ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿ ಯುಗಪುರುಷ: ಅಕ್ಕ ಅನ್ನಪೂರ್ಣ ನುಡಿ

ಸಿದ್ಧಗಂಗಾ ಶ್ರೀ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ
Last Updated 1 ಏಪ್ರಿಲ್ 2022, 12:36 IST
ಅಕ್ಷರ ಗಾತ್ರ

ಬೀದರ್: ಬಸವಣ್ಣನವರ ನಂತರದ ಎರಡನೇ ಯುಗಪುರುಷ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ. ಬಸವಣ್ಣವರು ದಾಸೋಹ ಪರಿಕಲ್ಪನೆ ಪ್ರತಿಪಾದಿಸಿದರೆ, ಶಿವಕುಮಾರ ಸ್ವಾಮೀಜಿ ಅದನ್ನು ಅನುಷ್ಠಾನಗೊಳಿಸಿದರು ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ನುಡಿದರು.

ನಗರದ ಶಿವನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.‌

ಸಿದ್ಧಗಂಗಾ ಶ್ರೀಗಳ ಕಾಲವು ಎರಡನೇ ಬಸವ ಯುಗ ಆಗಿತ್ತು. 900 ವರ್ಷಗಳ ನಂತರ ಕಾಯಕ, ದಾಸೋಹ ಸೇರಿದಂತೆ ಬಸವಾದಿ ಶರಣರ ತತ್ವಗಳನ್ನು ಮತ್ತೆ ಚಾಚೂತಪ್ಪದೇ ಆಚರಣೆಗೆ ತಂದ ಶ್ರೇಯ ಅವರದ್ದಾಗಿತ್ತು ಎಂದು ತಿಳಿಸಿದರು.

ಲಿಂಗಪೂಜೆ, ಜಂಗಮ ದಾಸೋಹವೇ ಅವರಿಗೆ ಸಂಭ್ರಮವಾಗಿತ್ತು. ಭಕ್ತರು ಕೊಟ್ಟ ಧನ, ಧಾನ್ಯದಿಂದ ನಿರಂತರ ಆಶ್ರಯ, ಅನ್ನ, ಅಕ್ಷರ ದಾಸೋಹ ಮಾಡಿ ಅಸಂಖ್ಯಾತ ಬಡ ವಿದ್ಯಾರ್ಥಿಗಳ ಬದುಕು ಹಸನಾಗಿಸಿದ್ದರು. ಅವರ ದಾಸೋಹ ತತ್ವವನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕಿದೆ ಎಂದರು.

ದಾಸೋಹ ಪದದ ಅರ್ಥ ವಿಶಾಲವಾಗಿದೆ. ಅದನ್ನು ಶಿಕ್ಷಣ, ಅನ್ನಪ್ರಸಾದಕ್ಕೆ ಸೀಮಿತಗೊಳಿಸಲಾಗದು. ದುಖದಲ್ಲಿರುವ ವ್ಯಕ್ತಿಗೆ ಧೈರ್ಯ ತುಂಬವುದು. ನೊಂದವರಿಗೆ ಸಾಂತ್ವನ ಹೇಳುವುದು ಸಹ ಒಂದು ರೀತಿಯ ದಾಸೋಹವಾಗಿದೆ ಎಂದು ತಿಳಿಸಿದರು.

ಶಿವಕುಮಾರ ಸ್ವಾಮೀಜಿ ಅವರ ಸಮಾಜೋಧಾರ್ಮಿಕ ಕಾರ್ಯಗಳನ್ನು ವರ್ಣಿಸಲು ಪದಗಳೇ ಸಾಲವು.
ಸಿದ್ಧಗಂಗಾ ಶ್ರೀ ಈ ಭುವಿಗೆ ಬಂದ ದೇವರಾಗಿದ್ದರು ಎಂದು ಎಂದು ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಬಾಬು ರೆಡ್ಡಿ ಬಣ್ಣಿಸಿದರು.

ಸಿದ್ಧಗಂಗಾ ಶ್ರೀಗಳ ಆದರ್ಶ ತತ್ವಗಳನ್ನು ಎಲ್ಲರೂ ನಿಜ ಜೀವನದಲ್ಲಿ ಆಚರಣೆಗೆ ತರಬೇಕು ಎಂದು ಚಿಂತಕ ಎಂ. ಚಂದ್ರಕಾಂತ ಮಸಾನಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಟಿ.ಎಂ. ಮಚ್ಚೆ ಮಾತನಾಡಿದರು. ಸಾಹಿತಿ ಮೇನಕಾ ಪಾಟೀಲ ಅವರು ಡಾ. ಶಿವಕುಮಾರ ಸ್ವಾಮೀಜಿ ಅವರ ಕುರಿತು ಉಪನ್ಯಾಸ ನೀಡಿದರು.

ಲಿಂಗಾಯತ ಮಹಾಮಠದ ಪ್ರಭುದೇವರು ಸಮ್ಮುಖ ವಹಿಸಿದ್ದರು. ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪೂರ, ರಾಜ್ಯ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಾರೆಡ್ಡಿ ನಾಗೂರಾ, ನಾಗಭೂಷಣ ಹುಗ್ಗೆ, ಡಾ. ಸಿ. ಆನಂದರಾವ್, ನಾಗಶೆಟ್ಟಿ ಧರಂಪೂರ, ಶಿವಪುತ್ರ ಪಟಪಳ್ಳಿ, ಬಾಲಾಜಿ ಬಿರಾದಾರ, ಸಂಜುಕುಮಾರ ಜಮಾದಾರ್, ವಿನೋದ ಪಾಟೀಲ ಚಾಂಬೋಳ, ಸಂಜುಕುಮಾರ ಹುಣಜಿ, ಸಾಯಿಕುಮಾರ ಅಷ್ಟೂರು ಇದ್ದರು.

ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ನಿರೂಪಿಸಿದರು. ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT