ಶುಕ್ರವಾರ, ಜುಲೈ 30, 2021
20 °C
ಬಹುತೇಕ ತರಕಾರಿ ಬೆಲೆಯಲ್ಲಿ ಹೆಚ್ಚಳ

ಬೀದರ್: ಹಿಗ್ಗಿದ ಹಿರೇಕಾಯಿ, ಖಾರವಾದ ಮೆಣಸಿನಕಾಯಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಹಿಂದೂಗಳ ಹಬ್ಬ ಹರಿದಿನಗಳು ಇನ್ನೂ ಒಂದು ತಿಂಗಳು ಇವೆ. ತರಕಾರಿ ಬೆಲೆ ಸ್ಥಿರವಾಗಿರಬಹುದು ಅಂದುಕೊಂಡಿದ್ದ ಗ್ರಾಹಕರ ಲೆಕ್ಕಾಚಾರ ಬುಡಮೇಲಾಗಿದೆ. ಮಳೆಯ ಕಾರಣ ಹೊರ ಜಿಲ್ಲೆಗಳಿಂದ ಹೆಚ್ಚು ತರಕಾರಿ ಬಂದಿಲ್ಲ. ತರಕಾರಿ ಬೆಲೆ ಈ ವಾರ ಪ್ರತಿ ಕ್ವಿಂಟಲ್‌ಗೆ ₹ 500 ರಿಂದ ₹ 1 ಸಾವಿರ ವರೆಗೆ ಹೆಚ್ಚಾಗಿದೆ.

ಬಕ್ರೀದ್‌ ಸಮೀಪಿಸುತ್ತಿರುವ ಕಾರಣ ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಹಾಗೂ ಆಲೂಗಡ್ಡೆ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಔಷಧೀಯ ಗುಣ ಹೊಂದಿದ ಹಾಗೂ ಅಡುಗೆ ಸ್ವಾದ ಹೆಚ್ಚಿಸುವ ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಏರಿಕೆಯಾಗಿದೆ. ಕಳೆದ ವಾರ ಪ್ರತಿ ಕ್ವಿಂಟಲ್‌ಗೆ ₹ 10 ಸಾವಿರ ಇದ್ದ ಬೆಲೆ ₹12 ಸಾವಿರಕ್ಕೆ ಏರಿಕೆ ಕಂಡಿದೆ.

ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಆಲೂಗಡ್ಡೆ ಹಾಗೂ ಹಿರೇಕಾಯಿ ಬೆಲೆ ₹ 1 ಸಾವಿರ ಹೆಚ್ಚಳವಾಗಿದೆ. ತರಕಾರಿ ರಾಜ ಬದನೆಕಾಯಿ ತನ್ನ ಘನತೆ ಹೆಚ್ಚಿಸಿಕೊಂಡರೆ, ಮೆಣಸಿನ ಕಾಯಿ ಗ್ರಾಹಕರ ಪಾಲಿಗೆ ಮತ್ತಷ್ಟು ಖಾರವಾಗಿದೆ. ಹಸಿ ಮೆಣಸಿನಕಾಯಿ, ಬದನೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ನುಗ್ಗೆಕಾಯಿ, ಎಲೆಕೋಸು, ಗಜ್ಜರಿ ಹಾಗೂ ಬೀಟ್‌ರೂಟ್‌ ಬೆಲೆ ಪ್ರತಿಕ್ವಿಂಟಲ್‌ಗೆ ₹ 500 ಹೆಚ್ಚಾಗಿದೆ.

ಬೀನ್ಸ್‌ಗೆ ಎಲ್ಲ ತರಕಾರಿಗಿಂತಲೂ ಹೆಚ್ಚಿನ ಬೆಲೆ ಇದೆ. ಕಳೆದ ವಾರ ₹ 1,800 ಇದ್ದ ಬೆಲೆ ₹ 1,700ಗೆ ಇಳಿದಿದೆ. ಬೀನ್ಸ್, ಸಾಮಾನ್ಯ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಇಲ್ಲ. ಹೂಕೋಸು ಬೆಲೆ ₹ 1,500, ಈರುಳ್ಳಿ, ಟೊಮೆಟೊ. ಸಬ್ಬಸಗಿ, ಮೆಂತೆ ಸೊಪ್ಪು ಹಾಗೂ ಕರಿಬೇವು ಬೆಲೆ ಪ್ರತಿ ₹ 500 ಕಡಿಮೆಯಾಗಿದೆ. ಈ ವಾರ ಕೊತಂಬರಿ ಹಾಗೂ ಪಾಲಕ್‌ ಸ್ಥಿರವಾಗಿದೆ.

ಬೆಳಗಾವಿ ಜಿಲ್ಲೆಯಿಂದ ಗಿಳಿ ಹಸಿರು ಹಾಗೂ ಎಲೆ ಹಸಿರಿನ ಬಣ್ಣದ ಎರಡು ಬಗೆಯ ಹಸಿ ಮೆಣಸಿನಕಾಯಿ ಬೀದರ್‌ ಮಾರುಕಟ್ಟೆಗೆ ಬಂದಿದೆ. ನಾಸಿಕ್‌ನಿಂದ ಈರುಳ್ಳಿ, ಸೋಲಾಪುರದಿಂದ ಬೆಳ್ಳುಳ್ಳಿ, ಹೈದರಾಬಾದ್‌ನಿಂದ ಬೀನ್ಸ್‌, ತೊಂಡೆಕಾಯಿ ಹಾಗೂ ಹಿರೇಕಾಯಿ ಆವಕವಾಗಿದೆ.

ಬದನೆಕಾಯಿ, ತೊಂಡೆಕಾಯಿ, ಕೊತಂಬರಿ, ಕರಿಬೇವು, ಸಬ್ಬಸಗಿ ಸೊಪ್ಪು ಭಾಲ್ಕಿ, ಚಿಟಗುಪ್ಪ ಹಾಗೂ ಹುಮನಾಬಾದ್‌ ತಾಲ್ಲೂಕಿನಿಂದ ಬಂದಿದೆ. ಬೆಲೆ ಹೆಚ್ಚಳ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ

ಈರುಳ್ಳಿ 20-25, 20-25
ಮೆಣಸಿನಕಾಯಿ 70-80, 80-85
ಆಲೂಗಡ್ಡೆ 35-40, 40-50
ಎಲೆಕೋಸು 15-20, 20-25
ಬೆಳ್ಳುಳ್ಳಿ 90-100, 100-120
ಗಜ್ಜರಿ 40-45, 40-50
ಬೀನ್ಸ್‌ 170-180, 160-170
ಬದನೆಕಾಯಿ 40-45, 40-50
ಮೆಂತೆ ಸೊಪ್ಪು 40-50, 40-45
ಹೂಕೋಸು 20-25, 30-40
ಸಬ್ಬಸಗಿ 40-50, 40-45
ಬೀಟ್‌ರೂಟ್‌ 35-40, 40-45
ತೊಂಡೆಕಾಯಿ 40-45, 40-50
ಕರಿಬೇವು 25-30, 20-25
ಕೊತಂಬರಿ 20-25, 20-25
ಟೊಮೆಟೊ 20-25, 15-20
ಪಾಲಕ್‌ 40-50, 45-50
ಬೆಂಡೆಕಾಯಿ 35-40, 40-45
ಹಿರೇಕಾಯಿ 30-30, 30-40
ನುಗ್ಗೆಕಾಯಿ 70-75, 70-80

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು