ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ಹೋರಾಟಗಾರರಿಂದ ಅಧಿಕಾರಿಗೆ ದಿಗ್ಬಂಧನ

Published 7 ಮಾರ್ಚ್ 2024, 15:41 IST
Last Updated 7 ಮಾರ್ಚ್ 2024, 15:41 IST
ಅಕ್ಷರ ಗಾತ್ರ

ಔರಾದ್: ಹಳೇ ಸ್ಮಶಾನ ಭೂಮಿ ಒತ್ತುವರಿ ತೆರವು ಹಾಗೂ ಹೊಸದಾಗಿ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಇಲ್ಲಿಯ ತಹಶೀಲ್ದಾರ್ ಕಚೇರಿ ಎದುರು ಹಿಂದೂ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾಮಿದಾಸ ಅವರಿಗೆ ಪ್ರತಿಭಟನಾಕಾರರು ಕೆಲಹೊತ್ತು ದಿಗ್ಬಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಜತೆ ಮಾತನಾಡಲು ಸ್ಥಳಕ್ಕೆ ಆಗಮಿಸಿದ ಸ್ವಾಮಿದಾಸ ಅವರನ್ನು ಕೂಡಿಸಿ ‘ನಮ್ಮ ಸಮಸ್ಯೆ ಪರಿಹರಿಸುವ ತನಕ ನಿಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ. ನಾವು ಕಳೆದ 15 ದಿನಗಳಿಂದ ಇಲ್ಲಿ ಧರಣಿ ಕುಳಿತಿದ್ದೇವೆ. ಆದರೆ ನಮ್ಮ ಬೇಡಿಕೆಗೆ ಮಾತ್ರ ಸ್ಪಂದನೆ ಸಿಗುತ್ತಿಲ್ಲ. ಜಿಲ್ಲಾಧಿಕಾರಿ ಬಂದು ನಮ್ಮ ಸಮಸ್ಯೆ ಪರಿಹರಿಸುವ ತನಕ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ಪಿಎಸ್‍ಐ ಉಪೇಂದ್ರ ಪ್ರತಿಭಟನಾ ನಿರತರ ಮನವೊಲಿಸಿ ಪರಿಸ್ಥಿತಿ ಶಾಂತಗೊಳಿಸಿದರು. ನ್ಯಾಯಾಲಯದ ತಡೆಯಾಜ್ಞೆ ಇರುವ ಭೂಮಿ ಹೊರತುಪಡಿಸಿ ಉಳಿದ ಅತಿಕ್ರಮಣವಾದ ಸ್ಮಶಾನ ಭೂಮಿಯನ್ನು ನಿಯಮಾನುಸಾರ ಮಾ.13ರೊಳಗೆ ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಶಾಂತರಾದರು.

‘ಸ್ಮಶಾನ ಭೂಮಿ ಅತಿಕ್ರಮಣ ತೆರವು ಮಾಡಿ, ಆ ಭೂಮಿಗೆ ತಂತಿ ಬೇಲಿ ಹಾಕಿ ಅಲ್ಲಿ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು. ಜನಸಂಖ್ಯೆ ಜಾಸ್ತಿ ಆಗಿರುವುದರಿಂದ ಈಗಿರುವ ಸ್ಮಶಾನ ಭೂಮಿ ಸಾಕಾಗುತ್ತಿಲ್ಲ. ಹೀಗಾಗಿ ಊರ ಹೊರಗೆ 10 ಎಕರೆ ಜಮೀನು ನೀಡಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆ. ಈ ಬೇಡಿಕೆ ಈಡೇರುವ ತನಕ ಧರಣಿ ಮುಂದುವರಿಯಲಿದೆ’ ಎಂದು ಪ್ರತಿಭಟನಾ ನಿರತ ಶರಣಪ್ಪ ಪಾಟೀಲ, ಅನೀಲ ಬೇಲೂರೆ, ಶಂಕು ನಿಸ್ಪತೆ, ಮಹೇಶ ಸ್ವಾಮಿ, ರಜನಿ ದಾಮಾ, ಅಮಿತ ಶಿವಪೂಜೆ ಇತರರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT