ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಾಟೆಯಾದರೆ ಜಿಲ್ಲಾಡಳಿತವೇ ಹೊಣೆ

ರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆ ಅಧ್ಯಕ್ಷ ಉಮೇಶಕುಮಾರ ಸ್ವಾರಳ್ಳಿಕರ್ ಎಚ್ಚರಿಕೆ
Last Updated 25 ಜನವರಿ 2021, 11:42 IST
ಅಕ್ಷರ ಗಾತ್ರ

ಬೀದರ್‌: ‘ಶೋಷಿತರ ಐಕ್ಯತಾ ಸಮಾವೇಶಕ್ಕೆ ಅನುಮತಿ ಕೊಡದಿದ್ದರೆ ಮುಂದಿನ ಆಗು ಹೋಗುಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಲಿದೆ’ ಎಂದು ರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆ ಅಧ್ಯಕ್ಷ ಉಮೇಶಕುಮಾರ ಸ್ವಾರಳ್ಳಿಕರ್ ಎಚ್ಚರಿಸಿದರು.

‘ಜನವರಿ 26ರಂದು ನಗರದ ಅಂಬೇಡ್ಕರ್‌ ವೃತ್ತದ ಬಳಿ ಆಯೋಜಿಸಿರುವ ಶೋಷಿತರ ಐಕ್ಯತಾ ಸಮಾವೇಶಕ್ಕೆ ವೇದಿಕೆ ಹಾಕಲು ಅನುಮತಿ ಕೊಡುವ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಮಾವೇಶದ ಸ್ಥಳಕ್ಕೆ ಅನುಮತಿ ಕೊಡುವ ವಿಷಯದಲ್ಲಿ ಅಧಿಕಾರಿಗಳು ರಾಜಕಾರಣಿಗಳಂತೆ ವರ್ತಿಸುತ್ತಿರುವುದನ್ನುಸಹಿಸಲಾಗದು’ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಜನವರಿ 9ರಂದು ನಗರದ ಅಂಬೇಡ್ಕರ್ ವೃತ್ತ ಸಮೀಪದ ಪ್ರವಾಸಿ ಮಂದಿರದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ನನ್ನ (ಉಮೇಶಕುಮಾರ ಸ್ವಾರಳ್ಳಿಕರ್) ಅಧ್ಯಕ್ಷತೆಯಲ್ಲಿ ಸಭೆ ಸೇರಿ 72ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆ ಅಡಿಯಲ್ಲಿ ಶೋಷಿತರ ಐಕ್ಯತಾ ಸಮಾವೇಶ ಮಾಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಜ.11ರಂದು ಸಮಾವೇಶದ ವೇದಿಕೆ ನಿರ್ಮಿಸಲು ಅನುಮತಿ ಕೋರಿ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಅದರೆ 13ರಂದು ಕೆಲ ಮುಖಂಡರು ಭೇಟಿ ಮಾಡಿದ ನಂತರ ನಮಗೆ ಅನುಮತಿ ಕೊಡುವ ಬದಲು ಬೇರೆಯವರಿಗೆ ಅನುಮತಿ ಕೊಟ್ಟಿದ್ದಾರೆ. ನಮಗೆ ನೀಡಿದ್ದ ಅನುಮತಿ ರದ್ದುಪಡಿಸಿ 16ರಂದು ಹಿಂಬರಹ ನೀಡಿದ್ದಾರೆ. ಇದೀಗ ಜಿಲ್ಲಾಧಿಕಾರಿ ಗಮನಕ್ಕೆ ತಂದು ಅನುಮತಿ ನೀಡುವ ಸುಳ್ಳು ಭರವಸೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಭ್ರಾತೃತ್ವ ವೇದಿಕೆ ಪದಾಧಿಕಾರಿಗಳ ಮನವಿಗೆ ಸ್ಪಂದಿಸಿ ತೆಲಂಗಾಣದ ಸಂಸದ ಅಸಾದುದ್ದೀನ್ ಓವೈಸಿ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ಇದೇ ಕಾರಣಕ್ಕೆ 22ರಂದು ಪೊಲೀಸರು ನಮ್ಮನ್ನು ಠಾಣೆಗೆ ಕರೆಸಿ ಓವೈಸಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸದಂತೆ ಒತ್ತಡ ಹಾಕಿದ್ದಾರೆ. ಅವರನ್ನು ಕರೆಯಿಸಿದರೆ ಗಲಾಟೆ ಆಗಲಿದೆ ಎಂದು ಪೊಲೀಸರೇ ಹೇಳುತ್ತಿದ್ದಾರೆ’ ಎಂದು ಹೇಳಿದರು.

