ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿ ಮಹಾರಾಜ, ಸವಿತಾ ಮಹರ್ಷಿ ಸ್ಮರಣೆ

ವಿವಿಧೆಡೆ ಜಯಂತಿ ಸರಳ ಆಚರಣೆ, ವೃತ್ತಗಳಿಗೆ ಹೂಗಳಿಂದ ಅಲಂಕಾರ: ಸಂಸದ, ಶಾಸಕರು, ಅಧಿಕಾರಿಗಳು ಭಾಗಿ
Last Updated 20 ಫೆಬ್ರುವರಿ 2021, 6:05 IST
ಅಕ್ಷರ ಗಾತ್ರ

ಬೀದರ್: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಶಿವಾಜಿ ಮಹಾರಾಜ ಜಯಂತಿ ಆಚರಿಸಲಾಯಿತು.

ಕೋವಿಡ್ ಸೋಂಕಿನ ಕಾರಣ ಈ ಬಾರಿ ಮೆರವಣಿಗೆಗೆ ಅವಕಾಶ ಇರಲಿಲ್ಲ. ಸಾಂಕೇತಿಕವಾಗಿ ಜಯಂತಿ ಆಚರಣೆ ಮಾಡಲಾಯಿತು.

ಛತ್ರಪತಿ ಶಿವಾಜಿ ಮಹಾರಾಜ ಸ್ಮಾರಕ ಸಮಿತಿಯು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಶಿವಾಜಿ ವೃತ್ತಕ್ಕೆ ಹೂವುಗಳಿಂದ ಅಲಂಕಾರ ಮಾಡಿತ್ತು. ಜನಪ್ರತಿನಿಧಿಗಳು ಹಾಗೂ ಸಮಾಜದ ಗಣ್ಯರು ಶಿವಾಜಿ ಮಹಾರಾಜ ಮೂರ್ತಿಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವಿಸಿದರು.

ಸಂಸದ ಭಗವಂತ ಖೂಬಾ, ಶಾಸಕ ರಹೀಂಖಾನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುರಳೀಧರರಾವ್ ಕಾಳೆ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಉಪಾಧ್ಯಕ್ಷ ಕೊಂಡಿಬಾರಾವ್ ಪಾಂಡ್ರೆ, ವಕೀಲ ಮದನರಾವ್ ಬಿರಾದಾರ, ಮರಾಠಾ ಕ್ರಾಂತಿ ಮುಖ್ ಮೋರ್ಚಾದ ಸಂಯೋಜಕ ವೆಂಕಟರಾವ್ ಮಯಿಂದೆ, ಮುಖಂಡರಾದ ವಿದ್ಯಾವಾನ್ ಪಾಟೀಲ, ಆರ್.ಎಂ. ಪಾಟೀಲ, ಅಶೋಕ ಚವಾಣ್, ಬಾಲಾಜಿ ಚವಾಣ್ ಹಾಗೂ ರಂಜೀತ್ ಪಾಟೀಲ ಭಾಗವಹಿಸಿದ್ದರು.

ಶಿವಾಜಿ, ಸವಿತಾ ಮಹರ್ಷಿ ಜಯಂತಿ ಅಚರಣೆ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಾಜಿ ಮಹಾರಾಜ ಹಾಗೂ ಸವಿತಾ ಮಹರ್ಷಿ ಅವರ ಜಯಂತಿ ಆಚರಿಸಲಾಯಿತು.

ಸಂಸದ ಭಗವಂತ ಖೂಬಾ ಅವರು ಶಿವಾಜಿ ಮಹಾರಾಜ ಹಾಗೂ ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಹಾಗೂ ಸಮಾಜದ ಮುಖಂಡರು
ಇದ್ದರು.

ಆಣದೂರುವಾಡಿ: ಭಾವಚಿತ್ರಕ್ಕೆ ಪೂಜೆ

ಆಣದೂರುವಾಡಿ(ಜನವಾಡ): ಬೀದರ್ ತಾಲ್ಲೂಕಿನ ಆಣದೂರುವಾಡಿಯಲ್ಲಿ ಸಮಾನ ಮನಸ್ಕ ಯುವಕರು ಶಿವಾಜಿ ಮಹಾರಾಜರ ಜಯಂತಿ ಆಚರಿಸಿದರು.
ಶಿವಾಜಿ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿದರು.

ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ಚೇತನ್ ಸೋರಳ್ಳಿ, ಪ್ರಮುಖರಾದ ದತ್ತು ನಿಟ್ಟೂರ, ಪ್ರದೀಪ ಪಾಟೀಲ, ಮಲ್ಲಿಕಾರ್ಜುನ, ಉಮೇಶ, ಸಂಜು, ಅಂಬಾದಾಸ, ವಿವೇಕ, ಸುನೀಲ್, ಅನಿಲ್, ದಿಲೀಪ್ ಪಾಲ್ಗೊಂಡಿದ್ದರು.

ಗ್ರಾ.ಪಂ. ಕಚೇರಿಯಲ್ಲಿ ಆಚರಣೆ

ಚಳಕಾಪುರ (ಖಟಕಚಿಂಚೋಳಿ): ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಶುಕ್ರವಾರ ಛತ್ರಪತಿ ಶಿವಾಜಿ ಮಹಾರಾಜರ 391ನೇ ಜಯಂತಿ ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ.ಗೀತಾ ನಿಡಗುಂದಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಕಲ್ಲಪ್ಪ ರುದ್ರಪ್ಪನೊರ್, ಮಾರುತಿ ವಾಡೇಕರ್, ಬಲಭೀಮ ಬಸಲಾಪುರೆ, ಗುಂಡಪ್ಪ ಕೋಟೆ, ವಿಲಾಸ ಮಾಲಿಪಾಟೀಲ, ರಾಜಕುಮಾರ ಮಂಗಲಗಿ, ಅರುಣಕುಮಾರ ಕಲ್ಲೂರೆ, ಶಾಂತಕುಮಾರ ಭಾವಿಕಟ್ಟಿ, ರಾಜಕುಮಾರ ತೊಗರೆ, ಮುಖಂಡರಾದ ಸುಭಾಷ ಕೆನಾಡೆ, ವಿಶ್ವನಾಥ ಬಾಯಪ್ಪ, ಸಂಗಮೇಶ ಕಾರಾಮುಂಗೆ, ಶ್ರೀನಿವಾಸ ಕಾಂಬಳೆ ಹಾಗೂ ಸುನಿಲ್ ಬೆಟ್ಟದ ಇದ್ದರು.

‘ಆದರ್ಶ ಎಲ್ಲರಿಗೂ ಮಾದರಿ’

ಚಿಟಗುಪ್ಪ: ‘ದೇಶ ಸಂರಕ್ಷಣೆಯ ಮಹಾನ್ ನಾಯಕ, ಹಿಂದೂ ಧರ್ಮ ರಕ್ಷಕ, ಸಾಹಸಿ ರಾಜನಾಗಿದ್ದ ಶಿವಾಜಿ ಮಹಾರಾಜರ ಆದರ್ಶ ಎಲ್ಲರಿಗೂ ಮಾದರಿ’ ಎಂದು ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಅಭಿಪ್ರಾಯಪಟ್ಟರು.

ಇಲ್ಲಿಯ ಪುರಸಭೆ ಕಚೇರಿಯಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಸವಿತಾ ಮಹರ್ಷಿ ಮತ್ತು ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಮುಖ್ಯಾಧಿಕಾರಿ ಶ್ರೀಪಾದ್‌ ರಾಜಪುರೋಹಿತ್‌ ಮಾತನಾಡಿ,‘ಸರ್ವಧರ್ಮ ಸಮನ್ವಯತೆಯ ಸಿದ್ಧಾಂತದ ತಳಹದಿಯ ಮೇಲೆ ಶಿವಾಜಿ ಮಹಾರಾಜರು ಆಡಳಿತ ನಡೆಸಿದ್ದರು’ ಎಂದರು.

ಪುರಸಭೆ ಸದಸ್ಯೆ ಪಾರ್ವತಿ ರಮೇಶ, ಸದಸ್ಯರಾದ ನಸೀರ್‌ ಅಹ್ಮದ್‌, ಸಿಬ್ಬಂದಿ ನರಸಿಂಹಲು, ಪೂಜಾ, ಅಶೋಕ್‌, ಚಿದಾನಂದ್‌, ರವಿಕುಮಾರ, ವೈಶಾಲಿ, ನರೇಶ್‌ ಘನಾತೆ, ದಿಲೀಪ, ನಾಗೇಂದ್ರ, ರವಿ ಭಯ್ಯ, ಸತೀಶ್‌ ಕುಮಾರ್‌, ಮಹಾದೇವ ಭಯ್ಯ, ಗಣ್ಯರಾದ ಶರಣು ಗಡಮಿ, ಸಚಿನ ಮಠಪತಿ ಹಾಗೂ ಶಾಮರಾವ್‌ ಭುತಾಳೆ
ಇದ್ದರು.

‘ಯುವಜನರಿಗೆ ಪ್ರೇರಣೆಯಾಗಲಿ’

ಔರಾದ್: ‘ಛತ್ರಪತಿ ಶಿವಾಜಿ ಮಹಾರಾಜರ ದೇಶಭಕ್ತಿ ಇಂದಿನ ಯುವಜನರಿಗೆ ಪ್ರೇರಣೆಯಾಗಬೇಕು’ ಎಂದು ತಹಶೀಲ್ದಾರ್ ಎಂ.ಚಂದ್ರಶೇಖರ್ ಹೇಳಿದರು.

ತಾಲ್ಲೂಕು ಆಡಳಿತ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿವಾಜಿಯ ಧೈರ್ಯ ವಿರೋಧಿಗಳಿಗೆ ನಡುಕು ಹುಟ್ಟಿಸುವಂತಿತ್ತು. ಅವರು ತಮ್ಮ ಸ್ವಂತ ಬಲದಿಂದ ಸಾಮ್ರಾಜ್ಯ ಕಟ್ಟಿದವರು. ಅವರು ತಮ್ಮ ತಾಯಿ ಹಾಗೂ ಗುರು ಹಿರಿಯರ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡಿದ್ದರು’ ಎಂದು ತಿಳಿಸಿದರು.

ಡಾ. ಕಲ್ಲಪ್ಪ ಉಪ್ಪೆ ಮಾತನಾಡಿ ‘ಶಿವಾಜಿಗೆ ದೇಶ ಹಾಗೂ ಈ ದೇಶದ ಸಂಸ್ಕೃತಿ ಹಾಗೂ ಅಪಾರ ಗೌರವ ಹಾಗೂ ಅಭಿಮಾನ ಇತ್ತು. ದೇಶದ ಆಡಳಿತ ಪರಕೀಯರ ಕೈಯಲ್ಲಿ ಇರುವುದನ್ನು ಅವರಿಗೆ ಸಹಿಸಲಾಗುತ್ತಿರಲಿಲ್ಲ. ಅಂಥ ದೇಶ ಭಕ್ತನ ಜಯಂತಿ ನಾವು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ ಚವಾಣ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಪವಾರ, ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಜುಕುಮಾರ ಜುಮ್ಮಾ, ಧುರೀಣ ಶಿವಾಜಿರಾವ ಪಾಟೀಲ, ಬಂಟಿ ದರಬಾರೆ, ರಹೀಮಸಾಬ್, ರಾಜಕುಮಾರ ಹಮಿಲಾಪುರೆ, ರಾಮಶೆಟ್ಟಿ, ಶಿವಶರಣಪ್ಪ ಹಾಗೂ ಸೂರ್ಯಕಾಂತ ಸಿಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT