ಮಂಗಳವಾರ, ನವೆಂಬರ್ 24, 2020
26 °C
ಅಖಿಲ ಭಾರತ ಕಿಸಾನ್ ಸಭಾದಿಂದ ಮೆರವಣಿಗೆ

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರಧಾನಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಹಿಂಗಾರು ಬೆಳೆ ಸಾಲ ಮನ್ನಾ ಮಾಡಬೇಕು. ಮುಂಗಾರಿಗೆ ಬಡ್ಡಿ ರಹಿತ ಬೆಳೆ ಸಾಲ ಕೊಡಬೇಕು. ಟ್ರ್ಯಾಕ್ಟರ್ ಸಾಲ ಮನ್ನಾ ಮಾಡಬೇಕು. ಸ್ವಸಹಾಯ ಗುಂಪುಗಳ ಸಾಲದ ಬಡ್ಡಿ ಮನ್ನಾ ಮಾಡಬೇಕು. ಸಹಕಾರ ಸಂಘಗಳಿಗೆ ಹಾಲು ಪೂರೈಸುವವರಿಗೆ ಮಾಸಿಕ ರೂ. 1 ಸಾವಿರ ಸಹಾಯಧನ ಕಲ್ಪಿಸಬೇಕು. ಎರಡು ಎಮ್ಮೆ ಅಥವಾ ಆಕಳು ಕೊಡಬೇಕು. 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ರೂ. 7,500 ಗೌರವ ಧನ ನೀಡಬೇಕು. ಡೀಸೆಲ್ ಬೆಲೆ ಶೇ 50 ರಷ್ಟು ಕಡಿಮೆ ಮಾಡಬೇಕು. ವಿದ್ಯುತ್ ಮಸೂದೆ (ತಿದ್ದುಪಡಿ) 2020 ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕೃಷಿ ಉತ್ಪನ್ನ ವಾಣಿಜ್ಯ ಮತ್ತು ಮಾರಾಟ (ಉತ್ತೇಜನ ಹಾಗೂ ಬೆಂಬಲ)ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳು ಕುರಿತ ಒಪ್ಪಂದ ಕಾಯ್ದೆ ಹಾಗೂ ಅಗತ್ಯ ವಸ್ತುಗಳ ಕಾಯ್ದೆ (ತಿದ್ದುಪಡಿ) 2020 ರೈತ ವಿರೋಧಿಯಾಗಿವೆ ಎಂದು ಆಪಾದಿಸಿದರು.

ಸಭಾದ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಅಹಮ್ಮದ್, ಖಾಜಾ ಮೈನೊದ್ದೀನ್, ಖಾದರ್ ಶಾ, ಮಾಣಿಕ ಖಾನಾಪೂರಕರ್, ಎಂ.ಡಿ. ಷಫಾಯತ್ ಅಲಿ, ಖಮರ್ ಪಟೇಲ್, ಶಿವರಾಜ ಕಟಗಿ, ಪ್ರಭು ತಗಣಿಕರ್ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.