ಬುಧವಾರ, ಸೆಪ್ಟೆಂಬರ್ 22, 2021
27 °C
ತೆಲಂಗಾಣ ಗಡಿಯಲ್ಲಿದ್ದ ಮೂರು ಚೆಕ್‌ಪೋಸ್ಟ್‌ ಸ್ಥಗಿತ

ಮಹಾರಾಷ್ಟ್ರದ ಗಡಿಯಲ್ಲಿ ಸ್ಥಳದಲ್ಲೇ ರ್‍ಯಾಟ್‌ ಪರೀಕ್ಷೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮಹಾರಾಷ್ಟ್ರದಲ್ಲಿ ಕೋವಿಡ್‌ ಕಡಿಮೆಯಾಗಿಲ್ಲ. ನೆರೆಯ ತೆಲಂಗಾಣದ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹೀಗಾಗಿ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಆರು ಚೆಕ್‌ಪೋಸ್ಟ್‌ಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದು, ತೆಲಂಗಾಣ ಗಡಿಯಲ್ಲಿನ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗಿದೆ.

ಮಹಾರಾಷ್ಟ್ರದಿಂದ ಬರುವವರ ಕೋವಿಡ್ ನೆಗೆಟಿವ್ ರಿಪೋರ್ಟ್ ಪರಿಶೀಲಿಸಲಾಗುತ್ತಿದೆ. ಥರ್ಮಲ್ ಸ್ಕ್ಯಾನರ್ ಮೂಲಕ ಅವರ ದೇಹದ ಉಷ್ಣತೆಯನ್ನು ಪರೀಕ್ಷಿಸಲಾಗುತ್ತಿದೆ. ಕೋವಿಡ್ ಲಸಿಕೆ ಪಡೆಯದ ಹಾಗೂ ಕೋವಿಡ್‌ ನೆಗೆಟಿವ್‌ ವರದಿ ಇಲ್ಲದವರ ಪರೀಕ್ಷೆ ನಡೆಸಲಾಗುತ್ತಿದೆ.

ಔರಾದ್‌ ತಾಲ್ಲೂಕಿನ ವನಮಾರಪಳ್ಳಿ, ಕಮಲನಗರ, ಕಮಲನಗರ ತಾಲ್ಲೂಕಿನ ಚಿಕ್ಲಿ, ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ, ಹುಲಸೂರಿನ ಶಹಾಜನಿ ಔರಾದ್‌ ಚೆಕ್‌ಪೋಸ್ಟ್‌ನಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತಿದೆ. ಬಸ್, ಕಾರು, ದ್ವಿಚಕ್ರವಾಹನ ಸೇರಿದಂತೆ ಬೇರೆ ಬೇರೆ ವಾಹನಗಳಲ್ಲಿ ಬರುತ್ತಿರುವವರ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

‘ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದು, ನನ್ನ ಬಳಿ ಪ್ರಮಾಣ ಇಟ್ಟುಕೊಂಡಿರುವೆ. ಜಿಲ್ಲೆಯ ಗಡಿಯಲ್ಲಿ ಮಹಾರಾಷ್ಟ್ರದಿಂದ ಬರುವ ಬಸ್‌ಗಳನ್ನು ತಡೆದು ಪ್ರಯಾಣಿಕರ ಕಡ್ಡಾಯ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಯಾಣ ಬೆಳೆಸವರು ಕೋವಿಡ್‌ ಲಸಿಕೆ ಪಡೆಯುವುದು ಸೂಕ್ತ’ ಎಂದು ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ ಚಾಲಕ ವಿತೇಂದ್ರ ಹೇಳಿದರು.

ಚಂಡಕಾಪುರ ಚೆಕ್‌ಪೋಸ್ಟ್‌ನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ 13,894 ಜನರ ತಪಾಸಣೆ ನಡೆಸಲಾಗಿದೆ. 1,332 ಜನರನ್ನು ವಾಪಸ್‌ ಕಳಿಸಲಾಗಿದೆ. 556 ಜನರ ರ್‍ಯಾಟ್‌ ಹಾಗೂ 214 ಮಂದಿಯ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ. ಹನಮಂತವಾಡಿಯಲ್ಲಿ 5,426 ಜನರ ತಪಾಸಣೆ ನಡೆಸಲಾಗಿದೆ. 900 ಜನರನ್ನು ವಾಪಸ್‌ ಕಳಿಸಲಾಗಿದೆ. 235 ಜನರ ರ್‍ಯಾಟ್‌ ಪರೀಕ್ಷೆ ನಡೆಸಲಾಗಿದೆ. ಬಸವಕಲ್ಯಾಣ ತಾಲ್ಲೂಕು ಒಂದರಲ್ಲೇ ನಾಲ್ಕು ದಿನಗಳಲ್ಲಿ 19,320 ಜನರ ಪರೀಕ್ಷೆ ನಡೆಸಿ 2,232 ಜನರನ್ನು ವಾಪಸ್‌ ಕಳಿಸಲಾಗಿದೆ. 791 ಜನರ ರ್‍ಯಾಟ್ ಹಾಗೂ 214 ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ.

ಔರಾದ್‌ ತಾಲ್ಲೂಕಿನ ಚೆಕ್‌ಪೋಸ್ಟ್‌ಗಳಲ್ಲಿ ಮೂರು ದಿನಗಳ ಅವಧಿಯಲ್ಲಿ 194 ಮಂದಿಯ ತಪಾಸಣೆ ನಡೆಸಲಾಗಿದೆ. 158 ಜನರ ರ್‍ಯಾಟ್‌ ಪರೀಕ್ಷೆ ಮಾಡಲಾಗಿದೆ. ಇಬ್ಬರಲ್ಲಿ ಜ್ವರ ಕಾಣಿಸಿಕೊಂಡ ಕಾರಣ ಅವರನ್ನು ಮರಳಿ ಕಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ತೆಲಂಗಾಣಕ್ಕೆ ಹೊಂದಿಕೊಂಡಿರುವ ಬೀದರ್‌ ತಾಲ್ಲೂಕಿನ ಮಲ್ಕಾಪುರ ಪಂಚಾಯಿತಿ ವ್ಯಾಪ್ತಿಯ ಶಹಾಪುರ ಸಮೀಪದ ಗಡಿಯಲ್ಲಿ ಸ್ಥಾಪಿಸಿದ ಚೆಕ್‌ಪೋಸ್ಟ್, ಭಂಗೂರ್‌ ಚೆಕ್‌ಪೋಸ್ಟ್ ಹಾಗೂ ಔರಾದ್‌ ತಾಲ್ಲೂಕಿನ ಜಮಗಿ ಸಮೀಪದ ಬಾರ್ಡರ್‌ ತಾಂಡಾ ಚೆಕ್‌ಪೋಸ್ಟ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

‘ಜಿಲ್ಲೆಯ ಆರು ಚೆಕ್‌ಪೋಸ್ಟ್‌ಗಳಲ್ಲಿ ಸಹಜವಾಗಿ ತಪಾಸಣೆ ನಡೆದಿದೆ.ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುತ್ತಿರುವವರಿಗೆ ಸ್ಥಳದಲ್ಲೇ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಮೂರನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಗಡಿಯಲ್ಲಿ ತಪಾಸಣೆ ಇನ್ನಷ್ಟು ಬಿಗಿಗೊಳಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ವಿ.ಜಿ.ರೆಡ್ಡಿ ಹೇಳಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಭೆ 4ಕ್ಕೆ
ಬೀದರ್:
ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಇಳಿಮುಖವಾಗಿಲ್ಲ. ನೆರೆಯ ರಾಜ್ಯಗಳಿಂದ ಜಿಲ್ಲೆಗೆ ಬಂದು ಹೋಗುವವರ ಸಂಖ್ಯೆಯೂ ಕಡಿಮೆಯಾಗಿಲ್ಲ. ಮೂರನೇ ಅಲೆ ಬಾರದಂತೆ ಎಚ್ಚರಿಕೆ ವಹಿಸುವ ದಿಸೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಆಗಸ್ಟ್ 4 ರಂದು ನಗರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಅಂದು ಕೋವಿಡ್ ನಿರ್ವಹಣೆಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು