ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಪ್ರಕರಣ: ಎರಡು ಪಿಸ್ತೂಲ್, ಆರು ಗುಂಡು ವಶ

ಪೊಲೀಸ್‌ ಠಾಣೆಯಲ್ಲಿ ಶಸ್ತ್ರಾಸ್ತ್ರ ಜಮಾ ಮಾಡಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವ‌ಣ್ಣ ಸೂಚನೆ
Last Updated 1 ಏಪ್ರಿಲ್ 2023, 11:41 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ನಾಡ ಪಿಸ್ತೂಲ್ ಇದ್ದರೆ, ಇನ್ನೊಂದು 2018ರಿಂದ ಪರವಾನಿಗೆ ನವಿಕರಿಸಿಕೊಳ್ಳದ ರಿವಾಲ್ವರ್‌ ಇದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್‌.ಎಲ್. ತಿಳಿಸಿದರು.

ಸೋಮವಾರ ರಾತ್ರಿ ನಗರದ ಗುಂಪಾ ರಿಂಗ್ ರಸ್ತೆ ಸಮೀಪ ಯುವಕನೊಬ್ಬ ನಾಡ ಪಿಸ್ತೂಲ್‌ ಇಟ್ಟು ಕೊಂಡಿರುವ ಮಾಹಿತಿ ದೊರೆತ ತಕ್ಷಣ ಗಾಂಧಿ ಗಂಜ್‌ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಆತನಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಈತನ ಬಳಿ ಗುಂಡುಗಳು ಪತ್ತೆಯಾಗಿಲ್ಲ ಎಂದು ನಗರದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ಆರೋಪಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಆದರೂ ಪಿಸ್ತೂಲ್‌ ಅವನ ಬಳಿ ಹೇಗೆ ಬಂತು ಅಥವಾ ಎಲ್ಲಿಂದ ಖರೀದಿಸಿದ್ದಾನೆ ಎನ್ನುವ ಕುರಿತು ತನಿಖೆ ಮುಂದುವರಿದಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದರು.

ಇನ್ನೊಂದು ಪ್ರಕರಣದಲ್ಲಿ ಬಸವಕಲ್ಯಾಣ ತಾಲ್ಲೂಕಿನ ಖಾನಾಪುರ (ಬಿ)–ಹಣಮಂತವಾಡಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸೊಂಟದಲ್ಲಿ ರಿವಾಲ್ವರ್‌ ಸಿಕ್ಕಿಸಿಕೊಂಡು ಹೊರಟಿದ್ದನ್ನು ಗಮನಿಸಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯಿಂದ 1.40 ಲಕ್ಷ ಮೌಲ್ಯದ ರಿವಾಲ್ವರ್ ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಪೊಲೀಸರು ರಿವಾಲ್ವರ್‌ ಪರವಾನಿಗೆ ಕೇಳಿದಾಗ ನಕಲು ಪ್ರತಿಯನ್ನು ತೋರಿಸಿದ್ದಾನೆ. ಮೂಲಪ್ರತಿ ಕೇಳಿದಾಗ ಅದನ್ನು ಎಲ್ಲಿಟ್ಟಿದ್ದೇನೆ ನೆನಪಿಲ್ಲ ಎಂದು ಹಾರಿಕೆ ಉತ್ತರ ಕೊಟ್ಟಿದ್ದ. ತೀವ್ರ ತಪಾಸಣೆಗೆ ಒಳ ಪಡಿಸಿದಾಗ 2018ರಲ್ಲಿ ಜಮ್ಮು ಕಾಶ್ಮೀರದಲ್ಲಿ ಅನುಮತಿ ಪಡೆದು ರಿವಾಲ್ವರ್‌ ಇಟ್ಟುಕೊಂಡಿದ್ದ. ಆದರೆ, ನಂತರದಲ್ಲಿ ಲೈಸನ್ಸ್‌ ನವೀಕರಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದರು.

ಡಿವೈಎಸ್‌ಪಿ ಕೆ.ಎಂ.ಸತೀಶ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹ ತಂಡದ ಅಧಿಕಾರಿ ಗಾಂಧಿ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್ ಹನುಮರೆಡ್ಡೆಪ್ಪ, ಎಎಸ್‌ಐ ವಿನಾಯಕ ಬಾಳೂರೆ, ಹುಮನಾಬಾದ್‌ ಡಿವೈಎಸ್‌ಪಿ ಶಿವಾನಂಸು ರಾಜಪುತ, ಮಂಠಾಳ ವೃತ್ತದ ಸಿಪಿಐ ವಿಜಯಕುಮಾರ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT