಳಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಸ್ಥಾಪಿಸಲಾದ ರಾಜ್ಯದ ಏಕೈಕ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುವ ಬದಲು ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವುದು ಸರಿಯಲ್ಲ ಎಂದು ಹೇಳಿದರು.

ಹೊಸ ವಿವಿ ಸ್ಥಾಪನೆಯಾದರೆ ಸುಮಾರು 20 ಸಂಸ್ಥೆಗಳು ಅದರ ವ್ಯಾಪ್ತಿಗೆ ಹೋಗಲಿದ್ದು, ಇದು ಬೀದರ್ ವಿಶ್ವವಿದ್ಯಾಲಯ ಮುಚ್ಚುವ ಹುನ್ನಾರವಾಗಿದೆ. ಕೂಡಲೇ ಹೊಸ ಪಶು ವಿವಿ ಸ್ಥಾಪನೆ ತಡೆದು, ಬೀದರ್ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ರಾಮಕೃಷ್ಣನ್, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್, ಸದ್ಭಾವನಾ ಮಂಚ್ ಜಿಲ್ಲಾ ಸಂಚಾಲಕ ಗುರುನಾಥ ಗಡ್ಡೆ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ, ಜನತಾ ಹೂವು ಮಾರಾಟಗಾರರ ಸಂಘದ ಅಧ್ಯಕ್ಷ ಸಿದ್ದಪ್ಪ ಫುಲಾರಿ, ಮುಖಂಡರಾದ ಶಿವಶರಣಪ್ಪ ವಾಲಿ, ಶಕುಂತಲಾ ವಾಲಿ, ರವಿ ಮೂಲಗೆ, ಬಿ.ಎಸ್. ಕುದರೆ, ಓಂಪ್ರಕಾಶ ರೊಟ್ಟೆ, ರಾಜಕುಮಾರ ಬಿರಾದಾರ, ಗುಣವಂತರಾವ್, ರಮೇಶ ಪಾಟೀಲ, ಎಸ್.ಎಂ. ಐನಾಪುರ, ಡಾ. ಚಂದ್ರಪ್ಪ ಬಿ., ಕಿಶಣ್‍ಸಿಂಗ್, ಡಾ. ಮಂಜುಳಾ, ಡಾ. ಭಾಗ್ಯಶ್ರೀ, ವೀರಭದ್ರಪ್ಪ ಉಪ್ಪಿನ್, ಚನ್ನಬಸವಣ್ಣ, ಡಾ. ಅಶ್ವಿನಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.