ಬೀದರ್: ₹1.25 ಲಕ್ಷ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿರುವ ಪೊಲೀಸರು ಪ್ರಕರಣ ಸಂಬಂಧ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
₹1.25 ಲಕ್ಷ ಬೆಲೆಬಾಳುವ 39.28 ಕೆ.ಜಿ ತೂಕದ ಶ್ರೀಗಂಧದ ತುಂಡು, ₹1.30 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನ, ₹1.97 ಲಕ್ಷ ಮೌಲ್ಯದ 9 ಮೊಬೈಲ್ ಸೇರಿದಂತೆ ಒಟ್ಟು ₹4.52 ಲಕ್ಷ ಬೆಲೆಬಾಳುವ ವಸ್ತುಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 2(7)(ಎ), 62, 71(ಎ), 83, 84, 85, 86 ಮತ್ತು 87, 113, 116ರ ಅಡಿ ಪ್ರಕರಣ ದಾಖಲಿಸಲಾಗಿದೆ. ಹುಮನಾಬಾದ್ ಕನಕಟ್ಟಾ ರಸ್ತೆಯ ಎಡಭಾಗದ ದ್ರಾಕ್ಷಿ ತೋಟದ ಪಕ್ಕದ ಜಮೀನಿನಲ್ಲಿ ಶ್ರೀಗಂಧದ ಕಟ್ಟಿಗೆಯನ್ನು ಕಡಿಯುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಹುಮನಾಬಾದ್ ವಲಯ ಅರಣ್ಯ ಅಧಿಕಾರಿ ಶಿವಕುಮಾರ, ಉಪ ವಲಯ ಅರಣ್ಯ ಅಧಿಕಾರಿ ಅಂಬಾದಾಸ, ರೌಫ್ ಖಾನ್, ಸಂತೋಷ, ಗಸ್ತು ಅರಣ್ಯ ಪಾಲಕರಾದ ಗುಂಡೇರಾವ, ಸಂಜುಕುಮಾರ, ಮಾಳಪ್ಪ, ಸದಾನಂದ, ಸೈಯದ್ ಪಾಶಾ, ಪಿಎಸ್‌ಐಗಳಾದ ಉಪೇಂದ್ರಕುಮಾರ, ಸಂತೋಷ ತಾವರಖೇಡ, ಸಿಬ್ಬಂದಿ ಸಚಿನ್, ಸಂಜುಕುಮಾರ, ಬಾಬುರಾಯ, ಬಾಲಾಜಿ ಅವರು ದಾಳಿ ನಡೆಸಿ ಎಲ್ಲಾ ಆರೋಪಿಗಳನ್ನು ಮಾಲಿನ ಸಮೇತ ಹಿಡಿದಿದ್ದಾರೆ ಎಂದು ವಿವರಿಸಿದರು.
ಎರಡು ಬೈಕ್ ಜಪ್ತಿ
ಮಾರ್ಕೆಟ್ ಠಾಣೆ ಪೊಲೀಸರು ಹಳ್ಳದಕೇರಿಯ ಸಂತೋಷ ಸಿದ್ರಾಮ ಪಾಟೀಲ ಎಂಬಾತನನ್ನು ವಶಕ್ಕೆ ಪಡೆದು, ನಗರದ ವಿವಿಧೆಡೆ ಕಳವು ಮಾಡಿದ್ದ ಎರಡು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಅವುಗಳ ಮೌಲ್ಯ ₹2.10 ಲಕ್ಷ ಎಂದು ಮಾಹಿತಿ ಹಂಚಿಕೊಂಡರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.