ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಕಡಿಮೆಯಾದ ಜನ ಸಂಚಾರ

ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆ ತಪಾಸಣೆ
Last Updated 7 ಮಾರ್ಚ್ 2021, 3:50 IST
ಅಕ್ಷರ ಗಾತ್ರ

ಬೀದರ್: ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಜಿಲ್ಲೆಯ ಗಡಿಯಲ್ಲಿ ತಪಾಸಣೆ ಇನ್ನಷ್ಟು ಬಿಗಿಗೊಳಿಸಲಾಗಿದೆ. ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ, ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನ ವನಮಾರಪಳ್ಳಿ ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಯೂ ತಪಾಸಣೆ ನಡೆಸಲಾಗುತ್ತಿದೆ.

ಮಹಾರಾಷ್ಟ್ರದ ಲಾತೂರ್‌ ಜಿಲ್ಲಾಡಳಿತ ಪ್ರತಿ ಭಾನುವಾರ ಜನತಾ ಕರ್ಫ್ಯೂ ವಿಧಿಸುವ ನಿರ್ಧಾರ ಕೈಬಿಟ್ಟಿದೆ. ಆದರೆ, ನಿತ್ಯ ರಾತ್ರಿ 11ರಿಂದ ಬೆಳಗಿನ 5 ಗಂಟೆ ವರೆಗೆ ಕರ್ಫ್ಯೂ ಮುಂದುವರಿಸ ಲಾಗಿದೆ. ಜಾತ್ರೆ, ಸಂತೆ ಹಾಗೂ ಸಮಾ ವೇಶಗಳನ್ನು ನಿಷೇಧಿಸಿದೆ. ಮದುವೆ ಮುಂಜಿವೆಗಳಿಗೆ ಕೆಲ ನಿರ್ಬಂಧ ಹೇರಿದೆ.

ಮಹಾರಾಷ್ಟ್ರ ಹಾಗೂ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಮುಂದುವರಿದಿದೆ. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ವಿಪರೀತ ಬಿಸಿಲು ಇದ್ದರೂ ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದು ಗಡಿ ಗ್ರಾಮಗಳ ಜನರಲ್ಲಿ ಆತಂಕ ಹೆಚ್ಚಿಸಿದೆ.

ಕಮಲನಗರ ತಾಲ್ಲೂಕಿನ ಚಿಕಲಿ (ಯು) ಬಳಿ ಕಳೆದ ವರ್ಷ ಚೆಕ್‌ಪೋಸ್ಟ್‌ ತೆರೆಯಲಾಗಿತ್ತು. ಈ ಬಾರಿ ತೆರೆದಿಲ್ಲ. ಹೀಗಾಗಿ ಮಹಾರಾಷ್ಟ್ರದಿಂದ ಅನೇಕ ಜನ ಇದೇ ಮಾರ್ಗವಾಗಿ ಜಿಲ್ಲೆಯೊಳಗೆ ಪ್ರವೇಶ ಮಾಡುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಗೊತ್ತಿದ್ದರೂ ಇಲ್ಲಿ ಚೆಕ್‌ಪೋಸ್ಟ್‌ ಆರಂಭಿ ಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ದಾಬಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೇರೆ ಕಡೆಗೆ ಹೋಗ ಬಯಸುವ ವ್ಯಕ್ತಿಗಳ ಗಂಟಲು ಮಾದರಿ ಪಡೆದು ಕೋವಿಡ್‌ ಪರೀಕ್ಷೆ ನಡೆಸಿ ವೈದ್ಯಕೀಯ ಪ್ರಮಾಣಪತ್ರ ನೀಡಲಾಗಿದೆ. ಚಿಕಲಿ ಗ್ರಾಮದ ಏಳು ಜನರು ವೈದ್ಯಕೀಯ ಪ್ರಮಾಣಪತ್ರ ಪಡೆದು ಧರ್ಮಸ್ಥಳಕ್ಕೆ ತೆರಳಿದ್ದಾರೆ.

‘ಮಹಾರಾಷ್ಟ್ರದಿಂದ‌ ಬಂದ 276 ಪ್ರಯಾಣಿಕರನ್ನು‌ ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನ ವನಮಾರಪಳ್ಳಿ ಚೆಕ್ ಪೋಸ್ಟ್ ಬಳಿ ತಪಾಸಣೆ ಮಾಡಲಾಗಿದೆ. ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಚೆಕ್‌ಪೋಸ್ಟ್‌ನಲ್ಲಿ 905 ಜನರ ತಪಾಸಣೆ ನಡೆಸಲಾಗಿದೆ. 24 ಗಂಟೆಗಳ ಅವಧಿಯಲ್ಲಿ ಕೋವಿಡ್‌ ಸೋಂಕಿತರು ಪತ್ತೆಯಾಗಿಲ್ಲ. ವೈದ್ಯಕೀಯ ವರದಿ ಇಲ್ಲದವರನ್ನು ಮರಳಿ ಕಳಿಸಲಾಗಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT