ಗುರುವಾರ , ಮೇ 19, 2022
20 °C
ಜನ್ಮದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಪಾಟೀಲ ಅಭಿಮತ

ಸಿದ್ಧಗಂಗಾ ಶ್ರೀಗಳ ಸೇವೆ ವಿಶ್ವಕ್ಕೆ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ‘ಶಿವಕುಮಾರ ಸ್ವಾಮೀಜಿ ಮಠದ ಪೀಠಾಧ್ಯಕ್ಷರಾದ ನಂತರ ಸುಮಾರು ಒಂಬತ್ತು ದಶಕಗಳ ಕಾಲ ನಡೆಸಿಕೊಂಡು ಬಂದ ಅನ್ನ, ಜ್ಞಾನ ದಾಸೋಹ ಸೇವೆ ಜಗತ್ತಿಗೆ ಮಾದರಿ ಆಗಿದೆ’ ಎಂದು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತೇಗಂಪೂರ ಗ್ರಾಮದಲ್ಲಿ ಸಿದ್ದಗಂಗಾ ಶ್ರೀ ಸ್ಮಾರಕ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿಯ 115ನೇ ಜನ್ಮದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀಗಳು ಮಠದ ಸಂಪೂರ್ಣ ಜವಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠದ ಭೂಮಿಯೆಲ್ಲ ಮಳೆ ಆಧಾರಿತವಾಗಿತ್ತು. ಅತಿವೃಷ್ಟಿ, ಅನಾವೃಷ್ಟಿ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲ ಧೈರ್ಯದಿಂದ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಯಿಂದ ಭಿನ್ನಹ, ದವಸ, ಧಾನ್ಯಗಳನ್ನು ತಂದು ವಿದ್ಯಾರ್ಥಿ ನಿಲಯ, ಪ್ರಸಾದ ನಿಲಯ, ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಗಂಧವನ್ನು ಪಸರುವಂತೆ ಮಾಡಿದ್ದರು ಎಂದು ತಿಳಿಸಿದರು.

ಸಿದ್ಧಗಂಗಾ ಶ್ರೀಗಳು ಬಡ, ದೀನ, ದಲಿತರಿಗೆ ಹಾಗೂ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಮಾನವೀಯ ಮೌಲ್ಯಗಳನ್ನು ಕಲಿಸಿ ನಾಡಿನ ಅಭಿವೃದ್ಧಿಗೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಅಂಥ ಮಹಾನ್‌ ಶರಣರ, ನಡೆದಾಡುವ ದೇವರ ಆಶ್ರಯದಲ್ಲಿ ಬೆಳೆದ ನಾವೆಲ್ಲರೂ ಪುಣ್ಯವಂತರು ಎಂದು ತಿಳಿಸಿದರು.

ಮೆರವಣಿಗೆ: ಗ್ರಾಮದ ಹನುಮಾನ ಮಂದಿರದಿಂದ ಲಕ್ಷ್ಮಿ ಮಂದಿರದವರೆಗೆ ಶಿವಕುಮಾರ ಸ್ವಾಮೀಜಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ರಾತ್ರಿ ಮಹಿಳೆಯರು ಭಜನೆ ನಡೆಸಿಕೊಟ್ಟರು. ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ ರಾಜು ಕುಂಬಾರ, ಚನ್ನಪ್ಪಾ ಪಾಟೀಲ, ಅನ್ನಪೂರ್ಣ ಪ್ರಭಾ, ದತ್ತಾತ್ರಿ ಪೊಲೀಸ್‌ ಪಾಟೀಲ, ಸುಭಾಷ ಪಾಟೀಲ, ದತ್ತಾತ್ರಿ ಬಿರಾದಾರ, ನಂದು ಪಾಟೀಲ, ಸುಶೀಲ ಪಾಟೀಲ, ಪಾರ್ವತಿ ಬಿರಾದಾರ, ಮಲ್ಲಮ್ಮ ಪಾಟೀಲ ಹಾಗೂ ಸಂಪಾವತಿ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.