ಮಂಗಳವಾರ, ಫೆಬ್ರವರಿ 25, 2020
19 °C

ಗೋಶಾಲೆಗೆ ₹15 ಲಕ್ಷ ನೆರವು: ಸಚಿವ ಪ್ರಭು ಚವಾಣ್‌ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಸರ್ಕಾರದ ನಿಯಮಾವಳಿಯಲ್ಲಿ ಅವಕಾಶ ಇದ್ದರೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆಯ ಅಭಿವೃದ್ಧಿ ಹಾಗೂ ಗೋಸಂರಕ್ಷಣೆಗೆ ₹15 ಲಕ್ಷ ಬಿಡುಗಡೆ ಮಾಡಲಾಗುವುದು’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಹೇಳಿದರು.

ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆಯನ್ನು ಹಸುವಿಗೆ ಮೇವು ತಿನ್ನಿಸುವ ಮೂಲಕ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ರಾಮಕೃಷ್ಣ ಆಶ್ರಮವು ಗೋಶಾಲೆಯನ್ನು ಆರಂಭಿಸುವ ಜತೆಗೆ ದೇಸಿ ತಳಿ ರಕ್ಷಣೆಗೆ ಪಣ ತೊಟ್ಟಿರುವುದು ಒಳ್ಳೆಯ ಸಂಗತಿಯಾಗಿದೆ’ ಎಂದು ಪ್ರಶಂಸಿಸಿದರು.

‘ಎಲ್ಲ ಸಮುದಾಯಗಳ ಬಡವರಿಗೆ ಗಿರ್‌ ತಳಿಯ ಹಸುಗಳನ್ನು ಕೊಡಲಾಗುವುದು. ಇದರಿಂದ ಗೋ ಸಂರಕ್ಷಣೆ ಸಾಧ್ಯವಾಗಲಿದೆ. ಗೋವುಗಳು ಕಸಾಯಿಖಾನೆಯ ಪಾಲಾಗದಂತೆ ಎಚ್ಚರಿಕೆ ವಹಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ’ ಎಂದು ತಿಳಿಸಿದರು.

‘ಈಗಾಗಲೇ ನಾನು 22 ಮಕ್ಕಳನ್ನು ದತ್ತು ಪಡೆದುಕೊಂಡು ಅವರಿಗೆ ಎಲ್ಲ ರೀತಿಯ ನೆರವು ಕೊಡುತ್ತಿದ್ದೇನೆ. ರಾಮಕೃಷ್ಣ ಆಶ್ರಮದ ಗೋಶಾಲೆಯ ಒಂದು ಹಸುವನ್ನು ದತ್ತು ಪಡೆಯಲಾಗುವುದು’ ಎಂದು ಘೋಷಿಸಿದರು.

ಮುಖ್ಯ ಅತಿಥಿಗಳಾಗಿದ್ದ ಸಂಸದ ಭಗವಂತ ಖೂಬಾ, ‘ಆಧುನಿಕತೆಯ ಪರಿಣಾಮವಾಗಿ ಕುಟುಂಬಗಳು ಹಸುಗಳ ಸಾಕಾಣಿಕೆಯನ್ನು ನಿಲ್ಲಿಸಿವೆ. ಇದೇ ಕಾರಣಕ್ಕೆ ಇಂದು ಸಮಾಜ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ರಾಮಕೃಷ್ಣ ಆಶ್ರಮವು ಗೋಶಾಲೆಯನ್ನು ಆರಂಭಿಸುವ ಮೂಲಕ ಇತರ ಮಠಗಳಿಗೆ ಪ್ರೇರಣೆಯಾಗಿದೆ’ ಎಂದು ಹೇಳಿದರು.

ಶಾಸಕ ರಹೀಂ ಖಾನ್ ಮಾತನಾಡಿ, ‘ಬೀದರ್ ಜಿಲ್ಲೆಯಲ್ಲಿ ಅನೇಕ ಮಠಗಳು ಇವೆ. ಆದರೆ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ರಾಮಕೃಷ್ಣ ಆಶ್ರಮ ಮಾತ್ರ’ ಎಂದು ತಿಳಿಸಿದರು.
‘ಗೋಶಾಲೆಗೆ ಅನುಕೂಲವಾಗುವಂತೆ ಒಂದು ಕೊಳವೆಬಾವಿ ಕೊರೆಸಲಾಗುವುದು. ಗೋಶಾಲೆ ವರೆಗೆ ರಸ್ತೆಯನ್ನೂ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ಗಿರ್‌ ತಳಿ ಸಂರಕ್ಷಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಾರುತಿರಾವ್‌ ಮಾಳೋದೆ ಮಾತನಾಡಿ, ‘ಗಿರ್‌ ತಳಿಯ ಹಸು ಸಾಮಾನ್ಯವಾಗಿ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಈ ತಳಿಗಳ ಹಸುಗಳು ಹೆಚ್ಚು ಹಾಲು ಕೊಡುತ್ತವೆ. ಹೋರಿಗಳು ಕೃಷಿಗೆ ಅನುಕೂಲಕರವಾಗಿವೆ’ ಎಂದು ತಿಳಿಸಿದರು.
‘ಸಗಣಿ ಹಾಗೂ ಗೋಮೂತ್ರದಿಂದ ತಯಾರಿಸುವ ಜೀವಾಮೃತ, ಅಗ್ನಿ ಹೋತ್ರ. ಗೋಮೂತ್ರ ಅರ್ಕಗಳು ಬಹಳ ಉಪಯುಕ್ತವಾಗಿವೆ’ ಎಂದು ತಿಳಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ‘ದೇಶದ ಭವ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ದಿಸೆಯಲ್ಲಿ ಗೋಶಾಲೆಯನ್ನು ಆರಂಭಿಸಲಾಗಿದೆ. ಹಾಲಿನ ಉತ್ಪನ್ನಗಳನ್ನು ಪಡೆಯುವುದಕ್ಕಿಂತಲೂ ಗೋಸೇವೆಯೇ ಇಲ್ಲಿ ಪ್ರಧಾನವಾಗಿದೆ’ ಎಂದು ತಿಳಿಸಿದರು.


ಪತ್ರಕರ್ತ ಸದಾನಂದ ಜೋಶಿ ಸ್ವಾಗತಿಸಿದರು. ಮಾರುತಿ ಸಾಗರ ಪರಿಚಯಿಸಿದರು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು