ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಸೋರುತಿಹುದು ಬ್ರಿಮ್ಸ್ ಮಾಳಿಗೆ, ರೋಗಿಗಳಿಗೆ ತೊಂದರೆ

ಕ್ರಮಕ್ಕೆ ಭ್ರಷ್ಟಾಚಾರ ವಿರೋಧಿ ಸಮಿತಿ ಒತ್ತಾಯ
Last Updated 29 ಡಿಸೆಂಬರ್ 2021, 7:46 IST
ಅಕ್ಷರ ಗಾತ್ರ

ಬೀದರ್: ನಗರದ ಬ್ರಿಮ್ಸ್ ಕಟ್ಟಡ ಅಲ್ಲಲ್ಲಿ ಸೋರುತ್ತಿರುವ ಕಾರಣ ರೋಗಿಗಳು ತೀವ್ರ ತೊಂದರೆ ಅನುಭವಿಸಬೇಕಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ಸಮಿತಿಯ ಕಲ್ಯಾಣ ಕರ್ನಾಟಕ ಪ್ರದೇಶದ ಸಾರ್ವಜನಿಕ ಸಂಪರ್ಕ ಅಧಿಕಾರಿ ಜೇಸನ್ ಮೋಡಿ (ಜೆಪಿ) ಹಾಗೂ ಕ್ಷೇತ್ರ ಅಧಿಕಾರಿ ಪ್ರಶಾಂತ ಜೇಮ್ಸ್ ಗುತ್ತೇದಾರ್ ದೂರಿದ್ದಾರೆ.

ಐದನೇ ಮಹಡಿಯಲ್ಲಿ ಇರುವ ಮೂಳೆ ಶಸ್ತ್ರಚಿಕಿತ್ಸೆ ವಿಭಾಗದ ವಾರ್ಡ್‍ನ ಮೇಲ್ಛಾವಣಿ ಸೋರುತ್ತಿದೆ. ವಾರ್ಡ್‍ನಲ್ಲಿ ನೀರು ನಿಂತುಕೊಂಡು, ರೋಗಿಗಳು ಬೆಡ್ ಮೇಲೆ ಏರದ, ಕೆಳಗೆ ಇಳಿಯದ, ವಾರ್ಡ್‍ನಲ್ಲಿ ಓಡಾಡಲು ಆಗದಂಥ ಸ್ಥಿತಿ ಇದೆ ಎಂದು ಆರೋಪಿಸಿದ್ದಾರೆ.

ಕಟ್ಟಡ ಹೊಸದಾಗಿದ್ದರೂ ಅನೇಕ ವಾರ್ಡ್‍ಗಳ ಮೇಲ್ಛಾವಣಿಗಳು ಸೋರುತ್ತಿವೆ. ನೆಲ ಮಹಡಿ, ಮೂರನೇ ಮಹಡಿ ಸೇರಿದಂತೆ ವಿವಿಧೆಡೆ ಮೇಲ್ಛಾವಣಿ ಸೋರುತ್ತಿರುವುದರಿಂದ ರೋಗಿಗಳು ಹಾಗೂ ಅವರ ಸಂಬಂಧಿಕರು ವಿವಿಧ ವಾರ್ಡ್‍ಗಳಿಗೆ ತೆರಳಲು ಸಮಸ್ಯೆ ಎದುರಿಸಬೇಕಾಗಿದೆ. ನೀರು ಜಿನುಗುತ್ತಿರುವ ಸ್ಥಳಗಳಲ್ಲಿ ಬಕೆಟ್ ಹಾಗೂ ಡಬ್ಬಿ ಇಡಲಾಗಿದೆಯೇ ಹೊರತು ಮೇಲ್ಛಾವಣಿ ದುರಸ್ತಿ ಮಾಡುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಟ್ಕಾ ಜಗಿದು ಎಲ್ಲೆಂದರಲ್ಲಿ ಉಗಿಯದಂತೆ ಎಚ್ಚರಿಕೆ ನೀಡುವ ಕೆಲಸ ಆಗುತ್ತಿಲ್ಲ. ಮೆಟ್ಟಿಲುಗಳ ಗೋಡೆ, ಲಿಫ್ಟ್‍ಗಳಲ್ಲೂ ಗುಟ್ಕಾ ತಿಂದು ಉಗಿಯಲಾಗಿದೆ. ಉಗಿದ ಸ್ಥಳದಲ್ಲಿ ಬಣ್ಣ ಬಳಿಯುವ ಮತ್ತು ಶುಚಿಗೊಳಿಸುವ ಕಾರ್ಯವನ್ನೂ ಮಾಡುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕೆಲಕಡೆ ಸ್ವಚ್ಛಗೊಳಿಸುವ ಬದಲು ಶೌಚಾಲಯಗಳನ್ನೇ ಮುಚ್ಚಲಾಗಿದೆ ಎಂದು ಆರೋಪಿಸಿದ್ದಾರೆ.

ರೋಗಿಗಳಿಗೆ ಕೇಳುವವರೇ ಇಲ್ಲವಾಗಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಲು ಎರಡು ತಾಸು ಹಿಡಿಯುತ್ತಿದೆ. ವಾರ್ಡ್‍ಗಳಲ್ಲಿ ಹರಿದ ಬೆಡ್‍ಗಳು ಇವೆ. ಬೆಡ್ ಮೇಲೆ ಬೆಡ್‍ಶೀಟ್ ಹಾಕುತ್ತಿಲ್ಲ. ವಾರ್ಡ್‍ಗಳಿಗೆ ಹಿರಿಯ ವೈದ್ಯರು ಭೇಟಿ ಕೊಡುವುದು ಕಡಿಮೆ. ಬಹುತೇಕ ಕಿರಿಯ ವೈದ್ಯರೇ ರೋಗಿಗಳ ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ಬಡ ರೋಗಿಗಳ ಅನುಕೂಲಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಿದರೂ ಅದರ ಆಶಯ ಈಡೇರುತ್ತಿಲ್ಲ. ಬ್ರಿಮ್ಸ್ ನಿರ್ದೇಶಕ ಹಾಗೂ ವೈದ್ಯಕೀಯ ಅಧೀಕ್ಷಕರು ಆಡಳಿತ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ ಎಂದು ಆಪಾದಿಸಿದ್ದಾರೆ.

ಸೋರುತ್ತಿರುವ ಆಸ್ಪತ್ರೆ ಕಟ್ಟಡ ದುರಸ್ತಿಪಡಿಸಬೇಕು. ರೋಗಿಗಳ ಬಗ್ಗೆ ಕಾಳಜಿ ವಹಿಸಬೇಕು. ಶೌಚಾಲಯ ಶುಚಿಗೊಳಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಒಟ್ಟಾರೆ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT