ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಬಯೋಮೆಟ್ರಿಕ್‌ ನಿರೀಕ್ಷೆಯಲ್ಲಿ ಶಾಲೆಗಳು

Published 9 ಜೂನ್ 2024, 5:59 IST
Last Updated 9 ಜೂನ್ 2024, 5:59 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಾದ್ಯಂತ ಜೂನ್‌ 1ರಿಂದಲೇ ಸರ್ಕಾರಿ ಶಾಲೆಗಳು ಆರಂಭಗೊಂಡಿವೆ. ಒಂದು ವಾರಕ್ಕಿಂತ ಹೆಚ್ಚು ಸಮಯ ಕಳೆದರೂ ಇದುವರೆಗೆ ಶಾಲೆಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸುವ ಕೆಲಸ ಪೂರ್ಣಗೊಂಡಿಲ್ಲ.

ಶಾಲೆಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸಬೇಕೆಂದು ಮೇ ತಿಂಗಳಲ್ಲೇ ಸರ್ಕಾರ ಆದೇಶ ಹೊರಡಿಸಿತ್ತು. ಶಾಲೆಗಳು ಆರಂಭಗೊಳ್ಳುವುದರೊಳಗೆ ಎಲ್ಲ ಕಡೆಗಳಲ್ಲಿ ಬಯೋಮೆಟ್ರಿಕ್‌ ಪದ್ಧತಿ ಜಾರಿಗೆ ಬರಬೇಕೆಂದು ಸೂಚಿಸಲಾಗಿತ್ತು. ಆದರೆ, ಇದುವರೆಗೆ ಇನ್ನೂ ಹಲವು ಶಾಲೆಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸಲು ಸಾಧ್ಯವಾಗಿಲ್ಲ.

ಜಿಲ್ಲೆಯಲ್ಲಿ ಒಟ್ಟು 1,214 ಪ್ರಾಥಮಿಕ ಮತ್ತು 167 ಸರ್ಕಾರಿ ಪ್ರೌಢಶಾಲೆಗಳಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರಸಕ್ತ ವರ್ಷದ ಜೂನ್‌ 1ರಿಂದ ಜಾರಿಗೆ ಬರುವಂತೆ ಎಲ್ಲ ಶಾಲೆಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸಲು ನಿರ್ಧರಿಸಿದೆ.

ಬಯೋಮೆಟ್ರಿಕ್‌ ಅಳವಡಿಕೆಗೆ ಪ್ರತಿ ಶಾಲೆಗೆ ₹7 ಸಾವಿರ ನಿಗದಿಪಡಿಸಲಾಗಿದೆ. ಸರ್ಕಾರದಿಂದ ಡಿಡಿಪಿಐ ಕಚೇರಿಗೆ ಹಣ ಬರುತ್ತದೆ. ಅಲ್ಲಿಂದ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. ಆಯಾ ಪ್ರಾಥಮಿಕ ಶಾಲೆಗಳವರು ಎಸ್‌ಡಿಎಂಸಿ ಜೊತೆ ಸೇರಿಕೊಂಡು ಬಯೋಮೆಟ್ರಿಕ್‌ ಅಳವಡಿಸಿಕೊಳ್ಳಬೇಕು. ಇನ್ನು, ಪ್ರೌಢಶಾಲೆ ಮುಖ್ಯಶಿಕ್ಷಕರ ಖಾತೆಗೆ ನೇರ ಹಣ ಜಮೆ ಆಗುತ್ತದೆ. ಆದರೆ, ಜಿಲ್ಲೆಯ ಹಲವು ಶಾಲೆಗಳಲ್ಲಿ ಬಯೋಮೆಟ್ರಿಕ್‌ ಇದುವರೆಗೆ ಅಳವಡಿಸಿಲ್ಲ. ಇದನ್ನು ಸ್ವತಃ ಡಿಡಿಪಿಐ ಕಚೇರಿ ಕೂಡ ಒಪ್ಪಿಕೊಂಡಿದೆ. ಆದರೆ, ಎಷ್ಟು ಶಾಲೆಗಳಲ್ಲಿ ಇನ್ನೂ ಅಳವಡಿಸಬೇಕೆಂಬ ಮಾಹಿತಿ ಸದ್ಯ ಅದರ ಬಳಿಯೂ ಇಲ್ಲ. ಆದರೆ, ಜೂನ್‌ 15ರ ಒಳಗೆ ಎಲ್ಲ ಕಡೆಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದೆ.

ಸರ್ಕಾರದ ಆದೇಶದ ಪ್ರಕಾರ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸಲಾಗುತ್ತಿದೆ. ಆದರೆ, ಏಕಾಏಕಿ ಬೇಡಿಕೆ ಹೆಚ್ಚಿರುವುದರಿಂದ ಡೀಲರ್‌ಗಳಿಗೆ ಬಯೋಮೆಟ್ರಿಕ್‌ ಸಕಾಲಕ್ಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಡಿಡಿಪಿಐ ಕಚೇರಿ ಜೂನ್‌ 15ರ ಒಳಗೆ ಕೆಲಸ ಮುಗಿಯಲಿದೆ ಎಂದು ಹೇಳಿದರೂ ಸಹ ಕೆಲಸ ಪೂರ್ಣಗೊಳ್ಳುವುದರ ಬಗ್ಗೆ ಅನುಮಾನ ಕಾಡುತ್ತಿದೆ. ಸಾಧನಗಳು ಪೂರೈಕೆಯಾಗುವುದು ಕಡಿಮೆ ಆಗಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಗೊತ್ತಾಗಿದೆ.

ಶನಿವಾರ ಶಿಕ್ಷಕರು, ವಿದ್ಯಾರ್ಥಿಗಳಿಗೆ ತೊಂದರೆ

ಸೋಮವಾರದಿಂದ ಶುಕ್ರವಾರದ ವರೆಗೆ ಸರ್ಕಾರಿ ಶಾಲೆಗಳು ಬೆಳಿಗ್ಗೆ 10ರಿಂದ ಸಂಜೆ 4.30ರ ವರೆಗೆ ನಡೆಯುತ್ತವೆ. ಶನಿವಾರ ಮಾತ್ರ ಬೆಳಿಗ್ಗೆ 7.30ರಿಂದ 11.50ರ ವರೆಗೆ ಸಮಯ ನಿಗದಿಪಡಿಸಲಾಗಿದೆ. ಇದರಿಂದಾಗಿ ಶಿಕ್ಷಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಬೆಳಿಗ್ಗೆ 7.30ಕ್ಕೆ ಶಾಲೆಗಳು ಆರಂಭಗೊಳ್ಳುವುದರಿಂದ ನಿರ್ದಿಷ್ಟ ಸಮಯಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಅಲ್ಲಿರಬೇಕು. ಆದರೆ, ಕೆಲವು ಗ್ರಾಮಗಳಿಗೆ ಆ ಸಮಯದಲ್ಲಿ ಬಸ್‌ಗಳ ವ್ಯವಸ್ಥೆ ಇಲ್ಲ. ಇದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರು, ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.

‘ಶನಿವಾರ ಮಾತ್ರ ಸಾರಿಗೆ ಸಂಸ್ಥೆ ಅಗತ್ಯ ಇರುವ ಕಡೆಗಳಲ್ಲಿ ಬೆಳಿಗ್ಗೆ ಹಾಗೂ ಮಧ್ಯಾಹ್ನ 12ರ ನಂತರ ಬಸ್‌ಗಳನ್ನು ಓಡಿಸಬೇಕು. ಇದರಿಂದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದ್ದಾರೆ.

ಬಯೋಮೆಟ್ರಿಕ್‌ ಏಕೆ?

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಸಾಕಷ್ಟು ದೂರುಗಳು ಬಂದಿದ್ದವು. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಾಲೆಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸಲು ತೀರ್ಮಾನಿಸಿದೆ. ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗಳಲ್ಲಿ ಇದ್ದು ಪಾಠ ಪ್ರವಚನ ಮಾಡಬೇಕೆನ್ನುವುದು ಸರ್ಕಾರದ ಉದ್ದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT