ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವರ ಕಲ್ಯಾಣವಾದರೆ ‘ಕಲ್ಯಾಣ ಕರ್ನಾಟಕ’ದ ಆಶಯ ಸಾಕಾರ

Last Updated 29 ಫೆಬ್ರುವರಿ 2020, 10:21 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾ 18ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹುಮನಾಬಾದ್‌ನ ಸೋಮನಾಥ ಯಾಳವಾರ ಜಿಲ್ಲೆಯ ಪ್ರಗತಿಪರ ಚಿಂತನೆಯ ಸಾಹಿತಿಗಳಲ್ಲೊಬ್ಬರು.

ಹುಮನಾಬಾದ್‌ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ, ಕನ್ನಡ ತರಬೇತಿ ಶಿಬಿರದ ನಿರ್ದೇಶಕರಾಗಿ, ಬೌದ್ಧ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅನುಭವ ಅವರೊಂದಿಗೆ ಇದೆ. ಜಿಲ್ಲಾ 5ನೇಯ ಶರಣ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಾಗಿದ್ದ ಅವರು 51 ಕೃತಿಗಳನ್ನು ಸಂಪಾದಿಸಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ಮುಂದುವರಿದಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರಯುಕ್ತ ಸೋಮನಾಥ ಯಾಳವಾರ ಅವರು ತಮ್ಮ ಕಾರ್ಯಬಾಹುಳ್ಯದ ನಡುವೆಯೂ ‘ಪ್ರಜಾವಾಣಿ’ ಯೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ. ಅವರ ಸಂದರ್ಶನದ ತುಣುಕುಗಳು ಇಲ್ಲಿವೆ.

* ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಹೆಸರು ಬಂದಿದೆ. ಕಲ್ಯಾಣದ ಆಶಯ ಸಾಕಾರಕ್ಕೆ ಏನು ಮಾಡಬೇಕು?

ಕಲ್ಯಾಣ ಕರ್ನಾಟಕ ಎನ್ನುವ ಹೆಸರೇ ರೋಮಾಂಚನಕಾರಿಯಾಗಿದೆ. ಇದನ್ನು ನಾವೆಲ್ಲರೂ ಸಂಭ್ರಮದಿಂದ ಸ್ವಾಗತಿಸಿದ್ದೇವೆ. ಇದಕ್ಕೆ ಕಾರಣ ಬಸವಾದಿ ಶರಣರ ಕಾಲದಲ್ಲಿ ಆಗಿದ್ದ ಮಾನವ ಕಲ್ಯಾಣದ ಕಾರ್ಯಗಳ ಪುನರುತ್ಥಾನ ಆಗಲೆಂಬ ಆಶಯ.

ಕಲ್ಯಾಣವೆಂಬುದು ಸರ್ವ ರಂಗದಲ್ಲಿ ಒಳ್ಳೆಯದನ್ನು ಮಾಡುವುದೇ ಆಗಿದೆ. ಕಲ್ಯಾಣ ಕರ್ನಾಟಕ ಹೆಸರಿನ ಆಶಯವು ಸಾಕಾರವಾಗಬೇಕಾದರೆ, ವ್ಯಕ್ತಿ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಕಾರ್ಯಗಳೂ ಆಗಬೇಕು.

ಇಲ್ಲಿಯ ಜೀವನ ಶೈಲಿಯಲ್ಲಿಯೂ ಶರಣರ ಕಾಲದಂತೆ ಬದಲಾವಣೆಯಾದರೆ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಸ್ವಾವಲಂಬಿ ಬದುಕು ಕಟ್ಟಿಕೊಂಡರೆ ಈ ಆಶಯ ಸಾಕಾರವಾಗಬಹುದು.

* ಪ್ರಸ್ತುತ ಕವಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿದೆಯೇ?

ಹೌದು, ಹಾಗೆನಿಸುತ್ತಿದೆ. ಈಗಾಗಲೇ ಪನ್ಸಾರೆ, ದಾಬೋಳ್ಕರ್, ಡಾ.ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಕೊಲೆಗಳಾಗಿವೆ. ಹಲವು ಪ್ರಗತಿಶೀಲರು ಮಾತನಾಡಿದಾಗ, ಬರವಣಿಗೆಯ ಮೂಲಕ ಪ್ರತಿಕ್ರಿಯಿಸುವುದನ್ನು ಬಿಟ್ಟು ಬೆದರಿಕೆ ಹಾಕಿ ಮಾತಾಡದಂತೆ ಹೆದರಿಸುವ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

* ಇತ್ತೀಚಿನ ದಿನಗಳಲ್ಲಿ ಸರ್ಕಾರದ ಅನುದಾನ ಖರ್ಚು ಮಾಡಲೆಂದೇ ಸಮ್ಮೇಳನ ನಡೆಯುತ್ತಿವೆ ಅಲ್ಲ?

ಇಲ್ಲ ಹಾಗನ್ನಲಾಗದು. ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನಗಳು ಸರ್ಕಾರಿ ಅನುದಾನ ಹಾಗೂ ಸ್ಥಳೀಯರ ಸಹಾಯ, ಸಹಕಾರದೊಂದಿಗೆ ಜರುಗುತ್ತವೆ. ಕೆಲವು ಸಲ ಸಮ್ಮೇಳನಗಳು ಯೋಜನಾ ಬದ್ಧವಾಗಿ ನಡೆಯದಿದ್ದರೆ ಹಾಗೆನಿಸುತ್ತದೆ. ಸಮ್ಮೇಳನಗಳು ಪ್ರಾದೇಶಿಕ ಪರಂಪರೆಯನ್ನು ತಿಳಿಸುತ್ತವೆ. ಸ್ಥಳೀಯ ಹಲವು ಸಮಸ್ಯೆಗಳನ್ನು ಎತ್ತಿ ತೋರಿಸುವುದರೊಂದಿಗೆ ಸರ್ಕಾರ ಹಾಗೂ ಸಂಬಂಧಪಟ್ಟವರ ಗಮನ ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಒಮ್ಮೊಮ್ಮೆ ಸಂಘಟಕರು ಅವಸರದಲ್ಲಿ ಸಮ್ಮೇಳನ ಅಸ್ತವ್ಯಸ್ತವಾಗಿ ನಡೆಸಿದರೆ ಹಾಗೆನಿಸುತ್ತದೆ ಅಷ್ಟೇ.

* ಪ್ರಸ್ತುತ ಕಲ್ಯಾಣ ಕರ್ನಾಟಕದಲ್ಲಿ ಮೌಲಿಕ ಸಾಹಿತ್ಯ ಏಕೆ ಹೊರ ಬರುತ್ತಿಲ್ಲ.

ಕಲ್ಯಾಣ ಕರ್ನಾಟಕವೇ ಮೌಲಿಕ ಸಾಹಿತ್ಯದ ಮಹಾಕಣಜ. ಕನ್ನಡ ಸಾಹಿತ್ಯದ ಮೂಲ ಬೇರಿರುವುದೇ ಇಲ್ಲಿ. ಕನ್ನಡದ ಮೊದಲ ಉಪಲಬ್ಧ ಲಾಕ್ಷಣಿಕ ಕೃತಿ ಕವಿರಾಜಮಾರ್ಗ ಹುಟ್ಟಿದ್ದು ಇಲ್ಲಿ. ಮೊದಲ ಗದ್ಯ ಗ್ರಂಥ ವಡ್ಡಾರಾಧನೆ ರಚಿಸಿದವರು ಬೀದರ್ ಜಿಲ್ಲೆಯ ಹಳ್ಳಿಖೇಡದವರು. ಜಗತ್ತಿನ ಅತಿ ಶ್ರೇಷ್ಠ ವಾದ ವಚನಗಳು ಹುಟ್ಟಿದ್ದು ಇಲ್ಲಿಯೇ.

ನವೋದಯ, ಬಂಡಾಯಕ್ಕೆ ಸಂಬಂಧಿಸಿದಂತೆ ಸಿದ್ದಯ್ಯ ಪುರಾಣಿಕ, ಶಾಂತರಸ, ಗೀತಾ ನಾಗಭೂಷಣ, ಶೈಲಜಾ ಉಡಚಣ, ಚನ್ನಣ್ಣ ವಾಲೀಕಾರ ಮೊದಲಾದ ಅಸಂಖ್ಯ ಸಾಹಿತಿಗಳು ಇದ್ದಾರೆ. ಆದರೆ, ಕಲ್ಯಾಣ ಕರ್ನಾಟಕದ ಕೃತಿಕಾರರ ಕೃತಿಗಳನ್ನು ವಿಮರ್ಶೆ ಮಾಡುವ ವಿದ್ವಾಂಸರು ಕಡಿಮೆ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃತಿಗಳನ್ನು ಪರಿಚಯಿಸುವ ಪತ್ರಿಕೆಗಳ ಕೊರತೆ ಇದೆ. ಹೀಗಾಗಿ ಈ ಭಾಗದ ಸಾಹಿತ್ಯದ ಮೌಲಿಕತೆಯ ಪರಿಚಯ ಆಗುತ್ತಿಲ್ಲ ಎನಿಸುತ್ತದೆ.

*12ನೇ ಶತಮಾನದ ವಚನಕಾರರಂತೆ ಆಧುನಿಕ ವಚನಕಾರರು ನುಡಿದಂತೆ ನಡೆಯುತ್ತಿಲ್ಲ, ಇದಕ್ಕೆ ಕಾರಣ ಏನು?

ಆಧುನಿಕ ವಚನಕಾರರು 12ನೆಯ ಶತಮಾನದ ಶರಣರಲ್ಲ. ಇವರು ಕೇವಲ ವಚನ ರಚನೆಕಾರರು. ಇವರು ಅನುಭವಿಗಳೂ ಅಲ್ಲ; ಅನುಭಾವಿಗಳೂ ಅಲ್ಲ. ಇದಕ್ಕೆ ಆಧುನಿಕತೆ ಮಾತ್ರ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT