ಆದರೆ, ವಾಯುಪಡೆ ತರಬೇತಿ ಕೇಂದ್ರದಿಂದ ಸ್ವಲ್ಪ ದೂರದಲ್ಲಿರುವ ಬೆಳ್ಳೂರು ಸಮೀಪ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಹಗಲು–ರಾತ್ರಿ ಕೆಂಪು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಗಣಿಗಾರಿಕೆಯಿಂದ ಈಗಾಗಲೇ ಹಲವೆಡೆ ಕಂದಕಗಳು ನಿರ್ಮಾಣಗೊಂಡು, ಮಳೆ ನೀರು ತುಂಬಿಕೊಂಡಿದೆ. ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿರುವುದರಿಂದ ಜಿಂಕೆ, ಕೃಷ್ಣಮೃಗಗಳ ಆವಾಸ ಸ್ಥಾನಕ್ಕೆ ಕಂಟಕ ಎದುರಾಗಿದೆ. ಅವುಗಳಿಗೆ ಭದ್ರತೆ ಇಲ್ಲದಂತಾಗಿದೆ. ಇದಕ್ಕೆ ಪರಿಸರ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.