‘ಮಂಗಳವಾರ ಮಧ್ಯಾಹ್ನದ ವರೆಗೂ ಅನುಮತಿಗಾಗಿ ಕಾಯುತ್ತೇವೆ. ಕೊಡದಿದ್ದರೆ ಈಗಾಗಲೇ ಗೊತ್ತುಪಡಿಸಿದ ಸ್ಥಳದಲ್ಲೇ ವೇದಿಕೆ ಸಿದ್ಧಪಡಿಸಿ ಕಾರ್ಯಕ್ರಮ ನಡೆಸುತ್ತಿವೆ. ಅಲ್ಲಿ ಎರಡರಿಂದ ಮೂರು ಸಾವಿರ ಜನರನ್ನು ಸೇರಿಸುತ್ತೇವೆ’ ಎಂದರು.

ವೇದಿಕೆ ಗೌರವ ಅಧ್ಯಕ್ಷ ಸೈಯದ್ ವಹೀದ್ ಲಖನ್ ಮಾತನಾಡಿ, ‘ಒಳ್ಳೆಯ ಉದ್ದೇಶಕ್ಕಾಗಿ ಸಮಾವೇಶ ನಡೆಸುತ್ತಿದ್ದೇವೆ. ನಗರಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರು ಸಮಾವೇಶಕ್ಕೆಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ನಮ್ಮ ವೈರಿ, ಬಿಜೆಪಿ ಕಡು ವೈರಿ. ಎಲ್ಲವೂ ಅವರು ಹೇಳಿದಂತೆ ನಡೆಯಬೇಕೆಂದರೆ ಆಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ನಿಗದಿಪಡಿಸಿದ ಸ್ಥಳದಲ್ಲೇ ಶಾಂತಿಯುತವಾಗಿ ಸಮಾವೇಶ ನಡೆಸುತ್ತೇವೆ’ ಎಂದು ಹೇಳಿದರು.

ರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆ ಕಾರ್ಯಾಧ್ಯಕ್ಷ ಅಭಿ ಕಾಳೆ, ಉಪಾಧ್ಯಕ್ಷರಾದ ರಾಜಕುಮಾರ ಮೂಲಭಾರತಿ, ರವಿ ವಾಘಮಾರೆ, ಚಂದ್ರಕಾಂತ ನಿರಾಟೆ, ಪ್ರಕಾಶ ಬಲಾಂಡೆ, ಪ್ರಧಾನ ಕಾರ್ಯದರ್ಶಿ ಸಂದೀಪ ಕಾಂಟೆ, ರವಿಕುಮಾರ ವಾಘಮಾರೆ, ನರಸಿಂಗ್ ಸಾಮ್ರಾಟ್, ಚಂದ್ರಕಾಂತ ನಿರಾಟೆ, ಸಂತೋಷ ಏಣಕೂರೆ, ಓಂಪ್ರಕಾಶ ಭಾವಿಕಟ್ಟಿ, ಮಲ್ಲಿಕಾರ್ಜುನ ಚಿಟ್ಟಾ, ಖಂಡಪ್ಪ ಪಾತರಪಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT